
ಸಿನಿಮಾ ರಂಗದವರಿಗೆ ವಾರ್ನಿಂಗ್ ಅಂತಾ ಆದ್ರೂ ಅನ್ಕೊಳಿ, ಮನವಿ ಅಂತಾ ಆದ್ರೂ ಅನ್ಕೊಳಿ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಮತ್ತೆ ಇವತ್ತು ಉಡುಪಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮೂಲಕ ಸಿನಿಮಾ ರಂಗಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್. ಸಿನಿಮಾ ರಂಗದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನನಗೆ ಗೊತ್ತಿರುವ ಸತ್ಯ ಹೇಳಿದ್ದೇನೆ. ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ, ನಮ್ಮ ನೀರು, ನಮ್ಮ ಹಕ್ಕಿನ ಹೋರಾಟಕ್ಕೆ ಅವರು ಬಂದಿಲ್ಲ. ನೆಲ ಜಲದ ವಿಚಾರದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಿದ್ದೇವೆ ಎಂದಿದ್ದಾರೆ.

ನಾವು ಮೇಕೆದಾಟು ಯಾತ್ರೆ ಮಾಡುವಾಗ ಯಾರು ಬರಲಿಲ್ಲ, ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ನಟ ಪ್ರೇಮ್, ದುನಿಯಾ ವಿಜಿ, ಸಾಧುಕೋಕಿಲ ಕೇಸು ಹಾಕಿಸಿಕೊಂಡರು. ಬಿಜೆಪಿಯವರು ಅವರ ಮೇಲೆ ಕೇಸ್ ಹಾಕಿದ್ದರು. ನಿನ್ನೆ ಆಗಿರೋದು ಯಾರ ಫಂಕ್ಷನ್ನು..? ಅದೇನು ನನ್ನ ಕಾರ್ಯಕ್ರಮನಾ..? ಫಿಲಂ ಇಂಡಸ್ಟ್ರಿ ಸತ್ತು ಹೋಯಿತು, ಥಿಯೇಟರ್ಗಳು ಮುಚ್ಚಿ ಹೋಯಿತು ಅಂತಾರೆ. ನಮ್ಮ ಊಟ ಹೋಯಿತು ಅಂತ ಮಾತಾಡ್ತಾರೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಯಾರಿಗೋಸ್ಕರ ಮಾಡೋದು..? ಇಂಡಸ್ಟ್ರಿ ಅಂತ ಹೇಳಿದರೆ ಕ್ಯಾಮರಾ ಮೆನ್, ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು.

ಅವರ ಹಬ್ಬದಲ್ಲಿ ಅವರೇ ಇಲ್ಲ ಅಂದರೆ ಹೇಗೆ..? ಎಂದಿರುವ ಡಿ.ಕೆ ಶಿವಕುಮಾರ್, ಆರ್. ಅಶೋಕ್ ಬೇಕಾದ್ರೆ ತಲೆ ಕೆಳಗೆ ಮಾಡಿಕೊಳ್ಳಲಿ, ಕಾರ್ಯಕರ್ತರು ಅನ್ನುವ ಅವಶ್ಯಕತೆ ಇಲ್ಲ. ನಾವು ಐಟಿ ಬಿಟಿ, ಇನ್ವೆಸ್ಟರ್ಸ್ ಮಿಟ್ ಮಾಡುತ್ತೇವೆ. ಅಲ್ಲಿಗೆ ಬಂದವರನ್ನು ಕಾಂಗ್ರೆಸ್ ಕಾರ್ಯಕರ್ತರು ಅನ್ನೋಕೆ ಆಗುತ್ತಾ..? ಗೃಹಲಕ್ಷ್ಮಿ, ಗೃಹ ಜ್ಯೋತಿ ಕಾಂಗ್ರೆಸ್ನವರಿಗೆ ಮಾತ್ರ ಕೊಡ್ತಾ ಇದ್ದೇವಾ? ಬಿಜೆಪಿ ಕಾರ್ಯಕರ್ತರು ಯಾರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಟ್ಟು ಬಿಡಿ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ ನೀವ್ಯಾರು ತಗೋಳಬೇಡಿ ಅಂತ ಹೇಳಲಿ. ಎಲ್ಲಾ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಉಡುಪಿಯ ಕಾಪುವಿನಲ್ಲಿ ಮಾರಿಗುಡಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಮಾರಿಗುಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಾಗೂ ಮಾರಿಗುಡಿ ಗದ್ದುಗೆ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು.ವಿಶಿಷ್ಟ ಕೆಂಪು ಕಲ್ಲಿನಲ್ಲಿ ಕೆತ್ತಲಾಗಿರುವ ಉಚ್ಚಂಗಿ ದೇವಿಯ ದರ್ಶನ ಮಾಡಿದ ಡಿ.ಕೆ ಶಿವಕುಮಾರ್, ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ರು. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸುತ್ತಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ತಮ್ಮ ಮಾತನ್ನು ಸಮರ್ಥಿಸಿಕೊಂಡರು.