ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೆ ರಾಜಕೀಯ ರ್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೆ ಆರಂಭವಾಗಿವೆ. ಜನ ಕೂಡ ಸಂತೆ, ಪೇಟೆ, ಮಾಲ್ ಗಳಲ್ಲಿ ಬಹುತೇಕ ಮಾಸ್ಕ್ ಕೂಡ ಧರಿಸದೆ ಕರೋನಾ ಕಾಲು ಕಿತ್ತಿದೆ ಎಂಬಂತೆಯೇ ರಾಜಾರೋಷವಾಗಿ ವರ್ತಿಸುತ್ತಿದ್ದಾರೆ.
ಈ ನಡುವೆ, ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರನೇ ಮೂರು ಪಟ್ಟು ಹೆಚ್ಚಾಗಿವೆ. ಸಾವಿನ ಸಂಖ್ಯೆಯಲ್ಲಿ ಕೂಡ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ಕರೋನಾ ಹೊಸ ಪ್ರಕರಣಗಳು ಏರುಗತಿಯಲ್ಲೇ ಇವೆ. ಈ ನಡುವೆ ಅಪಾಯಕಾರಿ ಕರೋನಾ ಡೆಲ್ಟಾ ಪ್ಲಸ್ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂಬ ಆತಂಕವನ್ನು ವೈದ್ಯಕೀಯ ವಲಯ ವ್ಯಕ್ತಪಡಿಸುತ್ತಿದೆ.
ಆದರೂ ಅಂತಹ ಆತಂಕ, ಎಚ್ಚರಿಕೆಗಳನ್ನು ಗಾಳಿಗೆ ತೂರಿ ಆಳುವ ಮಂದಿಯೇ ಸಭೆ- ಸಮಾರಂಭಗಳಲ್ಲಿ ಮುಳುಗಿದ್ದಾರೆ. ಜನ ಕೂಡ ಎಲ್ಲಾ ಕೋವಿಡ್ ನಿಯಮಗಳನ್ನೂ ಗಾಳಿಗೆ ತೂರಿ ಬಿಂದಾಸ್ ಆಗಿ ವರ್ತಿಸುತ್ತಿದ್ದಾರೆ. ಇಂತಹ ಅವಿವೇಕಿತನದ ನಡುವೆ ಅಮೆರಿಕದಿಂದ ಆಘಾತಕಾರಿ ಸಂಗತಿಯೊಂದು ವರದಿಯಾಗಿದೆ.
ಭಾರತ ಮೂಲದ ಈ ಡೆಲ್ಟಾ ರೂಪಾಂತರಿ ವೈರಸ್ ಅಮೆರಿಕದಲ್ಲಿ ಹೊಸ ಅಲೆಗೆ ಕಾರಣವಾಗಿದ್ದು, ದಿನ ನಿತ್ಯ ವರದಿಯಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ಒಂದು ವಾರದಲ್ಲಿ ದಿಢೀರನೇ ಐದು ಪಟ್ಟು ಹೆಚ್ಚಳವಾಗಿದೆ. ಅದರಲ್ಲೂ ಮುಖ್ಯವಾಗಿ ಲಸಿಕೆ ಪಡೆದವರು ಮತ್ತು ಪಡೆಯದವರು ಎಂಬ ಯಾವ ಬೇಧವಿಲ್ಲದೆ ಬಹುತೇಕ ಸಮಾನ ರೀತಿಯಲ್ಲೇ ಎಲ್ಲರೂ ಸೋಂಕಿಗೆ ಒಳಗಾಗುತ್ತಿದ್ದು, ಇಬ್ಬರಲ್ಲೂ ವೈರಸ್ ಪ್ರಮಾಣ(ವೈರಲ್ ಲೋಡ್) ಏಕರೀತಿಯಲ್ಲಿರುವುದು ಕಂಡುಬಂದಿದೆ ಎಂಬ ಸಂಗತಿಯನ್ನು ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಹೇಳಿದೆ!
ಮುಖ್ಯವಾಗಿ ಇದು ದಡಾರದಷ್ಟೇ ವೇಗವಾಗಿ ಮತ್ತು ವ್ಯಾಪಕವಾಗಿ ಹರುಡುವ ಸಾಮರ್ಥ್ಯಹೊಂದಿದೆ. ಮೂಲ ಕರೋನಾ ವೈರಸ್ ಗೆ ಹೋಲಿಸಿದರೆ ಇದರ ಪ್ರಸರಣ ವೇಗ ಮೂರು ಪಟ್ಟು ಅಧಿಕವಿದೆ. ಆ ಅರ್ಥದಲ್ಲಿ ಇದು ಅಪಾಯಕಾರಿ ಎಬೋಲಾ ಮತ್ತು ಸಾಮಾನ್ಯ ನೆಗಡಿಗಿಂತ ವೇಗವಾಗಿ ಮತ್ತು ವ್ಯಾಪಕವಾಗಿ ಹರುಡುತ್ತಿದೆ ಎಂದು ಸಿಡಿಸಿ ಹೇಳಿದೆ.
