ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜಕೀಯವನ್ನು ತ್ಯಜಿಸಲು ಹಲವಾರು ಬಾರಿ ಯೋಚಿಸಿದ್ದೇನೆ ಮತ್ತು ರಾಜಕೀಯವು ಈಗ ಸಾಮಾಜಿಕ ಅಥವಾ ಅಭಿವೃದ್ಧಿ ಬದಲಾವಣೆಗಿಂತ ಅಧಿಕಾರದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ. ರಾಜಕೀಯದ ಬಗ್ಗೆ ನಕರಾತ್ಮಕ ಅಂಶಗಳನ್ನೇ ಮಾತನಾಡಿರುವ ಅವರ ಮಾತು ಕೇಳಿದ ಬಳಿಕ ಅವರು ರಾಜಕೀಯ ನಿವೃತ್ತಿ ಸುಳಿವು ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ ಅವರು, ‘ರಾಜಕೀಯ ಪದದ ಅರ್ಥವೇನೆಂದು ನಾವು ಅರ್ಥಮಾಡಿಕೊಳ್ಳಬೇಕು. ರಾಜಕೀಯವೆಂದರೆ ಸಮಾಜೀಕರಣ (ಸಾಮಾಜಿಕ ಕೆಲಸ), ರಾಷ್ಟ್ರೀಕರಣ (ರಾಷ್ಟ್ರ ನಿರ್ಮಾಣ), ವಿಕಾಸ (ಅಭಿವೃದ್ಧಿ ಕೆಲಸ) ಅಥವಾ ಕೇವಲ ಸತಾಕರಣ (ಪವರ್ ಪ್ಲೇ)?’ ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಕಾಲದಲ್ಲಿ (ಮಹಾತ್ಮ ಗಾಂಧಿಯವರ ಕಾಲದಿಂದ) ರಾಜಕೀಯವು ಸಾಮಾಜಿಕ ಚಳವಳಿಯ ಭಾಗವಾಗಿತ್ತು ಎಂದು ಅವರು ಹೇಳಿದರು. ಇದು ಸಾಮಾಜಿಕ ಕೆಲಸ ಮತ್ತು ರಾಷ್ಟ್ರ ನಿರ್ಮಾಣದೊಂದಿಗೆ ಹೆಚ್ಚು ಸಂಬಂಧವನ್ನು ಹೊಂದಿದೆ ಎಂದು ಅವರು ನುಡಿದಿದ್ದಾರೆ.
“ಆದರೆ ಈಗ ನಾವು 100 ಪರ್ಸೆಂಟ್ ಪವರ್ ಪ್ಲೇ ಅನ್ನು ನೋಡುತ್ತಿದ್ದೇವೆ” ಎಂದು ಗಡ್ಕರಿ ಹೇಳಿದರು, ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ನಿಜವಾದ ಸಾಧನವಾಗಿರಬೇಕು ಎಂದು ಅವರು ಹೇಳಿದ್ದಾರೆ.
ನಾಗ್ಪುರದ ಸಂಸದ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳಂತಹ ಕೇಂದ್ರ ಸಚಿವಾಲಯಗಳನ್ನು ನಿರ್ವಹಿಸುತ್ತಿರುವ ಗಡ್ಕರಿ ಅವರು ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ವಿಧಾನ ಪರಿಷತ್ತಿನ ಸದಸ್ಯ (ಎಂಎಲ್‌ಸಿ) ಗಿರೀಶ್ ಗಾಂಧಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗಿರೀಶ್ ಭಾವು ರಾಜಕೀಯದಲ್ಲಿದ್ದಾಗ ನಾನು ಅವರನ್ನು ನಿರುತ್ಸಾಹಗೊಳಿಸುತ್ತಿದ್ದೆ ಎಂದು ಗಡ್ಕರಿ ಹೇಳಿದ್ದಾರೆ. ನಾನು ಯಾವಾಗ ರಾಜಕೀಯ ತೊರೆಯಬೇಕು ಅಂತಲೂ ಸಾಕಷ್ಟು ಯೋಚಿಸಿದ್ದೆ. ಜೀವನದಲ್ಲಿ ರಾಜಕೀಯಕ್ಕಿಂತ ಉತ್ತಮವಾದ ಅನೇಕ ಕೆಲಸಗಳಿವೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮಾಜಿ ಎಂಎಲ್‌ಸಿ ಗಿರೀಶ್ ಗಾಂಧಿ 2014 ರಲ್ಲಿ ಪಕ್ಷವನ್ನು ತೊರೆದರು. ಗಡ್ಕರಿ ಅವರ ಆಪ್ತರಾಗಿದ್ದ ಗಾಂಧಿ ಅವರು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲು ನಿರಾಕರಿಸಿದ್ದಾರೆ.
ರಾಜಕೀಯವು ವಿರೋಧಾಭಾಸಗಳು, ಒತ್ತಾಯಗಳು ಮತ್ತು ಮಿತಿಗಳ ಆಟವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಮುಂದೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ ಎಂದರು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತಿದೆ ಎಂದು ಅವರು ಹೇಳಿದ್ದಾರೆ.