ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ( National Herald Case) ಕೈ ನಾಯಕರನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿದೆ. ಆಗಾಗ ದೇಶದಲ್ಲಿ ಈ ಪ್ರಕರಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಕಾಂಗ್ರೆಸ್ ನಾಯಕರಾದ ರಾಹುಲ್, ಸೋನಿಯಾ ಗಾಂಧಿಯವರಿಗೆ ಸಂಕಷ್ಟ ಎದುರಾಗಿದೆ. ಈ ನಡುವೆಯೇ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಅವರಿಗೆ ದೆಹಲಿ ಪೊಲೀಸರು(Delhi Police) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಹೀಗಾಗಿ ಇಂದು ಡಿಕೆ ಶಿವಕುಮಾರ್ ದೆಹಲಿ ಪೊಲೀಸರ ಎದುರಿಗೆ ಹಾಜರಾಗಬೇಕಿತ್ತು. ಆದರೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಸಮಯಾವಕಾಶ ಕೇಳಲು ಡಿಸಿಎಂ ನಿರ್ಧರಿಸಿದ್ದಾರೆ. ಮುಂದಿನ ವಾರದಲ್ಲಿ ವಿಚಾರಣೆಗೆ ತೆರಳಲು ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಕೋರಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ʼಈ ಸಮಯದಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ, ನಮ್ಮ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಹೋಗಬೇಕುʼ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ದೆಹಲಿ ಪೊಲೀಸರಿಂದ ನೋಟಿಸ್ ಜಾರಿಯಾದ ಬಳಿಕ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇದು ನನಗೆ ಆಘಾತಕಾರಿಯಾಗಿದೆ. ನನ್ನ ಸಹೋದರ ಮತ್ತು ನನಗೆ ಈ ಹಿಂದೆ ಸಮನ್ಸ್ ನೀಡಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಎಲ್ಲಾ ವಿವರಗಳನ್ನು ನೀಡಿದ್ದೆ.

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಕ್ಷದ ಸಂಕಷ್ಟದ ಸಮಯದಲ್ಲಿ, ನಮ್ಮಂತಹ ಕಾಂಗ್ರೆಸ್ಸಿಗರು ಟ್ರಸ್ಟ್‌ಗಳ ಮೂಲಕ ಆ ಸಂಸ್ಥೆಗಳಿಗೆ ಸಹಾಯ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಪೊಲೀಸ್ ಪ್ರಕರಣದ ಅಗತ್ಯವಿಲ್ಲ. ನಾವು ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ಇದು ನನಗೆ ನೀಡುತ್ತಿರುವ ಕಿರುಕುಳ ನೀಡುವ ದುರುದ್ದೇಶ ಹೊರತು ಬೇರೇನೂ ಅಲ್ಲ ಎಂದು ಡಿ.ಕೆ ಶಿವಕುಮಾರ್ ನೋಟಿಸ್ ತಲುಪಿದ ಬಳಿಕ ವಾಗ್ದಾಳಿ ನಡೆಸಿದ್ದರು.





