ಅಯೋಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ಮುನ್ನ ಗರ್ಭಗುಡಿಯಿಂದ ರಾಮ್ ಲಲ್ಲಾ ಫೋಟೋ ಸೋರಿಕೆಯಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಲ್ಲಿನ ಅಧಿಕಾರಿಗಳಲ್ಲಿ ಭೀತಿ ಉಂಟಾಗಿದೆ.
ಈ ಬಗ್ಗೆ ಶ್ರೀ ರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಮಮಂದಿರದ ಸಮಾರಂಭದ ಕುರಿತು ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ಹೊಸ ವಿಗ್ರಹ ಇರುವಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ ಮೂರ್ತಿಯ ದೇಹವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ಪ್ರಾಣ ಪ್ರತಿಷ್ಠೆಗೂ ಮುನ್ನ ಕಣ್ಣು ತೆರೆಯುವುದಿಲ್ಲ. ಅಂತಹ ಚಿತ್ರ ಕಾಣಿಸುತ್ತಿದ್ದರೆ ಅದನ್ನು ಸೋರಿಕೆ ಮಾಡಿದ್ದು ಯಾರು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆಗೂ ಮುನ್ನ ಶ್ರೀರಾಮ ಜನ್ಮಭೂಮಿ ಗರ್ಭಗುಡಿಯಿಂದ ರಾಮ್ ಲಲ್ಲಾ ಅವರ ಫೋಟೋ ಸೋರಿಕೆಯಾದ ನಂತರ ಅಧಿಕಾರಿ ವಲಯದಲ್ಲಿ ಸಂಚಲನ ಉಂಟಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗ ರಾಮ ಲಲ್ಲಾ ಅವರ ಫೋಟೋವನ್ನು ಸೋರಿಕೆ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗಂಭೀರವಾಗಿ ಪರಿಗಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ರಾಮ್ ಲಲ್ಲಾ ವಿಗ್ರಹ ಫೋಟೋವನ್ನು ದೇವಾಲಯದ ಸ್ಥಳದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಬಿಡುಗಡೆ ಮಾಡಿರಬಹುದು ಎಂದು ಟ್ರಸ್ಟ್ ಶಂಕಿಸಿದೆ. ರಾಮಲಾಲಾ ಫೋಟೋ ವೈರಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಟ್ರಸ್ಟ್ ಸಿದ್ಧತೆ ನಡೆಸಿದೆ.
ಕರ್ನಾಟಕದಿಂದ ಬಂದಿರುವ ಕಪ್ಪು ಶಿಲೆಯಲ್ಲಿ ಕೆತ್ತಲಾಗಿರುವ ರಾಮಲಲ್ಲಾ ವಿಗ್ರಹದ ಕಣ್ಣುಗಳನ್ನು ಮುಚ್ಚಿರುವ ಚಿತ್ರವು ನಿನ್ನೆ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ, ವಿಗ್ರಹವನ್ನು ಗುಲಾಬಿಗಳ ಮಾಲೆಯಿಂದ ಅಲಂಕರಿಸಲಾಗಿತ್ತು.ಅದು ವಿಶ್ವ ಹಿಂದು ಪರಿಷತ್ ಬಿಡುಗಡೆ ಮಾಡಿದ ಚಿತ್ರ. ರಾಮ್ ಲಲ್ಲಾ, ಮಗು ರಾಮ್, ನಿಂತಿರುವ ಭಂಗಿಯಲ್ಲಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ 51 ಇಂಚಿನ ನೂತನ ವಿಗ್ರಹವನ್ನು ಮೊನ್ನೆ ಗುರುವಾರ ಮಧ್ಯಾಹ್ನ ರಾಮಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಬುಧವಾರ ರಾತ್ರಿ ಟ್ರಕ್ನಲ್ಲಿ ತರಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ.22 ರ ‘ಪ್ರಾಣ-ಪ್ರತಿಷ್ಠಾ – ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.23ರಂದು ರಾಮಮಂದಿರವನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯುವ ನಿರೀಕ್ಷೆಯಿದೆ.
ಅಂದು ಮಹಾಮಸ್ತಕಾಭಿಷೇಕ ಮಧ್ಯಾಹ್ನ 12.20ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ನಂತರ ಮೋದಿ ಅವರು 7,000ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ – ಈ ಕಾರ್ಯಕ್ರಮ ದೂರದರ್ಶನ ಕೇಂದ್ರದಿಂದ ನೇರವಾಗಿ ಪ್ರಸಾರವಾಗಲಿದೆ.