
ದಾವಣಗೆರೆಯ ಹರಿಹರದಿಂದ ತುಮಕೂರಿಗೆ ಆಗಮಿಸಿದೆ ಕ್ರಾಂತಿಕಾರಿ ಪಾದಯಾತ್ರೆ. ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಮಾದಿಗ ಸಮುದಾಯದ ಪಾದಯಾತ್ರೆ ತುಮಕೂರಿಗೆ ತಲುಪಿದೆ. ಹರಿಹರದ ಪ್ರೋ ಬಿ.ಕೃಷ್ಣಪ್ಪ ಸಮಾಧಿ ಸ್ಥಳದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗ್ತಿದ್ದು, ತುಮಕೂರು ಟೌನ್ನಲ್ಲಿ ಬಹಿರಂಗ ಸಭೆ ಮಾಡಲಾಗಿದೆ. ಬಹಿರಂಗ ಸಭೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣ ಸ್ವಾಮಿ ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಾದಿಗ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ವಕೀಲರು ಭಾಗಿಯಾಗಿ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ.

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಬೆಂಗಳೂರಿಗೆ ತಲುಪುವಷ್ಟರಲ್ಲಿ ಒಳ ಮಿಸಲಾತಿ ಜಾರಿ ಮಾಡಬೇಕು. ಇಲ್ಲದಿದ್ರೆ ಮಾರ್ಚ್ 21ರಂದು ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಬೆತ್ತಲೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಯುವಕರಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಟೌನ್‌ಹಾಲ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಒಳ ಮೀಸಲಾತಿ ಹೋರಾಟದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ನಮ್ಮ ಸರ್ಕಾರ ಇದ್ದಾಗ ಒಳ ಮೀಸಲಾತಿ ಘೋಷಣೆ ಮಾಡಿತ್ತು. ಕೇಂದ್ರಕ್ಕೆ ಈ ಬಗ್ಗೆ ನಾವು ಶಿಫಾರಸು ಮಾಡಿದ್ದೆವು. ಆಗ ಸುಪ್ರಿಂಕೋರ್ಟ್ನಲ್ಲಿ ಕೇಸ್ ಇತ್ತು. ಹೀಗಾಗಿ ತೀರ್ಮಾನ ಆಗಿರಲಿಲ್ಲ. ಈಗ ಸುಪ್ರೀಂಕೋರ್ಟ್ ತೀರ್ಮಾನ ಕೊಟ್ಟು 6 ತಿಂಗಳಾಗಿದೆ. ತೆಲಂಗಾಣದಲ್ಲಿ ಒಣ ಮೀಸಲಾತಿ ಜಾರಿ ಮಾಡಿದ್ದಾರೆ. ಈಗಾಗಲೇ ಹೋರಾಟಗಳು ನಡೆಯುತ್ತಿದೆ. ಈ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲೇಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಒಳ ಮೀಸಲಾತಿ ಜಾರಿ ಬಗ್ಗೆ ಇಲ್ಲೀವರೆಗೂ ಯಾವುದೇ ಕ್ರಮ ಆಗಿಲ್ಲ. ಇದೀಗ ಹೋರಾಟ ಶುರು ಆಗಿದೆ. ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದ್ರ ಮೇಲೆ ಹೋರಾಟದ ರೂಪುರೇಷೆ ನಿರ್ಧಾರ ಆಗಲಿದೆ. ಬೆತ್ತಲೆ ಹೋರಾಟಕ್ಕೆ ಹೋರಾಟಗಾರರು ಸಜ್ಜಾಗಿದ್ದಾರೆ. ಒಂದು ವೇಳೆ ಸರ್ಕಾರದ ವಿರುದ್ಧ ಬೆತ್ತಲೆ ಹೋರಾಟ, ಆತ್ಮಹತ್ಯೆ ಯತ್ನ ನಡೆದ್ರೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ.