ಬೆಂಗಳೂರು : ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವಿಸಿ ಮೂರು ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಪ್ರಕರಣಗಳ ಸಂಬಂಧ ತನಿಖೆಯನ್ನು ನಡೆಸಲು ಮೂವರು ಅಧಿಕಾರಿಗಳ ವಿಶೇಷ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆ ಕನಕಗಿತಿ ತಾಲೂಕಿನ ಬಸರಿಹಾಳ, ಕುಷ್ಠಗಿಯ ಬಿಜಕಲ್ ಗ್ರಾಮದ ವಾಂತಿ ಭೇದಿ ಪ್ರಕರಣ ಮತ್ತು ದೇವದುರ್ಗದ ರೇಕಲಮಡಿಯಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವನ್ನಪ್ಪಿತ್ತು . ಈ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪಗಳ ಬಗ್ಗೆ ಕೂಲಂಕುಷ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಯುಕ್ತರು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯ, ಚಂದ್ರಹಾಸ್ ಅಧೀಕ್ಷಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜತಾಂತ್ರಿಕ ಸಮಾಲೋಚಕರು ಬಿ.ಆರ್. ವೆಂಕಟೇಶರನ್ನೊಳಗೊಂಡ 3 ಅಧಿಕಾರಗಳ ಸಮಿತಿ ರಚಿಸಿದ್ದು ಈ ಘಟನೆಗಳ ಬಗ್ಗೆ ತನಿಖೆ ನಡೆಸಿ ಇದೇ ತಿಂಗಳು 20ರೊಳಗೆ ವರದಿ ನೀಡುವಂತೆ ಸೂಚಿಸಿದೆ.
ಕಲುಷಿತ ನೀರು ಸೇವನೆ ಪ್ರಕರಣಗಳು ಬೆಳಕಿಗೆ ಬರ್ತಿದ್ದಂತೆ ಈ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಜೂನ್ 12ರಂದು ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯ ಈ ಘಟನೆ ಸಂಬಂಧ ಸೂಕ್ತ ತನಿಖೆಗೆ ಅಧಿಕಾರಿಗಳ ವಿಶೇಷ ತಂಡ ರಚಿಸುವಂತೆ ಸೂಚನೆ ನೀಡಿದ್ದರು .