ದೇಶದಲ್ಲಿ ಕಲ್ಲಿದ್ದಲು ಕೊರತೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಸ್ಪತ್ರೆಗಳು, ಮೆಟ್ರೋ ರೈಲು ಹಾಗೂ ಪ್ರಮುಖ ಸಂಸ್ಥೆಗಳಿಗೆ ಆಗುಚ ವಿದ್ಯುತ್ ಸರಬರಾಜಿನಲ್ಲಿ ತೀವ್ರ ಕಡಿತ ಉಂಟಾಗಬಹುದೆಂದು ದೆಹಲಿ ಸರ್ಕಾರ ಎಚ್ಚರಿಸಿದೆ.
ಈ ಕುರಿತು ತುರ್ತು ಸಭೆ ನಡೆಸಿದ ಇಂಧನ ಸಚಿವ ಸತ್ಯೇಂದ್ರ ಜೈನ್, ರಾಷ್ಟ್ರ ರಾಜಧಾನಿಗೆ ವಿದ್ಯುತ್ ಸರಬರಾಜು ಮಾಡುವ ಸ್ಥಾವರಗಳಿಗೆ ಕಲ್ಲದ್ದಲು ಲಭ್ಯೆತಯನ್ನು ಕಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ದೆಹಲಿ ಸರ್ಕಾರ ದಾದ್ರಿ-|| ಹಾಗೂ ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ಸರಬರಾಜಿನಲ್ಲಿ ಏರುಪೇರಾಗುವ ಸಂಭವವಿದ್ದು ಮೆಟ್ರೋ, ಆಸ್ಪತ್ರೆಗಳು ಸೇರಿದಂತೆ ಅನೇಕ ಕಡೆ ವಿದ್ಯುತ್ ಕಡಿತವಾಗಿ ಅಡಚಣೆ ಉಂಟಾಗಬಹುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರ ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಜನರು ಯಾವುದೇ ವಿದುತ್ ಕಡಿತದಂತಹ ಸಮಸ್ಯೆಗಳನ್ನು ಎದುರಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜೈನ್ ತಿಳಿಸಿದ್ದಾರೆ.
ಮುಂದುವರೆದು, ಈ ಎರಡು ವಿದ್ಯುತ್ ಸ್ಥಾವರಗಳು ದೆಹಲಿಯ ಪ್ರಮುಖ ಭಾಗಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತವೆ. ಈ ಬೇಸಿಗೆಯ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆಯ ಬಗ್ಗೆ ಕಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ದಾದ್ರಿ-||, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಹಾಗೂ ಝಜರ್ ವಿದ್ಯುತ್ ಸ್ಥಾವರಗಳಿಂದ ದೆಹಲಿಗೆ ಪ್ರತಿನಿತ್ಯ 1751 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇದರಲ್ಲಿ ದಾದ್ರಿ-|| 728 ಹಾಗೂ ಉಂಚಹಾರ್ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ.













