ರಾಜ್ಯ ಬಿಜೆಪಿಯಲ್ಲಿ ಭಾರಿ ಬೆಳವಣಿಗೆಗಳು ನಡೀತಿದೆ. ಬೆಂಗಳೂರಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಇಂದು ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮಾಜಿ ಶಾಸಕರು, ಹಾಲಿ ಶಾಸಕರು ಹಾಗೂ ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.
ರಾಜ್ಯಾಧ್ಯಕ್ಷರ ಸಭೆಯಲ್ಲಿ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಲಾಯ್ತು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಮುಂದಿನ ವಾರದಿಂದ ನಾನು ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಸಾರ್ವಜನಿಕ ಸಭೆ ಮಾಡುತ್ತೇನೆ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧಿಸಿದಂತೆ ಕಾರ್ಯಕರ್ತರ ಸಭೆ ಮಾಡುತ್ತೇವೆ. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಮುಂದಿನ ವಾರ ದಿನಕ್ಕೆ ಎರಡು ಜಿಲ್ಲೆಯಂತೆ ಪ್ರವಾಸ ಮಾಡುತ್ತೇನೆ ಅಂತ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಮಾಜಿ ಶಾಸಕರು, ಪರಾಜಿತರ ಸಭೆ ನಡೆಸಿದ್ದೇವೆ. ನಾನು ಅಧ್ಯಕ್ಷನಾದ ಮೇಲೆ ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಎದುರಿಸಬೇಕು ಅಂತಾ ಚರ್ಚೆ ಮಾಡಿದ್ದೇವೆ. ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳು ಇರುತ್ತವೆ. ಅದೆಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಸೇರಿ ಎಲ್ಲಾ ಹಿರಿಯರು ಮಾರ್ಗದರ್ಶನ ನೀಡಿದ್ದಾರೆ. ಪಕ್ಷವನ್ನು ಬಲಪಡಿಸಲು ನಾನು ಚರ್ಚೆ ಮಾಡಿದ್ದೇವೆ ಅಂತ ಹೇಳಿದ್ದಾರೆ.
ಯತ್ನಾಳ್ ಟೀಂ ಪ್ರತ್ಯೇಕವಾಗಿ ಸಭೆ ಸಮಾರಂಭಗಳನ್ನು ಮಾಡುತ್ತಿದೆ. ಹೈಕಮಾಂಡ್ ನಾಯಕರೂ ಕೂಡ ಯತ್ನಾಳ್ ಟೀಂ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಎಲ್ಲಾ ನಾಯಕರ ಜೊತೆಗೆ ಸಭೆ ನಡೆಸಿ ಹಿಡಿತ ಸಾಧಿಸುವುದು, ಈ ಮೂಲಕ ಎದುರಾಳಿಗಳ ಶಕ್ತಿ ಕುಂದಿಸುವ ಯೋಜನೆ ರೂಪಿಸಲಾಗಿದೆ. ರಾಜ್ಯಾದ್ಯಂತ ನಾಯಕರನ್ನು ಸಭೆ ಮಾಡಿ ಹಿಡಿತಕ್ಕೆ ತೆಗೆದುಕೊಂಡರೆ ಹೈಕಮಾಂಡ್ಗೂ ಕೂಡ ಸ್ಪಷ್ಟ ಸಂದೇಶ ರವಾನೆ ಆಗಲಿದ್ದು, ವಿಜಯೇಂದ್ರ ಕುರ್ಚಿಗೆ ಯಾವುದೇ ಕಂಟಕ ಬರುವುದು ಸಾಧ್ಯವೇ ಇಲ್ಲ. ಎದುರಾಳಿಗಳ ಜೊತೆಗೆ ಬಡಿದಾಡುವ ಬದಲು, ತಮ್ಮದೇ ಶಕ್ತಿ ವೃದ್ಧಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ.