COVID-19 ಸಾಂಕ್ರಾಮಿಕವು ದಿನಗೂಲಿ ನೌಕರರು, ಅಸಂಘಟಿತ ಕಾರ್ಮಿಕರು, ಖಾಸಗಿ ಕಂಪೆನಿಯ ಕೆಲಸಗಾರರನ್ನಷ್ಟೇ ಅಲ್ಲದೆ ಈ ದೇಶದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ತೀವ್ರವಾಗಿ ಹೊಡೆತ ಕೊಟ್ಟಿದೆ. ಆದರೆ ಕುಂಠಿತ ಆರ್ಥಿಕ ಬೆಳವಣಿಗೆಗಳ ಮಧ್ಯೆಯೂ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಭೂಮಿ ಖರೀದಿಯಲ್ಲಿ ಕಿಂಚಿತ್ತೂ ಕಡಿಮೆ ಆಗಿಲ್ಲ. ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಗ್ರೂಪ್ ‘ಅನಾರಾಕ್’ ಸಂಗ್ರಹಿಸಿದ ಮಾಹಿತಿಯ ಪ್ರಕಾರ M3M ಗ್ರೂಪ್, ಗೋದ್ರೇಜ್ ಪ್ರಾಪರ್ಟೀಸ್, ಕೆ. ರಹೇಜಾ ಕಾರ್ಪ್ ಮತ್ತು ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಸೇರಿದಂತೆ ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಕಳೆದ ವರ್ಷದ ಅತಿ ಹೆಚ್ಚು ಭೂಮಿ ಖರೀದಿದಾರರು.
ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ಘಟಕಗಳು 2020ರ ಮೂರನೇ ತ್ರೈಮಾಸಿಕ ಮತ್ತು ನವೆಂಬರ್ 2021 ರ ನಡುವೆ ಭಾರತದ ಅಗ್ರ ಏಳು ನಗರಗಳಾದ್ಯಂತ 1,757 ಎಕರೆ ಪ್ರದೇಶವನ್ನು, ಒಟ್ಟು 45 ಪ್ರತ್ಯೇಕ ಭೂ ವ್ಯವಹಾರಗಳನ್ನು ಮಾಡಿವೆ. ಒಟ್ಟು ವಹಿವಾಟು ನಡೆಸಿದ ಭೂಪ್ರದೇಶಗಳಲ್ಲಿ, ಸರಿಸುಮಾರು 69% ಅಥವಾ 1,205 ಎಕರೆಗಳನ್ನು ಈ ನಗರಗಳಾದ್ಯಂತ ಬಹು ವಸತಿ ಯೋಜನೆಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ಅನಾರಾಕ್ ಡೇಟಾದ ಪ್ರಕಾರ, ಈ ವ್ಯವಹಾರಗಳ ಒಟ್ಟು ಅಭಿವೃದ್ಧಿ ಸಾಮರ್ಥ್ಯವು ಕನಿಷ್ಠ 45-50 ಮಿಲಿಯನ್ ಚದರ ಅಡಿ ವಸತಿ ಪ್ರದೇಶಗಳನ್ನು ನಿರ್ಮಿಸುವಷ್ಟಿದೆ.
ಗೋದ್ರೇಜ್ ಪ್ರಾಪರ್ಟೀಸ್ ಬೆಂಗಳೂರು ಒಂದರಲ್ಲೇ ₹700 ಕೋಟಿ ಮೌಲ್ಯದ ಭೂಮಿಯನ್ನು ಖರೀದಿಸಿದೆ. ಎಂ3ಎಂ ನೋಯ್ಡಾದಲ್ಲಿ ₹ 900 ಕೋಟಿ ಮೌಲ್ಯದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಮುಂಬೈ ಮೆಟ್ರೋಪಾಲಿಟನ್ ರೀಜನ್ (MMR) 768 ಎಕರೆ ಪ್ರದೇಶವನ್ನು ಒಳಗೊಂಡ 11 ಭೂ ವ್ಯವಹಾರಗಳಿಗೆ ಸಾಕ್ಷಿಯಾಗಿದೆ. ಇದು ಉನ್ನತ ನಗರಗಳ ಒಟ್ಟಾರೆ 1,205 ಎಕರೆ ವಸತಿ ಯೋಜನೆಯ 64% ಪಾಲಾಗುತ್ತದೆ.
ಎನ್‌ಸಿಆರ್ ನಾಲ್ಕು ಪ್ರತ್ಯೇಕ ಡೀಲ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ಒಟ್ಟು ಭೂ ವ್ಯವಹಾರಗಳ 12% ರಷ್ಟನ್ನು 150 ಎಕರೆಗಳ ವಸತಿ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದು ಗುರುಗ್ರಾಮ್‌ನಲ್ಲಿ ಒಟ್ಟು 77 ಎಕರೆಗೆ ಮೂರು ಡೀಲ್‌ಗಳನ್ನು ಮತ್ತು ನೋಯ್ಡಾದಲ್ಲಿ 73 ಎಕರೆಗಳಿಗೂ ಹೆಚ್ಚಿನ ಒಪ್ಪಂದವನ್ನು ಒಳಗೊಂಡಿದೆ. ಕೋಲ್ಕತ್ತಾವು ಜಂಟಿ ಅಭಿವೃದ್ಧಿ ಒಪ್ಪಂದದ ಆಧಾರದ ಮೇಲೆ 92 ಎಕರೆಗಳಷ್ಟು ಎರಡು ಪ್ರತ್ಯೇಕ ಒಪ್ಪಂದಗಳನ್ನು ಕಂಡಿದೆ. ಹೈದರಾಬಾದ್ ಒಟ್ಟು 78 ಎಕರೆಗೆ ಎರಡು ಪ್ರತ್ಯೇಕ ಭೂ ವ್ಯವಹಾರಗಳಿಗೆ ಸಾಕ್ಷಿಯಾಗಿದೆ.
ಬೆಂಗಳೂರು ವಸತಿ ಅಭಿವೃದ್ಧಿಗೆ ಮೀಸಲಿಟ್ಟ ಒಟ್ಟು 59 ಎಕರೆಗೆ ಐದು ಪ್ರತ್ಯೇಕ ಡೀಲ್‌ಗಳನ್ನು ಮಾಡಲಾಗಿದೆ. ಪುಣೆ ಸುಮಾರು 42 ಎಕರೆಗೆ ಮೂರು ಡೀಲ್‌ಗಳನ್ನು ಕಂಡಿದೆ ಮತ್ತು ಚೆನ್ನೈ 16 ಎಕರೆಗಳಿಗೂ ಹೆಚ್ಚು ಒಪ್ಪಂದವನ್ನು ಕಂಡಿದೆ.
ಗೋದ್ರೇಜ್ ಪ್ರಾಪರ್ಟೀಸ್, ಸನ್‌ಟೆಕ್ ರಿಯಾಲ್ಟಿ, ಆಶಿಯಾನಾ ಹೌಸಿಂಗ್, ಮಹೀಂದ್ರಾ ಲೈಫ್‌ಸ್ಪೇಸಸ್, M3M ಗ್ರೂಪ್ ಮತ್ತು ರನ್‌ವಾಲ್ ಡೆವಲಪರ್‌ಗಳು ವಸತಿ ಅಭಿವೃದ್ಧಿಗಾಗಿ ಲ್ಯಾಂಡ್ ಪಾರ್ಸೆಲ್‌ಗಳನ್ನು ಖರೀದಿಸಿದ ಉನ್ನತ ಡೆವಲಪರ್ ಸಂಸ್ಥೆಗಳಾಗಿವೆ.
“COVID-19 (ಮಾರ್ಚ್ 2020) ಮೊದಲು ಏಳೆಂಟು ತಿಂಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮವು ಲಿಕ್ವಿಡಿಟಿ ಸಮಸ್ಯೆಗಳೊಂದಿಗೆ ಸೆಣಸಾಡುತ್ತಿದ್ದರಿಂದ ಸೀಮಿತ ಭೂ ವ್ಯವಹಾರಗಳನ್ನು ಕಂಡಿತ್ತು. ನಂತರ COVID-19ನಿಂದ ಈ ವಲಯವು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಸ್ಥಗಿತವಾಗಿತ್ತು. ಸುಮಾರು ಒಂದು ವರ್ಷದವರೆಗೆ, ಡೆವಲಪರ್‌ಗಳು ತಮ್ಮ ಸಾಲಗಳನ್ನು ಪಾವತಿಸಲು ಅಥವಾ ಹಿಂದೆ ಪ್ರಾರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿದ್ದರು” ಎನ್ನುತ್ತಾರೆ ಅನರಾಕ್ ಗ್ರೂಪ್ ಉಪಾಧ್ಯಕ್ಷ ಸಂತೋಷ್ ಕುಮಾರ್.
