ಬೆಂಗಳೂರು:ದೇಶಮಟ್ಟದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು 11 ವರ್ಷಗಳ ಬಳಿಕ ಇಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಆರೋಪಿ ಎಂದು ಬಂಧನಕ್ಕೊಳಗಾಗಿದ್ದ ಸಂತೋಷ್ ರಾವ್ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ ಮಹತ್ವದ ಆದೇಶವನ್ನು ಪ್ರಕಟಿಸಿದ್ದಾರೆ. ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ದೋಷಮುಕ್ತ ಎಂದು ಘೋಷಿಸಲಾಗಿದೆ .
ಧರ್ಮಸ್ಥಳದ ಪಾಂಗಳ ಗ್ರಾಮದ ನಿವಾಸಿಯಾಗಿದ್ದ ಸೌಜನ್ಯ ಗೌಡ ಧರ್ಮಸ್ಥಳದ ಎಸ್ಡಿಎಂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. 2012ರ ಅಕ್ಟೋಬರ್ 9ರಂದು ಕಾಲೇಜು ಮುಗಿಸಿ ಸೌಜನ್ಯಾ ಮನೆಗೆ ಬಂದಿರಲಿಲ್ಲ. ಮಾರನೇ ದಿನ ಸೌಜನ್ಯ ಮೃತದೇಹ ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ ಪತ್ತೆಯಾಗಿತ್ತು .
ಈ ಪ್ರಕರಣದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಆದರೆ ಈ ಪ್ರಕರಣವನ್ನು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿ ಬರುತ್ತಿದ್ದಂತೆಯೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು.