ಬೀದರ್:ನಗರದ ಚೌಳಿ ಕಮಾನ ಸಮೀಪ ಬೀಡು ಬಿಟ್ಟಿರುವ ಅಲೆಮಾರಿಗಳಿಗೆ ಸೂರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವಕ್ರಾಂತಿ ದಿವ್ಯಪೀಠ ಸಂಘಟನೆಯ ನೇತೃತ್ವದಲ್ಲಿ ಅಲೆಮಾರಿಗಳು ಇಲ್ಲಿನ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಕಳೆದ 40 ವರ್ಷಗಳಿಂದ ನೌಬಾದ್‌ನ ಸಮೀಪದ ಚೌಳಿ ಕಮಾನ್ ಹತ್ತಿರ ವಾಸಿಸುತ್ತಿರುವ 60 ಕ್ಕೂ ಹೆಚ್ಚಿನ ಅಲೆಮಾರಿ,
ʼ2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು 63 ಜನ ಅಲೆಮಾರಿ ಸಮುದಾಯದವರಿಗೆ ತಾಲೂಕಿನ ಗೋರನಳ್ಳಿ ಸಮೀಪ 2 ಎಕರೆ ಸರ್ಕಾರಿ ಜಮೀನಿನಲ್ಲಿ ವಾಸಿಸಲು ನಿವೇಶನ ಮಂಜೂರು ಮಾಡುವಂತೆ ನಗರಸಭೆಗೆ ಸೂಚಿಸಿದರು. ಆದರೆ, ಇಲ್ಲಿಯವರೆಗೆ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆʼ ಎಂದು ದೂರಿದರು.
ʼಶಾಶ್ವತ ನಿವೇಶನ ಇಲ್ಲದೇ ಖಾಸಗಿ ಜಾಗದಲ್ಲಿ ವಾಸಿಸುವ ಅಲೆಮಾರಿಗಳಿಗೆ ಒಕ್ಕಲೆಬ್ಬಿಸುವ ಘಟನೆಗಳು ನಡೆದಿವೆ. ಇತ್ತೀಚೆಗೆ ಕೆಲವರು ಬಂದು ಜಾಗ ಖಾಲಿ ಮಾಡಿ, ಇಲ್ಲವಾದರೆ ಜೆಸಿಬಿಗಳಿಂದ ತೆರವುಗೊಳಿಸಲಾಗುವುದು ಎಂದು ಹೆದರಿಸಿದ್ದಾರೆ. ಇದರಿಂದ ಅಲೆಮಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅವರ ನೆರವಿಗೆ ಧಾವಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ʼಕಳೆದ ಹತ್ತಾರು ವರ್ಷಗಳಿಂದ ಬಿಸಿಲು, ಮಳೆ, ಚಳಿ ಎನ್ನದೇ ಕತ್ತಲಲ್ಲಿ ಬಾಣಂತಿಯರು, ಮಹಿಳೆಯರು, ಪುಟ್ಟ ಮಕ್ಕಳು, ವಯಸ್ಸಾದವರು ಅಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಏಕಾಏಕಿ ಅಲ್ಲಿಂದ ತೆರವುಗೊಳಿಸಿದರೆ ಅವರು ಬೀದಿಪಾಲಾಗುತ್ತಾರೆ. ಜಿಲ್ಲಾಡಳಿತ ಅವರಿಗೆ ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.