“ಅದಾಗ್ಯೂ 2020 ರ ಮೂರನೇ ತ್ರೈಮಾಸಿಕದಿಂದ ಚಟುವಟಿಕೆಯು ಪುನರಾರಂಭವಾಯಿತು ಮತ್ತು ಹಿಂದೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ಒಪ್ಪದ ಹಲವಾರು ಭೂಮಾಲೀಕರು ತಮ್ಮ ಭೂಮಿ ಮಾರಾಟಕ್ಕೆ ಇರಿಸಿದರು. ಪರಿಣಾಮವಾಗಿ, ಕಳೆದ ಒಂದು ವರ್ಷದಲ್ಲಿ ಕೆಲವು ಪ್ರಮುಖ ಡೀಲ್‌ಗಳು ಹೆಚ್ಚು ಕಡಿಮೆ ಹಿಂದಿನ ವರ್ಷದ ಅದೇ ಬೆಲೆಯಲ್ಲಿ ನಡೆದಿವೆ” ಎಂದು ಅವರು ಹೇಳಿದ್ದಾರೆ.
1,757 ಎಕರೆಗಿಂತ ಹೆಚ್ಚಿನ ಒಟ್ಟು 45 ಭೂ ವ್ಯವಹಾರಗಳಲ್ಲಿ, 411 ಎಕರೆಯಂತೆ ಕನಿಷ್ಠ ಆರು ಒಪ್ಪಂದಗಳನ್ನು ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಪಾರ್ಕ್ ಮತ್ತು ಟೌನ್‌ಶಿಪ್‌ಗಾಗಿ ಮೀಸಲಿಡಲಾಗಿದೆ.
ಇದರಲ್ಲಿ, ಗುರುಗ್ರಾಮ್‌ನಲ್ಲಿ 275 ಎಕರೆಗೂ ಹೆಚ್ಚು ಡೀಲ್‌ಗಳನ್ನು, ಚೆನ್ನೈನಲ್ಲಿ 83 ಎಕರೆಗಳಿಗೂ ಹೆಚ್ಚು ಮತ್ತು ಹೌರಾ ಮತ್ತು ಎಂಎಂಆರ್‌ನಲ್ಲಿ ಕ್ರಮವಾಗಿ 31 ಎಕರೆ ಮತ್ತು 22 ಎಕರೆಗೆ ತಲಾ ಒಂದು ಒಪ್ಪಂದಗಳನ್ನು ಮಾಡಲಾಗಿದೆ.
ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಕೋವಿಡ್ ನಂತರ ಹದಗೆಟ್ಟಿದೆ. ಉದ್ಯೋಗ ಕಡಿತ, ನಿರುದ್ಯೋಗ ಎಂದೆಲ್ಲಾ ದೇಶದ ಜನತೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರಗಳಿಗೆ ನ್ಯಾಯವಾಗಿ ಸಲ್ಲಬೇಕಿದ್ದ ಜಿಎಸ್‌ಟಿ ಪಾಲನ್ನು ನೀಡಲು ಒಕ್ಕೂಟ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ದೇಶದ ಆಮದು ಮತ್ತು ರಫ್ತು ವ್ಯವಹಾರದಲ್ಲಿ ಹಿಂದೆಂದೂ ಕಂಡಿರದಷ್ಟು ಅಂತರವಿದೆ. ಹೀಗಿದ್ದೂ ಭೂಮಿಯ ದಾಹ ಇರುವ ರಿಯಲ್ ಎಸ್ಟೇಟ್ ಕಂಪೆನಿಗಳ ವ್ಯವಹಾರದಲ್ಲಿ, ಖರೀದಿಯಲ್ಲಿ ಚೂರೂ ವ್ಯತ್ಯಯ ಆಗಿಲ್ಲ ಎಂದರೆ ಕಾರ್ಪೊರೇಟ್ ಪರ ಸರ್ಕಾರ ಈ ಕಂಪೆನಿಗಳ ಲಾಭಕ್ಕಾಗಿ ದುಡಿಯುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.