ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತವರ ತಂಡದಿಂದ ಒತ್ತಡದಿಂದ ಕೊನೆಗೂ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತು. ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯ್ತು. ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್ ವಿಸ್ತರಣೆ ಕೂಗು ಕೇಳಿ ಬಂತು. ಈ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್ ಕೊನೆಗೂ ಅಳೆದು ತೂಗಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಮಾಡಿಯೇಬಿಡ್ತು. ಸಂಪುಟ ರಚನೆ ಬಳಿಕ ಬಿ. ಶ್ರೀರಾಮುಲು, ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರು ಖಾತೆ ಬದಲಾವಣೆಗೆ ಪಟ್ಟುಹಿಡಿದಿದ್ದರು. ಇದರ ಬೆನ್ನಲ್ಲೀಗ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಬಿಜೆಪಿ ಸರ್ಕಾರದ ಸಂಪುಟ ರಚನೆ ವೇಳೆ ಸುಮಾರು 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿಲ್ಲ. ಇದುವೇ ರಾಜ್ಯ ಬಿಜೆಪಿ ಸಂಕಷ್ಟ ತಂದೊಡ್ಡಿದೆ. ಹೇಗೆಂದರೆ, 2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಬೇಕು ಎಂದು ಹೊರಟ ಬಿಜೆಪಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ರಚಿಸಿರುವ ಸಂಪುಟವೇ ಸೋಲಿಸಲಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಳೆಯ ಮೈಸೂರು ಭಾಗಕ್ಕೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ, ಹಾಸನ, ಕೋಲಾರ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಇಲ್ಲಿನ ಯಾವುದೇ ಶಾಸಕರಿಗೆ ಮಂತ್ರಿ ಸ್ಥಾನ ನೀಡದ ಪರಿಣಾಮ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಜನ ಮತ ಹಾಕೋದು ಡೌಟು. ಹೀಗಾಗಿ ಈ ಭಾಗದಲ್ಲಿ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಆತಂಕ ಬಿಜೆಪಿಗಿದೆ.
ಯಾವುದೇ ಪಕ್ಷವಾಗಲೀ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯತೆ ನೀಡಬೇಕು. ಆದರೆ, ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯತೆ ಸಿಕ್ಕಿಲ್ಲ. ಈ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದಾಗಲೀ ಸರಿಯಾಗಿ ಅನುದಾನವೂ ಬಿಡುಗಡೆ ಮಾಡಲು ಬಿಜೆಪಿ ಆಸಕ್ತಿ ತೋರುತ್ತಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿದೆಯಾದರೂ ರಾಜ್ಯ ಬಿಜೆಪಿಗೆ ಹಳೆ ಮೈಸೂರು ಭಾಗದ ವೋಟು ಇದು ತಂದು ಕೊಡೋದಿಲ್ಲ ಎಂಬುದು ಮಾತ್ರ ಖಾತ್ರಿಯಾಗಿದೆ.

ಸಂಪುಟ ರಚನೆಗೆ ಮುನ್ನ ಆಲೋಚಿಸದ ಬಿಜೆಪಿ ಹೈಕಮಾಂಡ್ ಈಗ ವೋಟ್ ಬ್ಯಾಂಕ್ ತೆಲೆಕೆಡಿಸಿಕೊಂಡಿದೆ. ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳದೇ ಚೂರು ಯೋಚಿಸಿದ್ದರೂ ಹಳೆಯ ಮೈಸೂರು ಭಾಗದ ವೋಟ್ ಬ್ಯಾಂಕ್ ಸಂಪೂರ್ಣವಾಗಿ ಬಿಜೆಪಿ ತೆಕ್ಕೆಗೆ ಬರುತ್ತಿತ್ತು ಎಂಬುದು ಕೆಲವರ ಅಭಿಪ್ರಾಯ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಳೆಯ ಮೈಸೂರು ಭಾಗದಲ್ಲಿ ಒಂದು ಹಂತದಲ್ಲಿ ಎಡವಿದೆ. ಕಾಂಗ್ರೆಸ್ ಕೂಡ ತನ್ನ ವೋಟ್ ಬ್ಯಾಂಕ್ ಕಳೆದುಕೊಂಡಿದೆ. ಎರಡು ಪಕ್ಷಗಳನ್ನು ಕಂಡರೆ ಒಕ್ಕಲಿಗ ಸಮುದಾಯದ ಒಂದು ಸಣ ಕೆಂಡಕಾರುತ್ತಿದೆ. ಇಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ. ಹೀಗಿರುವಾಗ ಬಿಜೆಪಿ ಇಲ್ಲಿಗೆ ಆಧ್ಯತೆ ಮೇರೆಗೆ ಪ್ರಾತಿನಿಧ್ಯತೆ ನೀಡಬೇಕಾಗಿತ್ತು ಎಂಬುದು ಇನ್ನು ಹಲವರ ವಾದ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಅವಕಾಶವನ್ನು ಬಿಜೆಪಿ ಕೈಚೆಲ್ಲಿಕೊಂಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದಾಗಲೇ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕಿತ್ತು. ಸಲೀಸಾಗಿ ಸೆಳೆಯಬೇಕಾಗಿದ್ದ ಒಕ್ಕಲಿಗರನ್ನು ಎದುರು ಹಾಕಿಕೊಂಡು ಈಗ ಒಂದು ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ಕಳೆದುಕೊಂಡಿದೆ ಬಿಜೆಪಿ ಎಂಬ ಚರ್ಚೆ ಜೋರಾಗಿದೆ.










