ಚಿಕ್ಕಮಗಳೂರು : ಕಾಂಗ್ರೆಸ್ ಸೇರ್ಪಡೆಗೊಂಡು ಟಿಕೆಟ್ ಸಿಗದೇ ಅತಂತ್ರರಾಗಿದ್ದ ಮಾಜಿ ಸಚಿವ ವೈಎಸ್ವಿ ದತ್ತಾರಿಗೆ ಮತ್ತೊಮ್ಮೆ ಹೆಚ್.ಡಿ ದೇವೇಗೌಡ ನೆರವಾಗಿದ್ದಾರೆ. ಇಂದು ಕಡೂರು ತಾಲೂಕಿನ ಯುಗಟಿಯಲ್ಲಿರುವ ವೈಎಸ್ವಿ ದತ್ತಾ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹೆಚ್ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಕಡೂರಿನ ಜೆಡಿಎಸ್ ಟಿಕೆಟ್ ನಿಮಗೆ ಎಂದು ಹೇಳಿದ್ದಾರೆ,
ಕಡೂರು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಬಳಿಕ ಈ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಹೆಚ್ಡಿ ರೇವಣ್ಣ, ಹೆಚ್ಡಿ ದೇವೇಗೌಡರು ನಾನು ಬದುಕಿರುವವರೆಗೂ ದತ್ತಾನ ಕೈ ಬಿಡೋದಿಲ್ಲ , ಆತನನ್ನು ಈ ಬಾರಿ ಶಾಸಕನನ್ನಾಗಿ ಮಾಡಿಯೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಮಾತಿನಂತೆ ನಾವಿಂದು ಇಲ್ಲಿಗೆ ಬಂದು ದತ್ತಾಗೆ ಕಡೂರು ಟಿಕೆಟ್ ಘೋಷಣೆ ಮಾಡಿದ್ದೇವೆ ಎಂದಿದ್ದಾರೆ.
18ನೇ ತಾರೀಖು ದತ್ತಾ ನಾಮಪತ್ರ ಸಲ್ಲಿಕೆ ಮಾಡುವವರಿದ್ದು ಅಂದು ಹೆಚ್ಡಿದೇವೇಗೌಡ ಕೂಡ ಆಗಮಿಸಲಿದ್ದಾರೆ. ಕಡೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿ ದತ್ತಾನಿಗೆ ಶಾಸಕ ಸ್ಥಾನವನ್ನು ಕೊಡಿಸಲೇಬೇಕೆಂದು ದೇವೇಗೌಡರು ಹೇಳಿದ್ದಾರೆಂದು ರೇವಣ್ಣ ಹೇಳಿದ್ದಾರೆ.