ಬೆಂಗಳೂರು : ಮೇ.೨೯: ನಾನು ಓದಿದ ಶಾಲೆಗೆ ಭೇಟಿ ನೀಡಿ ನಮ್ಮ ಗುರುಗಳಾದ ಗೋಪಾಲಕೃಷ್ಣ (Gopalakrishna) ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ನ್ಯಾಷನಲ್ ಪಬ್ಲಿಕ್ ಶಾಲೆ (NPS) ದೇಶದಲ್ಲೇ ಮೊದಲ ಸ್ವಾಯತ್ತ ಶಾಲೆಯಾಗಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ನವೋದಯ ಮಾದರಿಯ ಉನ್ನತ ಗುಣಮಟ್ಟದ ಶಾಲೆ ಆರಂಭಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಇದನ್ನು ಯಾವ ರೀತಿ ಮಾಡಬೇಕು ಎಂದು ಮಾರ್ಗದರ್ಶನ ನೀಡಬೇಕು ಎಂದು ಗೋಪಾಲಕೃಷ್ಣ ಅವರ ಬಳಿ ಮನವಿ ಮಾಡಿದ್ದೇನೆ.
ಹಳ್ಳಿಯಿಂದ ಶಿಕ್ಷಣಕ್ಕೆ ಮಕ್ಕಳು ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸಿದ್ದೇವೆ. ನಾನು ಪರಮೇಶ್ವರ್ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಹಳ್ಳಿ ಜನರಿಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹಂಬಲವಿದೆ. ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು. ಇದು ನಮ್ಮ ಸರ್ಕಾರದ ಆದ್ಯತೆ.
ಕಾಂಗ್ರೆಸ್ ಪ್ರಣಾಳಿಕೆ ಭರವಸೆ ಜಾರಿ ಅಸಾಧ್ಯ ಎಂಬ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಯಾವುದೇ ಊಹಾಪೋಹಗಳ ಅಗತ್ಯವಿಲ್ಲ. ಚರ್ಚೆ ಮಾಡುವವರಿಗೆ, ಟೀಕೆ ಮಾಡುವವರಿಗೆ, ಸಲಹೆ ನೀಡುವವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಮಾತನಾಡುವವರು, ಟೀಕೆ ಮಾಡುವವರು ಮಾಡಲಿ. ನಾವು ಕೆಲಸ ಮಾಡಿ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು. ಬೆಂಗಳೂರಿನ ಅಧಿಕಾರಿಗಳ ಜತೆ ಸಭೆ ಬಗ್ಗೆ ಕೇಳಿದಾಗ, “ಅಧಿಕಾರಿಗಳ ಬೇಜವಾಬ್ದಾರಿಯಿಂದ ಯಾರಿಗೂ ತೊಂದರೆ ಆಗಬಾರದು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಹೀಗಾಗಿ ಸಭೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.