ಬೆಂಗಳೂರು:ಏ.೦೫: ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಗಳಿಸಿದ್ದ ಗುಜರಾತ್ ಜೈಂಟ್ಸ್ ತಂಡ , ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಗೆದ್ದು ಬೀಗಿದೆ.
ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್, ಈ ಬಾರಿಯ ಐಪಿಎಲ್‌ನಲ್ಲಿ ಸತತ ಎರಡನೇ ಜಯ ಸಾಧಿಸಿದೆ. ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯ ಗೆದ್ದಿದ್ದ ಹಾರ್ದಿಕ್ ಪಡೆ, ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್, 18.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು. ಆ ಮೂಲಕ 6 ವಿಕೆಟ್‌ಗಳ ಅಂತರದಿಂದ ಪಂದ್ಯ ಗೆದ್ದುಕೊಂಡಿದೆ.
163 ರನ್‌ಗಳ ಗುರಿ ಪಡೆದ ಹಾಲಿ ಚಾಂಪಿಯನ್ಸ್, ಆರಂಭದಲ್ಲೇ ಆಘಾತಕ್ಕೊಳಗಾಯ್ತು. ಆರಂಭಿಕರಾದ ಸಾಹಾ ಮತ್ತು ಗಿಲ್ ತಲಾ 14 ರನ್ ಗಳಿಸಿ ಔಟಾದರು. ಇವರಿಬ್ಬರಿಗೂ ನೋರ್ಟ್ಜೆ ಮುಳುವಾದರು. ನಾಯಕ ಹಾರ್ದಿಕ್ ಪಾಂಡ್ಯ ಆಟ 5 ರನ್‌ಗಳಿಗೆ ಸೀಮಿತವಾಯ್ತು. ಈ ವೇಳೆ ತಾಳ್ಮೆಯ ಆಟವಾಡಿದ ಸಾಯಿ ಸುದರ್ಶನ್ ಮತ್ತು ವಿಜಯ್ ಶಂಕರ್ ಅರ್ಧಶತಕದ ಜೊತೆಯಾಟವಾಡಿದರು. ಶಂಕರ್ 29 ರನ್ ಗಳಿಸಿ ಔಟಾದರೆ, ಸುದರ್ಶನ್ ಆಕರ್ಷಕ ಅರ್ಧಶತಕ(62) ಗಳಿಸಿ ಅಜೇಯರಾಗಿ ಉಳಿದರು. ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ಮಿಲ್ಲರ್, ಅಜೇಯ 31 ರನ್ ಗಳಿಸಿದರು.
ಡೆಲ್ಲಿ ಸ್ಪರ್ಧಾತ್ಮಕ ಮೊತ್ತ
ಡೆಲ್ಲಿ ಪರ ಆರಂಭಿಕ ಆಟಗಾರ ಪೃಥ್ವಿ ಶಾ 7 ರನ್ ಗಳಿಸಿ ಔಟಾದರೆ, ಕಳೆದ ಪಂದ್ಯದಲ್ಲಿ ಡಕೌಟ್ ಆಗಿದ್ದ ಮಿಚೆಲ್ ಮಾರ್ಷ್ ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. 4 ರನ್ ಗಳಿಸಿ ಶಮಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. 32 ಎಸೆತಗಳಿಂದ 37 ರನ್ ಗಳಿಸಿ ನಿಧಾನವಾಗಿ ಬ್ಯಾಟ್ ಬೀಸುತ್ತಿದ್ದ ನಾಯಕ ವಾರ್ನರ್, ಜೋಸೆಫ್ ಎಸೆತದಲ್ಲಿ ಬೌಲ್ಡ್ ಆದರು.
ರೋಸ್ಸೋ ಗೋಲ್ಡನ್ ಡಕ್‌ಗೆ ಬಲಿಯಾದರೆ, ಡೆಲ್ಲಿ ತಂಡಕ್ಕೆ ಇಂದು ಪದಾರ್ಪಣೆ ಮಾಡಿದ್ದ ಅಭಿಶೇಕ್ ಪೊರೆಲ್ 20 ರನ್ ಗಳಿಸಿದರು. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಸರ್ಫರಾಜ್ ಖಾನ್ 30 ರನ್ ಗಳಿಸಿ ಆಟ ನಿಲ್ಲಿಸಿದರು. ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಅಕ್ಷರ್ ಪಟೇಲ್, 22 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 36 ರನ್ ಸಿಡಿಸಿದರು. ಡೆಲ್ಲಿ ಪರ ಮೊಹಮ್ಮದ್ ಶಮಿ ಮತ್ತು ರಶೀದ್ ಮೂರು ಪ್ರಮುಖ ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 2 ವಿಕೆಟ್ ಕಬಳಿಸಿದರು.