ಪ್ರಜಾಪ್ರಭುತ್ವ ಮತ್ತು ಸೌಹಾರ್ದಯುತ ಸಮಾಜವನ್ನು ಬಯಸುವ ಪ್ರತಿಯೊಂದು ಮನಸ್ಸೂ ಇಂದು ಕರ್ನಾಟಕದ ಸಮಸ್ತ ಜನಕೋಟಿಗೆ ಧನ್ಯವಾದಗಳನ್ನು ಸಲ್ಲಿಸಬೇಕಿದೆ. ಐದು ಕೋಟಿ ಜನತೆಯ ಪೈಕಿ ಮೂರೂವರೆ ಕೋಟಿ ಜನತೆ ತಮ್ಮ ಪವಿತ್ರ ಮತ ಚಲಾವಣೆ ಮಾಡಿದ್ದು ಅದರಲ್ಲಿ ಒಂದೂವರೆ ಕೋಟಿ ಜನತೆಯಾದರೂ ಈ ರಾಜ್ಯದ ಸಮನ್ವಯ ಸಂಸ್ಕೃತಿ ಮತ್ತು ಬಹುತ್ವವನ್ನು ಗೌರವಿಸಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಪದಚ್ಯುತಗೊಳಿಸಿದ್ದಾರೆ. ಈ ಚುನಾವಣೆಗಳು ಎರಡು ಕಾರಣಗಳಿಗಾಗಿ ನಿರ್ಣಾಯಕವಾಗಿದ್ದವು. ಮೊದಲನೆಯದು ದೇಶದೆಲ್ಲೆಡೆ ರಾಜಕೀಯ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ಪುಟಿದೇಳಲು ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿತ್ತು. ಎರಡನೆಯ ಕಾರಣ ಎಂದರೆ ಸಹೃದಯಿ ಜನತೆ, ಸಮನ್ವಯ ಸಂಸ್ಕೃತಿ, ಸೌಹಾರ್ದತೆ ಮತ್ತು ಮಾನವೀಯ ಭ್ರಾತೃತ್ವದ ನೆಲೆಬೀಡು ಎಂದೇ ಹೆಸರಾಗಿರುವ ಕರ್ನಾಟಕ ತನ್ನ ಆ ಹೆಸರನ್ನು ಉಳಿಸಿಕೊಳ್ಳಬೇಕಿತ್ತು. ಮತದಾರರು ಈ ಎರಡೂ ನೆಲೆಯಲ್ಲಿ ನಿರ್ಣಾಯಕ ತೀರ್ಪು ನೀಡಿರುವುದು ಅಭಿನಂದನಾರ್ಹ.

ಕರ್ನಾಟಕದ ಜನತೆಯ , ವಿಶಾಲ ಸಮಾಜದ , ಶೋಷಿತ-ಅವಕಾಶವಂಚಿತ ಸಮುದಾಯಗಳ ಹಿತದೃಷ್ಟಿಯಿಂದ, ದುಡಿಮೆಯ ಜೀವಗಳ ಸುಗಮ ಜೀವನ ಮತ್ತು ಜೀವನೋಪಾಯದ ದೃಷ್ಟಿಯಿಂದ ಆಡಳಿತಾರೂಢ ಸರ್ಕಾರ ಸೋಲಲೇ ಬೇಕಿತ್ತು. ಏಕೆಂದು ಹೇಳಲೇಬೇಕಾದರೆ, ಕಳೆದ ಮೂರು ವರ್ಷಗಳಗೂ ಹೆಚ್ಚಿನ ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯದ ಶೋಷಿತ ಸಮುದಾಯಗಳ ಬದುಕು ಮೂರಾಬಟ್ಟೆಯಾಗಿತ್ತು. ಅಸ್ಪೃಶ್ಯತೆಯಂತಹ ಅಮಾನುಷ ಘಟನೆಗಳಿಗಾಗಲೀ, ಸಾಮಾಜಿಕ ಬಹಿಷ್ಕಾರದಂತಹ ಹೀನ ಚಟುವಟಿಕೆಗಳಿಗಾಗಲೀ, ಅತ್ಯಾಚಾರ, ಗೌರವ ಹತ್ಯೆಯಂತಹ ಪೈಶಾಚಿಕ ಕೃತ್ಯಗಳಿಗಾಗಲೀ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ಸೋತಿತ್ತು. ಕರಾವಳಿ ಕರ್ನಾಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗುಂಪು ಥಳಿತ, ಅಲ್ಪ ಸಂಖ್ಯಾತರ ಮೇಲಿನ ಹಲ್ಲೆ, ಲವ್ ಜಿಹಾದ್ ಎಂಬ ಕಾಲ್ಪನಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಮೇಲೂ ನಡೆಯುತ್ತಿದ್ದ ಹಲ್ಲೆಗಳು, ಮತದ್ವೇಷ ಮತ್ತು ಕೋಮುದ್ವೇಷದ ಪರಿಣಾಮ ನಡೆಯುತ್ತಿದ್ದ ಹಿಂದೂ ಮತ್ತು ಮುಸ್ಲಿಂ ಯುವಕರ ಹತ್ಯೆಗಳು, ಈ ಸಾವುಗಳನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಂಡು ಹತ್ಯೆಗೀಡಾದ ಅಮಾಯಕರಿಗೆ ಪರಿಹಾರ ನೀಡುವಲ್ಲಿಯೂ ಮಾಡಲಾಗುತ್ತಿದ್ದ ತಾರತಮ್ಯ, ಇವೆಲ್ಲದರ ಬಗ್ಗೆ ಕಿಂಚಿತ್ತೂ ಸಂವೇದನೆ ವ್ಯಕ್ತಪಡಿಸದೆ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಬಿಜೆಪಿ ಸರ್ಕಾರದ ಧೋರಣೆ ಸಾಮಾನ್ಯ ಜನತೆಯ ಜಿಗುಪ್ಸೆಗೂ ಕಾರಣವಾಗಿತ್ತು.
ಇಂತಹ ಸಮಾಜಘಾತುಕ ಚಟುವಟಿಕೆಗಳನ್ನು ನಿಗ್ರಹಿಸಲು ಬಿಜೆಪಿ ಸರ್ಕಾರ ವಿಫಲವಾದುದೇ ಅಲ್ಲದೆ ಸ್ವತಃ ಮುಖ್ಯಮಂತ್ರಿಗಳೇ ಕ್ರಿಯೆ ಪ್ರತಿಕ್ರಿಯೆ ಪ್ರಮೇಯ ಬಳಸಿ ಮೌನಕ್ಕೆ ಶರಣಾಗಿದ್ದು ದ್ವೇಷ ರಾಜಕಾರಣ ಪರಾಕಾಷ್ಠೆ ತಲುಪಲು ಕಾರಣವಾಗಿತ್ತು.ಈ ಉರಿವ ಕೋಮು ದ್ವೇಷದ ದಳ್ಳುರಿಗೆ ಮತ್ತಷ್ಟು ಪುಷ್ಟಿ ನೀಡುವ ರೀತಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಹಿಜಾಬ್ ನಿಷೇಧ, ಇದರಿಂದ ಪ್ರೇರಿತರಾಗಿ ಮತಾಂಧ ಸಂಘಟನೆಗಳು ಹುಟ್ಟುಹಾಕಿದ ಹಲಾಲ್ ವಿವಾದ, ಜಾತ್ರೆ ಉತ್ಸವಗಳಲ್ಲಿ ಮುಸ್ಲಿಂ ವರ್ತಕರ ಬಹಿಷ್ಕಾರ ಇತ್ಯಾದಿ ಘಟನೆಗಳು ಕರ್ನಾಟಕದ ಪಾರಂಪರಿಕ ಸೌಂದರ್ಯವನ್ನೇ ಹಾಳು ಮಾಡಿದವು. ಈ ವಿವಾದಗಳನ್ನು ಸಂಬಂಧಪಟ್ಟ ಸಮುದಾಯಗಳೊಡನೆ, ನಾಡಿನ ಪ್ರಜ್ಞಾವಂತರೊಡನೆ ಸಮಾಲೋಚನೆ ನಡೆಸುವ ಮೂಲಕ ಬಗೆಹರಿಸುವ ಸಾಧ್ಯತೆಗಳನ್ನೂ ಪರಿಶೀಲಿಸದೆ ಪ್ರತಿಯೊಂದು ವಿವಾದವನ್ನೂ ಕೋಮುವಾದಿಗಳಿಗೆ, ಮತದ್ವೇಷಿಗಳಿಗೆ, ದ್ವೇಷ ರಾಜಕಾರಣದ ರೂವಾರಿಗಳಿಗೆ ಅನುಕೂಲವಾಗುವಂತೆ ನಿರ್ಲಕ್ಷಿಸಿದ್ದು ಬೊಮ್ಮಾಯಿ ಸರ್ಕಾರದ ಅಕ್ಷಮ್ಯ ಅಪರಾಧ.
