ಬೆಂಗಳೂರು: ಈ ಹಿಂದೆ ನೀವು ಕೂಡ ಕಾಂಗ್ರೆಸ್‌ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್, ಫುಟ್ ಬಾಲ್ ಆಡಿಲ್ಲವೇ? ನಿಮ್ಮ ಸುಪುತ್ರರು ದಿನ ಬೆಳಗಾದರೆ ಸಿದ್ಧಾಂತ ಬದಲಿಸಿಕೊಂಡು ಯಾರ ಜತೆಗಾದರೂ ಸಂಬಂಧ ಬೆಳೆಸುತ್ತಾರೆ. ಹಾಗಿದ್ದರೆ, ಸಿದ್ಧಾಂತ ನಂಬಿರುವ ಕಾರ್ಯಕರ್ತರ ಕತೆ ಏನು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಿಸ್ಟರ್ ಡಿ.ಕೆ. ಶಿವಕುಮಾರ್, ಜೆಡಿಎಸ್ ಅನ್ನು ದುರ್ಬಲಗೊಳಿಸುತ್ತೇನೆ ಎಂಬುದು ನಿಮ್ಮ ಭ್ರಮೆ. ನಿಮ್ಮ ಆಟ ನಡೆಯಲ್ಲ ಎಂದು ಎಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಹಳ ಗೌರವದಿಂದ ನಿಮ್ಮ ಮಾತನ್ನು ನಾನು ಸ್ವೀಕರಿಸುತ್ತೇನೆ. ಆದರೆ, ಈ ಹಿಂದೆ ನೀವೂ ಕಾಂಗ್ರೆಸ್‌ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್, ಫುಟ್ ಬಾಲ್ ಆಡಿಲ್ಲವೇ? ಈಚೆಗೆ ನಮ್ಮ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗಿ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲವೇ? ಅಷ್ಟಕ್ಕೂ ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು’ ಎಂದು ಕೇಳಿದರು.