ಚುನಾವಣಾ ಅಖಾಡದಲ್ಲಿ ದಿನಗಳು ಕಳೆಯುತ್ತಿದ್ದಂತೆ ನೇರಾನೇರ ಮಾತುಗಳು ಹೊರಕ್ಕೆ ಬರುತ್ತಿವೆ. ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಯೋಗೇಶ್ವರ್ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ಮಾಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಕಳೆದ 7 ವರ್ಷಗಳ ಕಾಲ ಶಾಸಕರಾಗಿದ್ರು. ಚನ್ನಪಟ್ಟಣ ನಗರವನ್ನ ಎಷ್ಟು ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಅಂತ ಗೊತ್ತು. ಕುಮಾರಸ್ವಾಮಿ ಸಿಎಂ ಆಗಿದ್ರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಯಾವುದೇ ರಾಷ್ಟ್ರೀಯ ಹಬ್ಬಕ್ಕೆ ಬಂದು ರಾಷ್ಟ್ರ ಧ್ವಜ ಹಾರಿಸಿಲ್ಲ. ಕಸದ ಸಮಸ್ಯೆ, ಯುಜಿಡಿ ಸಮಸ್ಯೆ ಬಗೆಹರಿಸಿಲ್ಲ. ಪ್ಲ್ಯಾನ್ ಮಾಡಿ ಮಗನನ್ನ ಕರೆದುಕೊಂಡು ಬಂದಿದ್ದಾರೆ. ಕುಮಾರಸ್ವಾಮಿ ಕುಟುಂಬ ನನ್ನ ಮೇಲೆ ಯಾಕೆ ಯುದ್ಧ ಮಾಡಲು ಬಂದಿದ್ಯೋ ಗೊತ್ತಿಲ್ಲ. ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ, ಈಗ ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ ಎಂದು ಬೇಸರಿಸಿಕೊಂಡಿದ್ದಾರೆ.
ಏನು ಕೆಲಸ ಮಾಡಿದ್ದೀವಿ ಅಂತ ಚನ್ನಪಟ್ಟಣದಲ್ಲಿ ಬಂದು ಮತ ಕೇಳ್ತಾರೆ..? ಎಂದು ಪ್ರಶ್ನಿಸಿರುವ ಯೋಗೇಶ್ವರ್, ದೇವೇಗೌಡರು ನನ್ನನ್ನ ಕನ್ವರ್ಟೆಡ್ ಕಾಂಗ್ರೆಸ್ ಅಂದವ್ರೆ. ಅವ್ರು ದೊಡ್ಡವ್ರು, ಏನು ಬೇಕಾದರೂ ಹೇಳಲಿ. ಆದ್ರೆ ಗೌಡ್ರೆ ಒಂದು ಮಾತು ಹೇಳ್ತೀನಿ. ಸೋಲಲಿ ಗೆಲ್ಲಲಿ. ಈ ಜನರ ನಡುವೆಯೇ ಇದ್ದೇನೆ. ಜನರ ಕಣ್ಣೀರು ಒರೆಸಿದ್ದೇನೆ, ನಾನು ಕಣ್ಣೀರು ಹಾಕಿಸಿಲ್ಲ. ನಾನು ಪಕ್ಷಾಂತರಿ ಆಗಿರೋದು ಜನರ ಅಭಿವೃದ್ಧಿಗೆ. ನೀರಾವರಿ ಯೋಜನೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ಪಟ್ಟಿದ್ದೇನೆ ಎಂದಿದ್ದಾರೆ.
ಟಿಕೆಟ್ಗಾಗಿ ನಾನು ದೇವೇಗೌಡರ ಮನೆಗೆ ಹೋಗಿದ್ದೆ. ಆಗ ಜಾಣ ಕಿವುಡುತನ ತೋರಿದರು. ಯಾವ ಚುನಾವಣೆ, ಯಾರು ಅಭ್ಯರ್ಥಿ, ಕುಮಾರಸ್ವಾಮಿ ಜೊತೆ ಮಾತಾಡಿ ಅಂದ್ರು. ಆದರೆ ಕುಮಾರಸ್ವಾಮಿ ಮಗನಿಗೆ ಟಿಕೆಟ್ ಕೊಡಲು ನನಗೆ ಅನ್ಯಾಯ ಮಾಡಿದ್ರು. ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಕರೆದು ಟಿಕೆಟ್ ಕೊಟ್ರು. ಹೀಗಾಗಿ ಈ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿ ಎಂದು ಮತ ಭಿಕ್ಷೆ ಬೇಡಿದ್ದಾರೆ.