ಅಮೆರಿಕಾ, ಬ್ರಿಟನ್, ಇಸ್ರೇಲ್, ಜಪಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಬಾಂಗ್ಲಾ, ರಷ್ಯಾ, ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಡೆಲ್ಟಾ ವೈರಸ್ ದಾಳಿಯ ಕಾರಣಕ್ಕೆ ಭೀಕರ ಮೂರನೇ ಅಲೆಯಲ್ಲಿ ಬೇಯುತ್ತಿರುವ ಹೊತ್ತಿಗೆ ಸಿಡಿಸಿಯ ಈ ಆಘಾತಕಾರಿ ವರದಿ ಬಂದಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸೋಂಕು ಪ್ರದೇಶಗಳ ಕಂಟೇನ್ಮೆಂಟ್ ಗಾಗಿ ಅಲ್ಲಿನ ಸೇನೆಯನ್ನೇ ಕರೆಸಲಾಗಿದೆ. ಹಾಗೇ ಕರೋನಾ ವೈರಸ್ ಮೂಲ ಚೀನಾದಲ್ಲಿ ಕೂಡ ಡೆಲ್ಟಾ ವೈರಸ್ ದಾಳಿ ಕೈಮೀರಿ ಹೋಗುತ್ತಿದ್ದು, ರಾಜಧಾನಿ ಬೀಜಿಂಗ್ ಸೇರಿದಂತೆ ಐದು ಪ್ರಾಂತ್ಯಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಜಪಾನ್ ಕೂಡ ಈಗಾಗಲೇ ರಾಜಧಾನಿ ಟೋಕಿಯೋದಲ್ಲಿ ಜಾರಿಯಲ್ಲಿದ್ದ ಕರೋನಾ ತುರ್ತುಪರಿಸ್ಥಿತಿಯನ್ನು ಇನ್ನೂ ನಾಲ್ಕು ಪ್ರದೇಶಗಳಿಗೆ ವಿಸ್ತರಿಸುವ ಮಟ್ಟಿಗೆ ಸೋಂಕು ವ್ಯಾಪಿಸತೊಡಗಿದೆ. ಈ ನಡುವೆ ಡಬ್ಲ್ಯೂಎಚ್ ಒ ತನ್ನ ಇತ್ತೀಚಿನ ಮಾಹಿತಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಕರೋನಾ ನಾಲ್ಕನೇ ಅಲೆ ಆರಂಭವಾಗಿದ್ದು ಆ ಅಲೆಗೆ ಕೂಡ ಡೆಲ್ಟಾ ವೈರಸ್ ಕಾರಣವಾಗಿದೆ ಎಂದು ಎಚ್ಚರಿಕೆ ನೀಡಿದೆ.
ಮುಖ್ಯವಾಗಿ ಡೆಲ್ಟಾ ವೈರಸ್ ರೂಪಾಂತರಿ ತಳಿಯು ಪ್ರಸರಣ ಮತ್ತು ಪರಿಣಾಮದಲ್ಲಿ ಹಿಂದಿನ ವೈರಸ್ ಗಿಂತ ಅಪಾಯಕಾರಿ. ಲಸಿಕೆ ಪಡೆದವರು ಮತ್ತು ಪಡೆಯದವರಿಬ್ಬರಲ್ಲೂ ಅದು ಒಂದೇ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ, ಲಸಿಕೆ ಪಡೆವ ಸದೃಢರಲ್ಲಿ ಅದು ಪ್ರಾಣಾಂತಿಕವಾಗಲಾರದು ಮತ್ತು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಉಂಟುಮಾಡಲಾರದು. ಆದರೆ, ಲಸಿಕೆ ಪಡೆದವರಲ್ಲಿಯೂ ಗಂಭೀರ ಕಾಯಿಲೆಯುಳ್ಳವರು ಮತ್ತು ವಯೋವೃದ್ಧರಲ್ಲಿ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಉಂಟುಮಾಡುವ ಸಾಧ್ಯತೆ ಇದ್ದೇ ಇದೆ. ಲಸಿಕೆ ಪಡೆಯದಿರುವವರಿಗಂತೂ ಇದು ಬಹಳ ಅಪಾಯಕಾರಿ. ಹಾಗೇ ವೈರಸ್ ಸೋಂಕಿತರ ದೇಹದಲ್ಲಿ ಸಕ್ರಿಯವಾಗಿರುವ ಅವಧಿ ಕೂಡ ಈ ಮೊದಲಿಗಿಂತ ಹೆಚ್ಚಾಗಿದೆ. ಈ ಮೊದಲು ಒಮ್ಮೆ ಸೋಂಕಿತರಾದರೆ ಆ ವ್ಯಕ್ತಿಯಲ್ಲಿ 13 ದಿನಗಳ ಕಾಲ ವೈರಸ್ ಸಕ್ರಿಯವಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೆ ಡೆಲ್ಟಾ ವೈರಸ್ ಸೋಂಕಿತರಲ್ಲಿ 18 ದಿನಗಳವರೆಗೆ ಸಕ್ರಿಯವಾಗಿರುವುದು ದೃಢಪಟ್ಟಿದೆ ಎಂದು ಸಿಡಿಸಿ ವರದಿಯಲ್ಲಿ ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ಈ ಡೆಲ್ಟಾ ವೈರಸ್ಸಿನ ಈ ಹೊಸ ಆತಂಕಕಾರಿ ರೂಪಾಂತರದಿಂದಾಗಿ ಈವರೆಗೆ ಜಾಗತಿಕವಾಗಿ ಕರೋನಾ ವಿಷಯದಲ್ಲಿ ಪಾಲಿಸುತ್ತಿದ್ದ ನಿಯಮಗಳನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕಿದೆ. ಆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಈವರೆಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾಸ್ಕ್ ಧರಿಸುವುದರಿಂದ ನೀಡಲಾಗಿದ್ದ ವಿನಾಯ್ತಿಯನ್ನು ರದ್ದುಪಡಿಸಿ, ಅವರು ಕೂಡ ಹೊರಾಂಗಣ ಮತ್ತು ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಜೊತೆಗೆ ಕ್ವಾರಂಟೈನ್ ಅವಧಿಯನ್ನು ಕೂಡ ಪರಿಷ್ಕರಿಸುವ ಚಿಂತನೆ ನಡೆದಿದೆ. ಹಾಗೇ ದೈಹಿಕ ಅಂತರದ ವಿಷಯದಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಜೊತೆಗೆ ಮಾರಣಾಂತಿಕ ವೈರಸ್ ನಿಂದ ಕನಿಷ್ಟ ಜೀವಹಾನಿ ತಡೆಯಲು ಲಸಿಕೆಯೊಂದೇ ಈಗಿರುವ ಅಸ್ತ್ರ, ಲಸಿಕೆ ಕೂಡ ನೂರಕ್ಕೆ ನೂರು ನಮ್ಮನ್ನು ಉಳಿಸಿದೇ ಹೋದರೂ, ಗರಿಷ್ಠ ರಕ್ಷಣೆ ನೀಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಲಸಿಕೆ ನೀಡಿಕೆ ವೇಗವನ್ನು ಹೆಚ್ಚು ಮಾಡುವುದೊಂದೇ ಸರ್ಕಾರಗಳು ಜನರ ಜೀವ ರಕ್ಷಣೆಗೆ ಮಾಡಬೇಕಾದ ಮಹತ್ಕಾರ್ಯ ಎಂದೂ ಸಿಡಿಸಿ ಹೇಳಿದೆ.
ಒಟ್ಟಾರೆ, ಡೆಲ್ಟಾ ರೂಪಾಂತರಿ ಕರೋನಾ ವೈರಸ್ ಅಮೆರಿಕ, ಯುರೋಪ್, ರಷ್ಯಾ, ಚೀನಾ, ಆಸ್ಟ್ರೇಲಿಯಾದಂತಹ ಅಪಾರ ವೈದ್ಯಕೀಯ ಮತ್ತು ತಂತ್ರಜ್ಞಾನದ ರಾಷ್ಟ್ರಗಳಲ್ಲೇ ದೊಡ್ಡ ಮಟ್ಟದ ಆತಂಕ ಹುಟ್ಟಿಸಿದೆ. ಶೇ.50-70ರಷ್ಟು ಲಸಿಕೆ ಪ್ರಗತಿ ಸಾಧಿಸಿರುವ ದೇಶಗಳಲ್ಲೇ ಈ ರೂಪಾಂತರಿ ವೈರಾಣು ತಳಿ ಅಷ್ಟರಮಟ್ಟಿಗೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಹಾಗಿರುವಾಗ ಇನ್ನೂ ಕೇವಲ ಶೇ.7ರಷ್ಟು ಮಂದಿಗೆ ಮಾತ್ರ ಪೂರ್ಣ ಲಸಿಕೆ ನೀಡುವುದು ಸಾಧ್ಯವಾಗಿರುವ, ಡೆಲ್ಟಾಕ್ಕಿಂತ ಹಲವು ಪಟ್ಟು ದುರ್ಬಲವಾಗಿದ್ದ ಸಂದರ್ಭದಲ್ಲೇ ಲಕ್ಷಾಂತರ ಮಂದಿಯ ಸಾವುನೋವನ್ನು ಕಂಡ ಭಾರತದಲ್ಲಿ ಈ ಅಪಾಯಕಾರಿ ಮೂರನೇ ಅಲೆ ಸೃಷ್ಟಿಸಬಹುದಾದ ಅನಾಹುತ ಊಹೆಗೂ ಮೀರಿದ್ದು!
ಆದರೆ, ಪ್ರಚಾರ ಮತ್ತು ರಾಜಕೀಯ ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಮಂದಿಯೇ ದೇಶದ ಜನರನ್ನು ಮತ್ತೆ ಮತ್ತೆ ಹರಕೆಯ ಕುರಿಗಳಂತೆ ಅಲೆಯ ಮೇಲೆ ಅಲೆಯ ಅಪಾಯಕ್ಕೆ ದೂಡುತ್ತಿರುವಾಗ ಇಂತಹ ಸರ್ವನಾಶದ ಅಪಾಯದ ಬಗ್ಗೆ ಎಚ್ಚರಿಸುವವರಾರು?