
ಡೆಂಘಿ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಸೂಚನೆ
ಧಾರವಾಡ, ಜುಲೈ12: ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ವಿಶೇಷವಾಗಿ ಡೆಂಘಿ ಜ್ವರ ಪ್ರಕರಣಗಳ ಬಗ್ಗೆ ನಿಗಾ ವಹಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ಡೆಂಘಿ ಪೀಡಿತರ ವಾರ್ಡ್ಗೆ ಭೇಟಿ ನೀಡಿದ ಸಚಿವ ಲಾಡ್ ಅವರು, ರೋಗಿಗಳನ್ನು ಮಾತನಾಡಿಸಿದರು. ಮಕ್ಕಳ ವಾರ್ಡ್ ಗೆ ಭೇಟಿ ನೀಡಿದ ಅವರು, ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಚಾರಿಸಿದರು. ಮಕ್ಕಳ ತಾಯಿಂದಿರಿಂದ ಮಾಹಿತಿ ಪಡೆದರು. ಎಲ್ಲಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಹೆಚ್ಚುವರಿ ಬೆಡ್ ಬೇಕಾದರೆ ವ್ಯವಸ್ಥೆ ಮಾಡಲು ವರದಿ ನೀಡಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಸಂಗಪ್ಪ ಗಾಬಿ ಅವರಿಗೆ ಸೂಚನೆ ನೀಡಿದರು.

ಪಾರ್ಕಿಂಗ್ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ: ಆಸ್ಪತ್ರೆ ಆವರಣದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಸೂಚನೆ ನೀಡಿದರು. ನೋಂದಣಿ ಕೇಂದ್ರದಲ್ಲಿ ಹೆಚ್ಚಿನ ಕೌಂಟರ್ ತೆರೆದರೆ ದಟ್ಟಣೆ ಕಡಿಮೆ ಮಾಡಬಹುದು. ಕ್ಯೂ ಕಡಿಮೆ ಮಾಡಬಹುದು. ಸ್ವಚ್ಛತೆಗೆ ಆದ್ಯತೆ ನೀಡಬಹುದು ಎಂದರು.
ಇದೇ ವೇಳೆ ಆಸ್ಪತ್ರೆಯಲ್ಲಿ ಕೆಲವು ಸೌಲಭ್ಯಗಳ ಅಗತ್ಯವಿದೆ ಎಂದು ವೈದ್ಯಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು.

ಸಿಎಸ್ಆರ್ ನಿಧಿ ಕೊಡಿಸಲು ವ್ಯವಸ್ಥೆ ಮಾಡಲಾಗುವುದು. ಅದರಿಂದ ಏನು ಮಾಡಬಹುದು ಎಂಬುದರ ಬಗ್ಗೆ ತಿಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಿಮ್ಸ್ ತೀವ್ರ ನಿಗಾ ಘಟಕಕ್ಕೆ ಭೇಟಿ
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕೆಎಂಸಿ)ಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ದಾಖಲಾದ ರೋಗಿಗಳ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳಿಂದ ಸಚಿವ ಲಾಡ್ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಆರ್ ಜೆ, ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ್ ಟಿ ಕೆ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
