ನವದೆಹಲಿ: ಕಳೆದ ವರ್ಷ ಈಶಾನ್ಯ ದೆಹಲಿಯಲ್ಲಿ ಘಟಿಸಿದ ಕೋಮು ಗಲಭೆಯ ಸಂದರ್ಭದಲ್ಲಿ ದರೋಡೆ ಮತ್ತು ಕಾಂಪೌಂಡ್ ಒಂದನ್ನು ಸುಟ್ಟು ಹಾಕಿರುವುದಕ್ಕೆ ದಾಖಲಿಸಿಕೊಂಡಿದ್ದ 4 ಎಫ್.ಐ.ಆರ್ ಗಳನ್ನು ದೆಹಲಿ ಉಚ್ಛ ನ್ಯಾಯಾಲಯವು ತಿರಸ್ಕರಿಸಿದೆ. ಒಂದೇ ಘಟನೆಗೆ ಎರಡು ಎಫ್.ಐ.ಆರ್ ಗಳನ್ನು ದಾಖಲಿಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸುವುದಕ್ಕೆ ಕಾನೂನು ಅವಕಾಶ ನೀಡುವುದಿಲ್ಲ ಎಂಬುದು ನ್ಯಾಯಾಲಯದ ಆದೇಶ.
ಒಂದೇ ಫಟನೆಗೆ ಐದು ಎಫ್.ಐ.ಆರ್. ಗಳನ್ನು ದಾಖಲಿಸಿಕೊಳ್ಳುವುದು ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ದೆಹಲಿ ಹೈ-ಕೋರ್ಟ್ ಆದೇಶಿಸಿದೆ.
ಕಳೆದ ವರ್ಷ ಮಾರ್ಚೀ ತಿಂಗಳಲ್ಲಿ ಜಫ್ರಾಬಾದ್ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದ ಐದು ಪ್ರಾಥಮಿಕ ಮಾಹಿತಿ ವರದಿಗಳಲ್ಲಿ ಒಂದನ್ನು ಇರಿಸಿಕೊಂಡು ಮಿಕ್ಕ ನಾಲ್ಕೂ ವರದಿಗಳನ್ನು ತಿರಸ್ಕರಿಸಲಾಗಿದೆ.
“ಅಲ್ಲಿ ನಡೆದಂತಹ ಘಟನೆಗಳು ಪ್ರತ್ಯೇಕವಾದದ್ದು ಎಂದಾಗಲೀ, ಅಪರಾಧಗಳು ಪ್ರತ್ಯೇಕವಾದದ್ದು ಎಂದಾಗಲೀ ಹೇಳಲಾಗುವುದಿಲ್ಲ. ಈ ಹಿಂದೆಯೇ ಪ್ರಸ್ತಾಪಿಸಿದಂತೆ ಎಫ್.ಐ.ಆರ್. ಗಳಲ್ಲಿ ದಾಖಲಾಗಿರುವ ಚಾರ್ಜ್ ಶೀಟ್ ಗಳನ್ನು ಪರಿಶೀಲಿಸಿದಾಗ ಅಲ್ಲಿನ ಆಪಾದಿತರು ಹಾಗು ಕೃತ್ಯಗಳು ಏಕಪ್ರಕಾರದ್ದೇ ಎಂದು ಕಂಡುಬರುತ್ತದೆ. ಹೀಗಿದ್ದರೂ ಅಪಾದಿತರ ವಿರುದ್ಧವಾಗಿ ಸಾಕ್ಷಿ ಪುರಾವೆಗಳು ದಕ್ಕಿದ್ದಲ್ಲಿ, ಅವುಗಳನ್ನು ಇದೇ ಎಫ್.ಐ.ಆರ್, ನಲ್ಲಿ ಸೇರಿಸಬಹುದು.” ಎಂದು ಜಸ್ಟೀಸ್ ಸುಬ್ರಹ್ಮಣ್ಯ ಪ್ರಸಾದ್ ಹೇಳಿದ್ದಾರೆ.
ಅಪಾದಿತರಲ್ಲಿ ಒಬ್ಬರಾದ ಅತಿರ್ ಅವರು ಒಂದೇ ಕುಟುಂಬದ ಐವರು ಪ್ರತ್ಯೇಕ ಪ್ರಾಥಮಿಕ ಮಾಹಿತಿ ವರದಿಗಳನ್ನು ದಾಖಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ ಇದರ ಅಧಾರದ ಮೇಲೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಹಾನಿಗೆ ಒಳಗಾದ ಸ್ವತ್ತುಗಳು ಬೇರೆ ಬೇರೆಯದ್ದಾಗಿದ್ದು ನಿವಾಸಿಗಳು ಪ್ರತ್ಯೇಕವಾಗಿ ನಷ್ಟವನ್ನು ಅನುಭವಿಸಿದ್ದಾರೆ ಎಂಬುದು ದೆಹಲಿ ಪೋಲೀಸರ ವಾದವಾಗಿತ್ತು.
ಇಂಡಿಯನ್ ಎಕ್ಸ್ಪ್ರೆಸ್ಸಿನ ಪ್ರಕಾರ, ಒಂದೆಡೆ ಬೆಂಕಿಯನ್ನು ‘ದುರುದ್ದೇಶವಾಗಿ ಹಚ್ಚಿದ್ದು’ ನಂತರ ಆ ಮನೆಯ ಆವರಣಕ್ಕೆ ಹಾಗು ಹಲವು ಮಹಡಿಗಳಿಗೆ ಬೆಂಕಿ ಹರಡಿತ್ತು. ಪ್ರಾಥಮಿಕ ಮಾಹಿತಿ ವರದಿಗಳ ಪ್ರಕಾರ ದೂರು ಸಲ್ಲಿಸಿದ ಪ್ರತಿಯೊಬ್ಬರೂ ಮನೆಯ ವಿವಿಧ ಭಾಗಗಳಲ್ಲಿ ವಾಸವಾಗಿದ್ದು ಅವರ ಸ್ವತ್ತುಗಳು ಸುಟ್ಟುಹೋಗಿರುವುದರಿಂದ ಅವರಿಗೆ ಪ್ರತ್ಯೇಕವಾಗಿ ನಷ್ಟ ಸಂಭವಿಸಿದೆ.
ಚಾರ್ಜ್ ಶೀಟಿನಲ್ಲಿ ದಾಖಲಿಸಲಾಗಿದ್ದ ಮನೆಯ ಸೈಟ್ ಪ್ಲ್ಯಾನಿನ ಪ್ರಕಾರ ಸ್ವತ್ತುಗಳೆಲ್ಲವೂ ಒಂದೇ ಆವರಣದಲ್ಲಿದ್ದವು ಅಥವಾ ಬಹಳ ಹತ್ತಿರದಲ್ಲಿದ್ದವು. ಸ್ವತ್ತುಗಳು ಪ್ರತ್ಯೇಕವಾಗಿದ್ದರೂ ಒಂದೇ ಆವರಣದಲ್ಲಿದ್ದವು ಎಂದು ನ್ಯಾಯಾಲಯ ಹೇಳಿದೆ.
“ಈ ವಿಷಯದ ಕುರಿತಾದ ಕಾನೂನುಗಳನ್ನು ಸರ್ವೋಚ್ಛ ನ್ಯಾಯಾಲಯದ ತತ್ವಗಳನ್ನು ಆಧರಿಸಿ ತೀರ್ಮಾನಿಸಲಾಗಿದೆ. ಒಂದೇ ಘಟನೆಗೆ ಅಥವಾ ಆ ಘಟನೆಯ ಪರಿಣಾಮವಾಗಿರುವ ಮತ್ತೊಂದು ಘಟನೆಗೆ ಎರಡು ಎಫ್.ಐ.ಆರ್ ಗಳನ್ನು ದಾಖಲಿಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸುವುದು ಕಾನೂನಾತ್ಮಕವಾದದ್ದಲ್ಲ.” ಎಂಬುದು ನ್ಯಾಯಪೀಠದ ನಿರ್ಧಾರವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