ಬೆಂಗಳೂರು ನಗರದಲ್ಲಿ ನಿನ್ನೆ ಸುರಿದ ಮಹಾಮಳೆಗೆ 22 ವರ್ಷದ ಯುವತಿ ಭಾನುರೇಖಾ ಬಲಿಯಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನಿನ್ನೆ ಕೆಲವು ಗಂಟೆಗಳ ಕಾಲ ಸುರಿದ ಮಳೆಯ ಪ್ರಮಾಣ ಅತ್ಯಧಿಕವಾಗಿದೆ. ಬೆಂಗಳೂರು ನಗರದಲ್ಲಿ 30 ಮಿ.ಮೀ ಗಿಂತ ಹೆಚ್ಚಿನ ಮಳೆ ಸುರಿದಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8.6 ಮಿ.ಮೀ. HAL ಏರ್ಪೋರ್ಟ್ನಲ್ಲಿ 25.1 ಮಿ.ಮೀ ಮಳೆಯಾಗಿದೆ ಎಂದು ತಿಳಿಸಲಾಗಿದೆ. ಮುಂಗಾರು ಮಳೆಗೂ ಮುನ್ನವೇ ಸುರಿಯುತ್ತಿರುವ ಮಳೆಯಿಂದ ಆಗಿರುವ ಅವಾಂತರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ದ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ ಎಂದಿದ್ದಾರೆ. ಪ್ರತೀ ಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ. ಯಾಕೆ..? ಮಳೆ ಬಂದರೆ ಜನರು ಸಾಯಲೇಬೇಕೆ..? ಎಂದು ಪ್ರಶ್ನಿಸಿದ್ದಾರೆ.
ಪ್ರತಿಧ್ವನಿ ವರದಿಯ ಅಂಶಗಳನ್ನೇ ಹೇಳಿದ ಡಿಸಿಎಂ..!
ಮಳೆಯಿಂದ ಸಾವು ಸಂಭವಿಸಿದ ಬಳಿಕ ಪರಿಹಾರ ನೀಡುವುದರಿಂದ ಯಾವುದೇ ಲಾಭವಿಲ್ಲ. ಸಮಸ್ಯೆಗಳು ಆಗುವುದನ್ನೇ ತಪ್ಪಿಸುವುದು ಸೂಕ್ತ ಎಂದು ಪ್ರತಿಧ್ವನಿ ನಿನ್ನೆ ವರದಿ ಮಾಡಿತ್ತು. ಮಂಡ್ಯದ ಆದಿಚುಂಚನಗಿರಿಯಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಪ್ರಕೃತಿ ಯಾರ ಕೈಯಲ್ಲಿ ಇಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ ಇದೆ ತೊಂದರೆ ಇದೆ ಅದನ್ನು ಸರಿ ಮಾಡಬೇಕು. ಸರಿ ಮಾಡುವ ಕಾಲ ಬಂದಿದೆ, ನಾವು ಸರಿ ಮಾಡುತ್ತೇವೆ. ಯುವತಿ ಕುಟುಂಬಕ್ಕೆ ಪರಿಹಾರ ಕೊಡುವುದು ಒಂದೇ ಅಲ್ಲ. ಐದು, ಹತ್ತು ಲಕ್ಷ ಕೊಡುವುದು ದೊಡ್ಡದು ಅಲ್ಲ. ಮುಂದೆ ಹೀಗೆ ಆಗದ ರೀತಿ ಮುಂಜಾಗ್ರತೆಯಿಂದ ಕೆಲಸ ಮಾಡಬೇಕು. ನಾವು ಮುಂಜಾಗ್ರತಾ ಕೆಲಸಗಳನ್ನು ನಾವು ಮಾಡುತ್ತೇವೆ ಎಂದಿದ್ದರು. ಬೆಂಗಳೂರಿಗೆ ಬರುತ್ತಿದ್ದ ಹಾಗೆ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಘಟನಾ ಸ್ಥಳ ಕೆ.ಆರ್ ಸರ್ಕಲ್ನಾ ಅಂಡರ್ ಪಾಸ್ಗೆ ಭೇಟಿ ನೀಡಿದ್ದರು.
