
ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ. ಕೊಟ್ಟ ಭರವಸೆಯಂತೆ 5 ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದಾರೆ. ಆದರೆ ಅಧಿಕಾರ ಸ್ವೀಕಾರಕ್ಕೂ ಮುನ್ನ ಅಧಿಕಾರ ಹಂಚಿಕೆ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಎರಡೂವರೆ ವರ್ಷಗಳ ನಂತರ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ಗೆ ಕುರ್ಚಿ ಬಿಟ್ಟುಕೊಡಬೇಕು ಅನ್ನೋ ಬಗ್ಗೆ ಹೈಕಮಾಂಡ್ ಎದುರು ಅಲಿಖಿತ ಒಪ್ಪಂದ ಆಗಿದೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇನ್ನೂ ಒಂದು ವರ್ಷ ಇರುವಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಕುರ್ಚಿ ಮೇಲೆ ಟವಲ್ ಹಾಕಲು ಶುರು ಮಾಡಿದಂತಿದೆ.
ನನಗೆ ಯಾರ ಬೆಂಬಲವೂ ಬೇಡ.. ಸಿಎಂ ಸ್ಥಾನ ಬದಲಾವಣೆ ಅನ್ನೋದೆಲ್ಲಾ ಸುಳ್ಳು ಎನ್ನುತ್ತಲೇ ಡಿಕೆ ಶಿವಕುಮಾರ್, ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಭಾನುವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಡಿಸಿಎಂ ಅವರನ್ನ ಭೇಟಿಯಾಗಿದ್ರು. ಇನ್ನು ಇದೇ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆಶಿ, ನಾನೇನು ಸಭೆ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ. ಹೊಸ ಪದಾಧಿಕಾರಿಗಳ ತಂಡ ಭೇಟಿಗೆ ಬಂದಿತ್ತು. ಇನ್ಮುಂದೆ ಕಿತ್ತಾಟ ಮಾಡಬೇಡಿ ಅಂತ ಅವರಿಗೆ ವಾರ್ನ್ ಮಾಡಿದ್ದೇನೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋಗ್ತಿವಿ ಎಂದಿದ್ದಾರೆ. ಇಂದು ಜಾತಿ ಗಣತಿ ವಿಚಾರ ಸಭೆ ನಡೆಸೋಣ ಎಂದಿದ್ದರು. ಆದ್ರೆ ಇವತ್ತು ಸಭೆ ಬೇಡ ಅಂತ ಸಭೆಯನ್ನ ಮುಂದೂಡಲು ಹೇಳಿದ್ದೇನೆ ಅಂತ ಡಿಕೆಶಿ ಹೇಳಿದ್ರು
ಆದರೆ ಡಿ.ಕೆ ಶಿವಕುಮಾರ್ ಬಗ್ಗೆ K.N ರಾಜಣ್ಣ ನೀಡಿದ್ದ ಹೇಳಿಕೆ ವಿಚಾರವಾಗಿ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿದ್ದಾರೆ. ಡಿ.ಕೆ ಶಿವಕುಮಾರ್ ಬೆನ್ನಿಗೆ ನಿಂತ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿ.ಕೆ ಶಿವಕುಮಾರ್ ಪ್ರಮುಖ ಕಾರಣ. ಡಿ.ಕೆ ಶಿವಕುಮಾರ್‌ಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳಿವೆ. ಈ ಹಿಂದೆಯೇ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕಿತ್ತು. ಪಕ್ಷ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಕಾಂಗ್ರೆಸ್‌ನಲ್ಲಿದ್ದ ಸಂಪ್ರದಾಯ ಅನ್ನೋ ಮೂಲಕ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಉದ್ದೇಶ ಏನು ಅನ್ನೋದನ್ನು ಬಹಿರಂಗ ಮಾಡಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಡಿ.ಕೆ ಶಿವಕುಮಾರ್ ಅವರು ಒಳ್ಳೆಯ ಅರ್ಥದಲ್ಲಿ ಬೆಂಬಲ ಬೇಡ ಅಂತ ಹೇಳಿದ್ದಾರೆ. ಅವರು ಹೇಳಿದ್ದನ್ನು ಕೆಟ್ಟದಾಗಿ ನೋಡಿದ್ರೆ ಕೆಟ್ಟದಾಗಿಯೇ ಕಾಣುತ್ತದೆ. ತಪ್ಪಾಗಿ ಅರ್ಥೈಸಿಕೊಂಡಲ್ಲಿ ತಪ್ಪಾಗಿಯೇ ಕಾಣುತ್ತದೆ. ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆ ಸರಿಯಾಗಿದೆ. ನಾವೆಲ್ಲಾ ಒಗ್ಗಟ್ಟಾಗಿದೆ. ಏನಾದ್ರೂ ತೀರ್ಮಾನ ತೆಗೆದುಕೊಳ್ಳಬೇಕಾದ್ರೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಡಿ.ಕೆ ಶಿವಕುಮಾರ್ 5 ವರ್ಷ ಸಿಎಂ ಆಗಿರಬೇಕಿತ್ತು. ಕೆಲವು ಬೆಳವಣಿಗೆಯಿಂದಾಗಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಡಿ.ಕೆ ಶಿವಕುಮಾರ್ ಬಹಳ ಕಷ್ಟಪಟ್ಟು ಎಲ್ಲರನ್ನು ಒಗ್ಗೂಡಿಸಿ ಪಕ್ಷ ಕಟ್ಟುತ್ತಿದ್ದಾರೆ. ಕೆಲವರು ಮಾಡಿಟ್ಟ ಅಡುಗೆಯ ಊಟ ಮಾಡೋಕೆ ಬರ್ತಾರೆ. ಕಷ್ಟಪಟ್ಟವರಿಗೆ ಒಳ್ಳೇ ದಿನ ಬಂದೇ ಬರುತ್ತೆ. ಎಲ್ಲವನ್ನೂ ಹೈಕಮಾಂಡ್ ಎಂದಿದ್ದಾರೆ. ಒಂದು ರೀತಿಯಲ್ಲಿ ಡಿ.ಕೆ ಶಿವಕುಮಾರ್ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿರುವಂತೆ ಕಾಣ್ತಿದೆ.