COVID-19 ಲಸಿಕೆ ಚಾಲನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದ ಮೇಲೆ 15 ಮಂದಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ವ್ಯಾಕಸಿನ್ ಕೊರತೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ʼನಮ್ಮ ಮಕ್ಕಳಿಗೆ ಸೇರಬೇಕಾದ ಲಸಿಕೆಯನ್ನು ವಿದೇಶಿ ರಾಜ್ಯಗಳಿಗೆ ಏಕೆ ಕಳುಹಿಸಿದ್ದೀರʼ ಎಂಬ ಪೋಸ್ಟರ್ ದೆಹಲಿಯ ಹಲವೆಡೆ ಅಂಟಿಸಲಾಗಿತ್ತು. ಹೀಗೆ ಪೋಸ್ಟರ್ ಅಂಟಿಸಿರುವ ಆರೋಪದ ಮೇಲೆ 17 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ, ಪೋಸ್ಟರ್‌ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ತದ ನಂತರ ಜಿಲ್ಲೆಗಳ ಹಿರಿಯ ಅಧಿಕಾರಿಗಳನ್ನು ಕುರಿತು ಎಚ್ಚರಿಸಲಾಗಿದೆ. ಮತ್ತು ದೂರುಗಳ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಸರಿಯಾಗಿ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಹಾಗೂ ವಿವಿಧ ಜಿಲ್ಲೆಗಳಾದ್ಯಂತ ಸಾರ್ವಜನಿಕ ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆಯಡಿಯಲ್ಲಿ 17 ಎಫ್‌ಐಆರ್‌ಗಳನ್ನು ನೋಂದಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಹೆಚ್ಚಿನ ದೂರುಗಳು ಬಂದರೆ ಇನ್ನಷ್ಟು ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಈ ಪೋಸ್ಟರ್‌ಗಳನ್ನು ಯಾರ ಪರವಾಗಿ ಹಾಕಲಾಗಿದೆಯೆಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು ಅದರ ಪ್ರಕಾರ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧಿಸಿ ಉತ್ತರ ದೆಹಲಿಯಲ್ಲಿ ಬಂಧಿಸಲ್ಪಟ್ಟ ಒಬ್ಬ ಆರೋಪಿಯು ತನಗೆ ಈ ಕೆಲಸ ಮಾಡಲು ₹500 ನೀಡಿದ್ದರು ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಈ ಪ್ರಕರಣ ಸಂಬಂಧ ಇನ್ನೊಬ್ಬ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.