ಅಂಡರ್ಪಾಸ್ಗೆ ಇನ್ಮುಂದೆ ಸಿಸಿಟಿವಿ, ಕಟ್ಟೆಚ್ಚರದ ಭರವಸೆ..
ಸಚಿವ ರಾಲಿಂಗಾರೆಡ್ಡಿ ಜೊತೆಗೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಡಿಸಿಎಂ ಸಿ.ಕೆ ಶಿವಕುಮಾರ್, ಅಂಡರ್ ಒಳಕ್ಕೆ ನೀರು ಬಾರದಂತೆ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಅಂಡರ್ ಪಾಸ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚನೆ ನೀಡಿದರು. ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಪರಿಹಾರ ಕೊಡುವುದು ಮುಖ್ಯವಲ್ಲ ಹೆಚ್ಚು ಪ್ರಾಣಾಪಾಯ ತಪ್ಪಿದೆ. ಅಂಡರ್ಪಾಸ್ ಸಮಸ್ಯೆಗಳ ಬಗ್ಗೆ ಒಂದು ಆ್ಯಕ್ಷನ್ ಪ್ಯಾನ್ ಮಾಡಲು ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕಟ್ಟೆಚ್ಚರ ವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮೃತ ಯುವತಿ ಭಾನುರೇಖಾ ಸಂಬಂಧಿಗಳು ಬಿಬಿಎಂಪಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂಡರ್ಪಾಸ್ನಲ್ಲಿ ನೀರು ತುಂಬಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನಾಹುತದ ಬಳಿಕ ಅಲರ್ಟ್ ಆದ ಬಿಬಿಎಂಪಿ, ಸರ್ಕಾರ..!
ಮುಂಗಾರು ಪೂರ್ವ ಮಳೆಯಿಂದ ಯುವತಿ ಬೆಂಗಳೂರಿನ ಕೇಂದ್ರ ಭಾಗದಲ್ಲೇ ಸಾವನ್ನಪ್ಪಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 41 ಫಾರೆಸ್ಟ್ ಗ್ಯಾಂಗ್ ತಂಡವನ್ನು ನಗರದಾದ್ಯಂತ ನಿಯೋಜಿಸಲಾಗಿದೆ. ಮರ ಬೀಳುವುದು, ನೀರು ತುಂಬಿಕೊಳ್ಳುವುದು ಸೇರಿದಂತೆ ಮಳೆ ಹಾನಿ ನಿಟ್ಟಿನಲ್ಲಿ ಕೆಲಸ ಮಾಡಲು ತಂಡ ನಿಯೋಜನೆ ಮಾಡಲಾಗಿದೆ. ನಿನ್ನೆ ಒಂದೇ ಒಂದು ಗಂಟೆಗಳ ಅವಧಿಯಲ್ಲಿ ಸುರಿದ ಮಹಾಮಳೆಗೆ 65 ಮರಗಳು ಧರೆಗುರುಳಿವೆ. ಇನ್ನು ಮರ ಬುಡಸಮೇತ ಕಿತ್ತು ಬೀಳುವುದು, ಮರಗಳ ಎಲೆ ಉದುರಿ ಡ್ರೈನೇಜ್ ಬ್ಲಾಕ್ ಆಗಲಿದೆ. ಬೆಂಗಳೂರು ಜನರು ಎಚ್ಚರಿಕೆಯಲ್ಲಿ ಇರುವಂತೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ನೀಡಿದ್ದು, ಬೆಂಗಳೂರಿನಲ್ಲಿ 206 ಸೂಕ್ಷ್ಮ ಪ್ರದೇಶ, ಈ ಪ್ರದೇಶದಲ್ಲಿ ಮಳೆ ಬಂದಾಗ ಹೆಚ್ಚು ಹಾನಿಯಾಗುವ ಸಂಭವ ಹೆಚ್ಚು ಎಂದು ವರದಿಯಲ್ಲಿಯಲ್ಲಿ ತಿಳಿಸಲಾಗಿದೆ. ಆದರೂ ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಅಧಿಕಾರಿಗಳೇ ತಿಳಿಸಿದ್ದಾರೆ.
ಕೃಷ್ಣಮಣಿ