
ರಾಜ್ಯದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಡೇಂಜರ್ ಡೆಂಗ್ಯು ಮೈಸೂರು ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ.
ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (32) ಅವರೇ ಡೆಂಗ್ಯುಗೆ ಬಲಿಯಾದ ದುರ್ದೈವಿಯಾಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ನಾಗೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗೇಂದ್ರರ ಪತ್ನಿ ಕೂಡ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗೇಂದ್ರ ಅವರು ಇತ್ತೀಚೆಗೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ತಪಾಸಣೆ ಬಳಿಕ ಡೆಂಗ್ಯು ಇರುವುದು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗೇಂದ್ರ ಸಾವನ್ನಪ್ಪಿದ್ದಾರೆ. ಈ ಕುರಿತು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಪಿ ಸಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜನರು ಜ್ವರ ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದ್ರವ ರೂಪದ ಆಹಾರವನ್ನು ಸೇವಿಸಬೇಕು. ಡೆಂಗ್ಯು ಜ್ವರ ಬಂದಾಕ್ಷಣ ಗಾಬರಿಗೊಳ್ಳಬಾರದು, ಆತಂಕಕ್ಕೀಡಾಗಬಾರದು ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು ಎಂದು ಡಾ ಪಿ ಸಿ ಕುಮಾರಸ್ವಾಮಿ ಸಲಹೆ ನೀಡಿದರು.