![](https://pratidhvani.com/wp-content/uploads/2024/05/download-24.jpeg)
ದೇಶದ ರಾಜಧಾನಿ ದೆಹಲಿಯಲ್ಲಿ ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಿಲ್ಲಿಯಲ್ಲಿ ಗರಿಷ್ಠ 52.3 ಡಿಗ್ರಿ ಸೇಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.ಇತ್ತೀಚೆಗೆ ಸುರಿದ ಮಳೆಯಿಂದ ದಕ್ಷಿಣ ಭಾರತ ಕೊಂಚ ತಂಪಾಗಿದೆ. ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಬಿಸಿಲಿನ ತಾಪ ವಿಪರೀತವಾಗಿತ್ತು. ಕುಡಿಯುವ ನೀರಿಗೆ ತೀವ್ರ ಪರದಾಟ ಉಂಟಾಗಿತ್ತು. ಇದೇ ಪರಿಸ್ಥಿತಿ ಈಗ ರಾಜಧಾನಿ ದಿಲ್ಲಿಯನ್ನು ಕಾಡುತ್ತಿದೆ. ಇಲ್ಲಿನ ಹವಾಮಾನ ಕೇಂದ್ರವೊಂದು ಇತಿಹಾಸದಲ್ಲಿಯೇ ಅತ್ಯಧಿಕ ಉಷ್ಣತೆಯನ್ನು ದಾಖಲಿಸಿದೆ.
ರಾಜಧಾನಿಯಲ್ಲಿ ಬುಧವಾರ ಇತಿಹಾಸದಲ್ಲಿಯೇ ದಾಖಲೆಯ 52.3 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ವರದಿಯಾಗಿದೆ. ಇಷ್ಟು ಭೀಕರ ಉಷ್ಣತೆಯನ್ನು ದಿಲ್ಲಿ ಹಿಂದೆಂದೂ ಕಂಡಿರಲಿಲ್ಲ.
ದಿಲ್ಲಿಯ ಮುಂಗೇಶಪುರದ ಜವಾಹರ್ ನವೋದಯ ವಿದ್ಯಾಲಯ ಹವಾಮಾನ ಕೇಂದ್ರದಲ್ಲಿ ಬುಧವಾರ ಈ ಸಾರ್ವಕಾಲಿಕ ದಾಖಲೆಯ ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದು ನಗರದ ಕೇಂದ್ರ ಭಾಗದಿಂದ ಉತ್ತರದಲ್ಲಿನ ಸುಮಾರು 50 ಕಿಮೀ ದೂರದಲ್ಲಿರುವ ಗ್ರಾಮವಾಗಿದೆ.
ರಾಜಧಾನಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿರುವ ನಡುವೆ, ಜನರಿಗೆ ಬಿಸಿಲು ಗಾಯದ ಮೇಲೆ ಬರೆ ಎಳೆಯುತ್ತಿದೆ. ಹಾಗೆಯೇ ವಿಪರೀತ ತಾಪಮಾನದ ಜತೆಗೆ ನಗರದಲ್ಲಿ ಬುಧವಾರ ವಿದ್ಯುತ್ ಬೇಡಿಕೆ ಕೂಡ 8,302 ಮೆಗಾ ವ್ಯಾಟ್ಗೆ ತಲುಪಿದ್ದು, ಇದೂ ಕೂಡ ಸಾರ್ವಕಾಲಿಕ ದಾಖಲೆ ಏರಿಕೆಯಾಗಿದೆ.