ಈ ಸಮಸ್ಯೆಗಳನ್ನು ಬಗೆಹರಿಸಲು ನಾಡಿನ ಪ್ರಜ್ಞಾವಂತ ಹಿರಿಯ ನಾಗರಿಕರನ್ನು, ಸಾಹಿತ್ಯ ರಂಗಭೂಮಿ ಮತ್ತು ಅಕಾಡೆಮಿಕ್ ವಲಯದ ವಿದ್ವಾಂಸರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿತ್ತು. ಆದರೆ ಇಡೀ ವಿದ್ವತ್ ವಲಯವನ್ನೇ ಎಡಚರ ಎಂದೋ ಅರ್ಬನ್ ನಕ್ಸಲ್ ಎಂದೋ ಹೀಗಳೆದು ಶಾಲಾ ಪಠ್ಯಕ್ರಮದಲ್ಲಿದ್ದ ವೈಚಾರಿಕ, ವೈಜ್ಞಾನಿಕ, ಸಾಮಾಜಿಕ ಕಳಕಳಿ ಮತ್ತು ಮಾನವೀಯ ಸ್ಪಂದನೆಯ ಪಠ್ಯಗಳನ್ನೇ ತೆಗೆದುಹಾಕುವ ಮೂಲಕ ಬೊಮ್ಮಾಯಿ ಸರ್ಕಾರ ಕರ್ನಾಟಕದ ಈ ಮಣ್ಣು ಶತಮಾನಗಳಿಂದ ಸಂಪಾದಿಸಿದ್ದ ವಿದ್ವತ್ತು ಮತ್ತು ಜ್ಞಾನದ ನೆಲೆಗಳನ್ನು ಧ್ವಂಸ ಮಾಡಲು ಹೊರಟಿದ್ದು ಮತ್ತೊಂದು ಮಹಾ ಪ್ರಮಾದ. ಚಳುವಳಿಗಳ ತವರೂರಾದ ಕರ್ನಾಟಕದ ಮಣ್ಣಿನ ಗುಣವನ್ನೇ ಅರಿಯದೆ ಚರಿತ್ರೆಯನ್ನೇ ತಲೆಕೆಳಗು ಮಾಡುವ ಪ್ರಯತ್ನಗಳನ್ನೂ ಟಿಪ್ಪೂ ವಿಚಾರದಲ್ಲಿ ಉರಿಗೌಡ ನಂಜೇಗೌಡ ಸೃಷ್ಟಿಯ ಮೂಲಕ ಮಾಡಲು ಮುಂದಾಗಿತ್ತು. ತನ್ನ ಕೋಮುವಾದಿ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ರಂಗಾಯಣ, ಸಾಹಿತ್ಯ ಪರಿಷತ್ತಿನಂತಹ ಸಾಂಸ್ಕೃತಿಕ ಸಂಸ್ಥೆಗಳನ್ನೂ ಬಳಸಿಕೊಳ್ಳಲಾಯಿತು.
ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಜನ ಹಿತಾಸಕ್ತಿಯ ಬಗ್ಗೆ ಹಠಾತ್ತನೆ ಜ್ಞಾನೋದಯವಾದಂತೆ ಮೀಸಲಾತಿ ನೀತಿಯಲ್ಲಿ ತಿದ್ದುಪಡಿ ಮಾಡಿದ ಬೊಮ್ಮಾಯಿ ಸರ್ಕಾರ, ತನ್ನ ಪ್ರಚಾರದಲ್ಲಿ ಈ ಯಾವುದೇ ವಿವಾದಾತ್ಮಕ ವಿಚಾರವನ್ನು ಪ್ರಸ್ತಾಪಿಸದೆ ಇದ್ದುದೇ ಅದರ ಸೋಲಿನ ಮುನ್ಸೂಚನೆಯಾಗಿತ್ತು. ಇತ್ತ ರಾಜ್ಯದ ಸರ್ವತೋಮುಖ ಅಭಿವೃದ್ಧಿಯೂ ಇಲ್ಲದೆ, ದುಡಿಯುವ ವರ್ಗಗಳ ದುಡಿಮೆ ಅವಧಿಯನ್ನು ಹೆಚ್ಚಿಸುವ ಕರಾಳ ಕಾಯ್ದೆಯನ್ನೂ ಜಾರಿಗೊಳಿಸಿತ್ತು. ಬೊಮ್ಮಾಯಿ ಸರ್ಕಾರದ ಹೀನಾಯ ಸೋಲಿಗೆ ಇವೆಲ್ಲವೂ ಕಾರಣ. ಹಾಗೆಯೇ ರಾಜ್ಯದ ರೈತರ, ಕಾರ್ಮಿಕರ, ನಿರಂತರ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರ, ದಲಿತ ಸಮುದಾಯಗಳ, ಆದಿವಾಸಿಗಳ, ಪೌರ ಕಾರ್ಮಿಕರ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ, ಕೋವಿದ್ ಸಂತ್ರಸ್ತರ ಅತಿಥಿ ಶಿಕ್ಷಕ-ಉಪನ್ಯಾಸಕರ, ಅಸ್ಪೃಶ್ಯತೆಯ ಅಪಮಾನಕ್ಕೊಳಗಾದ ತಳಸಮುದಾಯಗಳ, ತಮ್ಮ ಜೀವನೋಪಾಯ ಮಾರ್ಗಗಳಿಗೇ ಸಂಚಕಾರ ಎದುರಿಸಿದ್ದ ಅಲ್ಪಸಂಖ್ಯಾತರ ಈ ಸಮಸ್ತ ಜನಕೋಟಿಯ ನಿಟ್ಟುಸಿರು, ಆಕ್ರೋಶ, ಹತಾಶೆಗಳು ಆಡಳಿತವಿರೋಧಿ ಅಲೆಯಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸು ಸಹ ಈ ಜನಾಕ್ರೋಶದ ಅಲೆಯನ್ನು ಹಿಮ್ಮೆಟ್ಟಿಸಲಾಗಲಿಲ್ಲ. ಡಬ್ಬಲ್ ಇಂಜಿನ್ ಎಂಬ ಭ್ರಮಾತ್ಮಕ ಜಗತ್ತು ಕರ್ನಾಟಕದ ಮತದಾರರನ್ನು ಆಕರ್ಷಿಸಲೂ ಇಲ್ಲ.
ಇದರ ಪರಿಣಾಮವನ್ನು ಚುನಾವಣಾ ಫಲಿತಾಂಶಗಳಲ್ಲಿ ನೋಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಶಾಶ್ವತ ಅಧಿಕಾರದ ಕನಸು ಕಂಡರೆ ಅದನ್ನು ಭಂಗಗೊಳಿಸುವ ಜಾಗೃತ ಮತದಾರರು ಇದ್ದೇ ಇರುತ್ತಾರೆ ಎಂಬ ಕಠೋರ ವಾಸ್ತವವನ್ನು ಕರ್ನಾಟಕದ ಜನತೆ ತೋರಿಸಿದ್ದಾರೆ. ಬಿಜೆಪಿಗೆ ಮಾತ್ರವೇ ಅಲ್ಲದೆ, ಪೂರ್ಣ ಬಹುಮತ ಪಡೆಯುವ ಕನಸು ಕಾಣುತ್ತಿದ್ದ ಜೆಡಿಎಸ್ ಗೂ ರಾಜ್ಯ ಮತದಾರರು ಪಾಠ ಕಲಿಸಿದ್ದಾರೆ.ಮುಂದಿನ ಸರ್ಕಾರ ರಚಿಸಲಿರುವ ಕಾಂಗ್ರೆಸ್ ಪಕ್ಷವೂ ಈ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಜನೋಪಯೋಗಿ, ಭ್ರಷ್ಟಾಚಾರ ಮುಕ್ತ ಆಳ್ವಿಕೆಯನ್ನು ನೀಡಬೇಕು. ಕರ್ನಾಟಕದ ಪಾರಂಪರಿಕ ಸೊಗಡನ್ನು ಕಾಪಾಡವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸಬೇಕಿದೆ