ಧರ್ಮಸ್ಥಳ (Dharmasthala) ಗ್ರಾಮದ ನೇತ್ರಾವತಿ ಪಾಂಗಳ ಎಂಬಲ್ಲಿ ಯೂಟ್ಯೂಬರ್‌ಗಳ (Youtuber) ಮೇಲೆ ಹಲ್ಲೆ (Assault) ನಡೆದಿದೆ. ಮೂವರು ಯೂಟ್ಯೂಬರ್‌ಗಳ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ಈ ಹಲ್ಲೆ ಖಂಡಿಸಿ ಪಾಂಗಳ ಕ್ರಾಸ್ ಬಳಿ ಜನರು ಸೇರಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ಚದುರಿಸಿದ್ದಾರೆ.

ಧರ್ಮಸ್ಥಳದ ವಿಚಾರವಾಗಿ ಬೇಕಾಬಿಟ್ಟಿ ಸುದ್ದಿ ಬಿತ್ತರಿಸುವ ಆರೋಪ ಸಂಬಂಧ ಯೂಟ್ಯೂಬರ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ರು. ಕೆಲವು ಯೂಟ್ಯೂಬರ್ಸ್ ಧರ್ಮಸ್ಥಳದ ಬಗ್ಗೆ ಸುಳ್ಳು ಮತ್ತು ಅಸಂಬದ್ಧ ಮಾಹಿತಿಗಳನ್ನು ನೀಡಿದ್ದಾರೆ. ಈ ಹಿನ್ನೆಲೆ ಕೂಡಲೇ ಯೂಟ್ಯೂಬರ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆ ಬಳಿಕ ಆಗಮಿಸಿದ ಎಸ್.ಪಿ ಅರುಣ್ ಕೆ., ದೂರು ನೀಡುವಂತೆ ತಿಳಿಸಿ, ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಗಲಾಟೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿದೆ.

ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಹಾಗೂ ಅವರ ವಾಹನಗಳಿಗೆ ಹಾನಿ ಮಾಡಿದ ಪ್ರಕರಣ ದಾಖಲಾಗಿದೆ. ಜೊತೆಗೆ ಖಾಸಗಿ ನ್ಯೂಸ್ ಚಾನೆಲ್‌ನ ವರದಿಗಾರನ ಮೇಲಿನ ಹಲ್ಲೆ, ಪೊಲೀಸ್ ಠಾಣೆ ಆವರಣದಲ್ಲಿ ಗುಂಪು ಸೇರಿ ಶಾಂತಿ ಭಂಗ ಮತ್ತು ಆಸ್ಪತ್ರೆಯ ಮುಂದೆ ಕಾನೂನು ಬಾಹಿರವಾಗಿ ಗುಂಪು ಸೇರಿದ್ದರ ಬಗ್ಗೆಯೂ ಕೇಸ್ ದಾಖಲಾಗಿದೆ.
ಸದ್ಯ ವೀಡಿಯೋಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸುವಂತೆ ಎಸ್.ಪಿ ಅರುಣ್ ಸೂಚನೆ ನೀಡಿದ್ದಾರೆ. ಇನ್ನು ಈ ಬಗ್ಗೆ ಎಸ್‌ಪಿ ಅರುಣ್ ಮಾತನಾಡಿ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.