
ಸಚಿವ ಪ್ರಿಯಾಂಕ್ ಖರ್ಗೆಗೆ ದೆಹಲಿಗೆ ಬರುವಂತೆ ಬುಲಾವ್ ಕೊಡಲಾಗಿದೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ್ ಖರ್ಗೆ ಬುಲಾವ್ ಕೊಟ್ಟಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿದ್ದಾರೆ. ಬಿಜೆಪಿ ಹೋರಾಟ, ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ ಬುಲಾವ್ ನೀಡಿದ್ದು, ಪ್ರರಣದ ಬಗ್ಗೆ ಜೂನಿಯರ್ ಖರ್ಗೆಯಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಇಂದಿನಿಂದ ಮೂರು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರೋ ಪ್ರಿಯಾಂಕ್ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ ಸಿ ವೇಣುಗೋಪಾಲ್ ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರಣೆ ನೀಡಲಿದ್ದಾರೆ ಎನ್ನಲಾಗಿದೆ.
ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕ್ತೇವೆ ಎಂದಿದ್ದ ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದು, ರಾಜು ಕಪನೂರ್ ನನ್ನ ಆಪ್ತ ಅಲ್ಲ ಅಂತ ನಾನು ಎಲ್ಲಿಯೋ ಹೇಳಿಲ್ಲ. ಬಿಜೆಪಿಯವರು ಲಾಜಿಕ್ ಇಲ್ಲದೆ ಮಾತಾಡ್ತಿದ್ದಾರೆ. ವಿಜಯೇಂದ್ರ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆಯಲ್ಲ ಹಾಗಿದ್ರೆ ಯಾಕೆ ಅವರು ರಾಜೀನಾಮೆ ಕೊಡ್ತಿಲ್ಲ..? ಕಲಬುರಗಿ ಮುತ್ತಿಗೆಗೆ ಎಷ್ಡು ಜನ ಬರ್ತೀರಿ ಅಂತ ಮೊದಲೇ ಹೇಳಿ. ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ಆಮೇಲೆ ನೀರೂ ಕೊಟ್ಟಿಲ್ಲ ಅಂತ ಪ್ರತಿಭಟನೆ ಮಾಡ್ತೀರಾ? ಎಂದು ವ್ಯಂಗ್ಯವಾಡಿದ್ದಾರೆ. ಯಾರು ಎಷ್ಟೇ ಚೀರಾಡಲಿ.. ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ಏನು ಸುಪ್ರೀಂಕೋರ್ಟಾ..? ನನ್ನ ರಾಜೀನಾಮೆ ಕೇಳೋಕೆ ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಮೇಲಿನ ಬಿಜೆಪಿ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಅನವಶ್ಯಕವಾಗಿ ಈ ಪ್ರಕರಣದಲ್ಲಿ ಸಚಿವರ ಹೆಸರು ತರಲಾಗಿದೆ. ಡೆತ್ನೋಟ್ನಲ್ಲಿ ಖರ್ಗೆ ಹೆಸರು ಕೂಡ ಇಲ್ಲ ಎಂದು ಇಲಾಖೆಯವರು ಹೇಳಿದ್ದಾರೆ. ಅವರ ಹೆಸರಿಗೆ ಹಾಗೂ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಆಗ್ತಿದೆ. ಇದರ ಸತ್ಯಾಸತ್ಯತೆ ಹೊರಬರಬೇಕಾಗುತ್ತದೆ. ಪ್ರಕರಣದ ಬಗ್ಗೆ ಚರ್ಚಿಸಿ ಸಿಒಡಿಗೆ ಕೊಟ್ಟಿದ್ದೇವೆ. ಎಲ್ಲಾ ಕೇಸ್ ಅನ್ನ ಸಿಬಿಐಗೆ ಕೊಡೊಕೆ ಆಗಲ್ಲ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಪ್ರಿಯಾಂಕ್ ಖರ್ಗೆ ರಾಜೀನಾಮೆ ಇಲ್ಲ ಎಂದಿದ್ದಾರೆ.
			
                                
                                
                                
