ಬೆಂಗಳೂರು: ಬೆಂಗಳೂರಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜುಲೈ 1ರೊಳಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಫುಟ್ ಪಾತ್ ಅತಿಕ್ರಮಣ ಮಾಡಿಕೊಂಡಿಕೊಂಡವರಿಗೆ ಎಚ್ಚರಿಕೆ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಬೆಂಗಳೂರಿನಲ್ಲಿ ಹುಡುಕಿದರೆ ನೂರು ಮೀಟರ್ ಕೂಡ ಸರಿಯಾಗಿ ಫುಟ್ ಪಾತ್ ಸಿಗಲ್ಲ. ಕೆಲ ಬೀದಿ ಬದಿ ವ್ಯಾಪಾರಿಗಳು, ಬೇಕರಿ, ಹೋಟೆಲ್ ನಡೆಸುವವರು ಸೇರಿ ಪಾದಚಾರಿ ಮಾರ್ಗಗಳನ್ನು ಕಬ್ಜಾ ಮಾಡುವವ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಫುಟ್ ಪಾತ್ ಅತಿಕ್ರಮಣ ಮಾಡಿಕೊಂಡವರು ಜುಲೈ 1ರೊಳಗೆ ತೆರವು ಮಾಡಬೇಕು. ಒಂದು ವೇಳೆ ಅಷ್ಟರೊಳಗೆ ಫುಟ್ ಪಾತ್ ತೆರವು ಮಾಡದಿದ್ದಲ್ಲಿ ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.


ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು
*ಫುಟ್ ಪಾತ್ ಒತ್ತುವರಿ ತೆರವುಗೊಳಿಸದೇ ಇದ್ದರೆ 250 ರೂಪಾಯಿನಿಂದ-10,000 ರೂವರೆಗೂ ಭಾರೀ ದಂಡ
*ಅಂಗಡಿಗಳು ಒತ್ತುವರಿ ಮಾಡಿದ್ದರೆ ಪರವಾನಿಗೆ ರದ್ದು
*ಫುಟ್ ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್
*ಬಿಡಾಡಿ ವಾಹನಗಳನ್ನು ತೆರವುಗೊಳಿಸದೇ ಇದ್ದರೆ ಕ್ರಮಕೈಗೊಂಡು ಹರಾಜು
*ಸಿಗ್ನಲ್‌ನಿಂದ 75 ಮೀಟರ್ ದೂರದಲ್ಲಿ ಬಸ್ ನಿಲುಗಡೆ ಇರಬಾರದು ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ವಿವಿಧ ನಗರ ಪಾಲಿಕೆಗಳ ಆಯುಕ್ತರು, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳು ಎದುರಾದರೆ ಸರ್ಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ಸಭೆಯಲ್ಲಿ ನೀಡಿದ್ದಾರೆ.






