ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಹಾಗೂ ಕೇಂದ್ರ ಸರ್ಕಾರದ ನಡುವಿನ ವಿವಾದ ಸಂಘರ್ಷದ ಮಟ್ಟಕ್ಕೆ ತಲುಪಿದೆ. ಭಾರತದಲ್ಲಿ ಕಾನೂನು ರಕ್ಷೆಯನ್ನು ಕಳೆದುಕೊಂಡ ಒಂದೇ ದಿನದೊಳಗೆ ಟ್ವಿಟರ್‌ಗೆ ಮತ್ತೊಂದು ಆಘಾತ ಎದುರಾಗಿದೆ.

ಬಿಜೆಪಿ ನಾಯಕರ ʼಕಾಂಗ್ರೆಸ್ ಟೂಲ್‌ಕಿಟ್ʼ ಟ್ವೀಟ್‌ಗಳಿಗೆ “manipulated media” (ತಿರುಸಲ್ಪಟ್ಟ ಸುದ್ದಿ) ಎಂಬ ಟ್ಯಾಗ್‌ಲೈನ್ ನೀಡಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಟ್ವಿಟರ್‌ಗೆ ಸರ್ಕಾರ ದಿನಕ್ಕೊಂದು ಸವಾಲುಗಳನ್ನು ಹೂಡುತ್ತಿದ್ದು, ಇದೀಗ, ಟ್ವಿಟರ್ ಎಂಡಿ ಮನೀಷ್ ಮಹೇಶ್ವರಿ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಪೊಲೀಸರು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಮೇ ಅಂತ್ಯದಲ್ಲೇ ಟ್ವಿಟರ್ ಎಂಡಿ ಮನೀಷ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ನೊಟಿಸ್ ನೀಡಿದ್ದೆವು. ವಿಚಾರಣೆಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ, ಅವರು ವಾಸ್ತವ್ಯವಿರುವ ಬೆಂಗಳೂರಿಗೆ ನಮ್ಮ ತಂಡ ಹೋಗಿದೆ ಎಂದು ದೆಹಲಿ ಪೊಲೀಸ್ ಮೂಲ ಮಾಧ್ಯಮಗಳಿಗೆ ತಿಳಿಸಿದೆ.
ಎರಡು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ, ಬಿಜೆಪಿ ನಾಯಕರ ಟ್ವೀಟ್‌ಗಳು ತಿರುಚಲ್ಪಟ್ಟ ಸುದ್ದಿಗಳು ಎಂದು ಅಡಿಬರೆಹ ಉಲ್ಲೇಖಿಸಿದ ಮಾನದಂಡಗಳೇನು? ಯಾವೆಲ್ಲಾ ಆಧಾರದ ಮೇಲೆ ಈ ಟ್ಯಾಗ್‌ಲೈನ್ ನೀಡಲಾಗಿದೆ? ಇಂತಿಂತಹ ವ್ಯಕ್ತಿಗಳದ್ದೇ ಟ್ವೀಟ್‌ಗಳನ್ನೇ ಯಾಕೆ ಆಯ್ಕೆ ಮಾಡಲಾಗಿದೆ ಮೊದಲಾದ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರದ ವಿರುದ್ಧದ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ ಟೂಲ್‌ಕಿಟ್ ರಚಿಸಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಮಾಡಿರುವ ಟ್ವೀಟ್‌ಗಳ ಅಡಿ ಭಾಗದಲ್ಲಿ ಟ್ವಿಟರ್ (ತಿರುಸಲ್ಪಟ್ಟ ಸುದ್ದಿ) ಎಂದು ಅಡಿ ಬರೆಹ ನೀಡುತ್ತಿರುವುದು ಕೇಂದ್ರ ಸರ್ಕಾರಕ್ಕೆ ಹಾಗೂ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಮುಖ್ಯವಾಗಿ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಮ್ಮ ಟ್ವೀಟ್‌ಗೆ manipulated media ಟ್ಯಾಗ್‌ಲೈನ್ ನೀಡಿದ ಕುರಿತು ದೆಹಲಿ ಪೊಲೀಸರ ಮೊರೆ ಹೋಗಿದ್ದು, ಅಲ್ಲಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇಂತಹ ಅಡಿಬರಹವನ್ನು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಳ್ಳು ಮಾಹಿತಿ ಹಂಚುವಾಗಲೂ ಟ್ವಿಟರ್ ಬಳಸಿಕೊಂಡಿತ್ತು. ಹಲವು ಎಚ್ಚರಿಕೆಯ ಬಳಿಕವೂ ಟ್ರಂಪ್ ಸುಳ್ಳು ಸುದ್ದಿ ಹಂಚುವುದು ನಿಲ್ಲಿಸದಾಗ, ಟ್ರಂಪ್ ಖಾತೆಯನ್ನೇ ಟ್ವಿಟರ್ ನಿಷ್ಕ್ರಿಯಗೊಳಿಸಿತ್ತು. ಡೊನಾಲ್ಡ್ ಟ್ರಂಪ್‌ನ ಖಾತೆಯನ್ನೇ ನಿಷ್ಕ್ರಿಯಗೊಳಿಸಿ, ಟ್ವಿಟರ್ ಸುಳ್ಳು ಹಾಗೂ ಉದ್ರೇಕಕಾರಿ ಮಾಹಿತಿಗಳ ವಿರುದ್ಧ ತೀಕ್ಷ್ಣ ಸಂದೇಶ ರವಾನಿಸಿತ್ತು.
ಇದೀಗ, ಭಾರತದಲ್ಲೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ ಟ್ವಿಟರ್ ವಿರುದ್ಧ ಮೋದಿ ನೇತೃತ್ವದ ಸರ್ಕಾರ ಹಗೆತನ ಸಾಧಿಸುತ್ತಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಟೂಲ್‌ಕಿಟ್ – manipulated media ಮಾತ್ರವಲ್ಲದೆ, ಟ್ವಿಟರ್ ಭಾರತ ಸರ್ಕಾರವನ್ನು ಬೇರೆ ವಿಚಾರಗಳಲ್ಲೂ ಎದುರು ಹಾಕಿಕೊಂಡಿದೆ. ನೂತನ ಐಟಿ ಕಾನೂನು ಪಾಲಿಕೆಯಲ್ಲಿ ವಿಫಲವಾದ ಕಾರಣವನ್ನಿಟ್ಟುಕೊಂಡು ಭಾರತ ಸರ್ಕಾರ ಟ್ವಿಟರಿಗೆ ಕಾನೂನು ರಕ್ಷೆಯನ್ನು ಸ್ಥಗಿತಗೊಳಿಸಿದೆ. ಮಾತ್ರವಲ್ಲದೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊದಲಾದವರ ಟ್ವಿಟರ್ ಖಾತೆಯ ಮೇಲಿನ ಬ್ಲೂ ಟಿಕ್ ರದ್ದುಗೊಳಿಸಿಯೂ ಕೇಂದ್ರದ ಅಸಮಾಧಾನಕ್ಕೆ ಗುರಿಯಾಗಿತ್ತು.

ಸರ್ಕಾರವನ್ನು ಮುಖ್ಯವಾಹಿನಿ ಮಾಧ್ಯಮಗಳು ಪ್ರಶ್ನಿಸಲು ಹಿಂಜರಿಯುತ್ತಿರುವ ವೇಳೆ, ಸಾಮಾನ್ಯ ನಾಗರಿಕರಿಗೂ ಸರ್ಕಾರವನ್ನು ಪ್ರಶ್ನಿಸಲು ವೇದಿಕೆ ಒದಗಿಸುವ ಸಾಮಾಜಿಕ ಮಾಧ್ಯಮಗಳು ಮೋದಿ ನೇತೃತ್ವದ ಸರ್ಕಾರಕ್ಕೆ ಗಂಟಲ ಮುಳ್ಳಾಗಿ ಪರಿಣಮಿಸಿದೆ. ಹಾಗಾಗಿ, ಈ ಮಾಧ್ಯಮಗಳನ್ನೂ ಅಂಕೆಯಲ್ಲಿಡಲು ಪ್ರಯತ್ನಿಸುತ್ತಿದೆ. ತನ್ನ ಹಿಡಿತಕ್ಕೆ ಸಿಗದ ಟ್ವಿಟರ್‌ನಂತಹ ಸಂಸ್ಥೆಗಳಿಗೆ ಬೇರೆ ಬೇರೆ ವಿಧಾನದ ಮೂಲಕ ಸಂಕಷ್ಟಕ್ಕೆ ಸಿಲುಕಿಸಿ ಹಗೆ ಸಾಧಿಸುತ್ತಿದೆ ಎಂದು ಕೇಳಿ ಬರುತ್ತಿರುವ ಆರೋಪಕ್ಕೂ, ಕೇಂದ್ರ ಸರ್ಕಾರ ಟ್ವಿಟರ್‌ನೊಂದಿಗೆ ತೋರಿಸುತ್ತಿರು ದಾರ್ಷ್ಟ್ಯಕ್ಕೂ ಸರಿಯಾಗಿ ತಾಳೆಯಾಗುತ್ತಿದೆ.