ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ.. ನಿನ್ನೆ ವರ್ಷದ ಮೊದಲ ಹಬ್ಬದ ಆಚರಣೆ ಭರ್ಜರಿಯಾಗಿ ನಡೆದಿದ್ದು, ಈ ಬಾರಿಯ ಸಂಕ್ರಾಂತಿ ಎಲ್ಲರ ಬಾಳಿನಲ್ಲಿ ಹೊಸ ಉತ್ಸಾಹ ಹೊಸ ಯಶಸ್ಸು ತಂದು ಕೊಡಲಿ.

ಫಸಲು ಕೊಯ್ಲು ಆದ ಬಳಿಕ ಬರುವ ಮೊದಲ ಹಬ್ಬವೇ ಅದು ಸಂಕ್ರಾಂತಿ ಹಬ್ಬ. ಸಂಕ್ರಾಂತಿ ಎಂದ ತಕ್ಷಣ ಇದು ಸುಗ್ಗಿ ಹಬ್ಬ, ರೈತಾಪಿ ಜನರ ಸಡಗರ, ಸಂಭ್ರಮದ ಹಬ್ಬ ಅನ್ನೋದು, ಎಲ್ಲರಿಗೂ ತಿಳಿದ ವಿಚಾರ. ಈ ಹಬ್ಬವನ್ನ ಅತಿ ಹೆಚ್ಚು ರೈತರೇ ಇರುವ ಸಕ್ಕರೆನಾಡು ಮಂಡ್ಯ ಹಾಗೂ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.

ಈ ಸಂಕ್ರಾಂತಿ ಸಂಭ್ರಮದಲ್ಲಿ ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ರಾಶಿ ಪೂಜೆ ನೆರವೇರಿಸುವುದರ ಜೊತೆಗೆ ದೇವಿ ಪೂಜೆ, ಗೋ ಪೂಜೆಗಳನ್ನ ನೆರವೇರಿಸಿ, ಜೋಡಿ ಎತ್ತುಗಳ ಕಿಚ್ಚು ಹಾಯಿಸುವುದನ್ನು ಮಂಡ್ಯ ಹಾಗೂ ಮೈಸೂರು ಭಾಗಗಳಲ್ಲಿ ನೋಡಬಹುದು. ಸಾಮಾನ್ಯವಾಗಿ ಕಿಚ್ಚು ಹಾಯಿಸುವ ಜೋಡೆತ್ತುಗಳನ್ನು ಸಿಂಗಾರ ಮಾಡಿ ಅವುಗಳ ಮೇಲೆ ಒಂದಿಷ್ಟು ಬರಹಗಳನ್ನು ಬರೆಯಲಾಗಿರುತ್ತದೆ. ಆ ಊರಿನ ದೇವರ ಹೆಸರೋ , ಮೆಚ್ಚಿನ ಸಿನಿಮಾ ನಟನ ಹೆಸರೋ ಅಥವಾ ರಾಜಕಾರಣಿಗಳ ಹೆಸರೋ ಬರೆಯಲಾಗುತ್ತದೆ. ಆದರೆ ಈ ಬಾರಿ ಒಬ್ಬರು ವಿಶೇಷ ವ್ಯಕ್ತಿಯ ಹೆಸರು ಈ ಸಾಲಿನಲ್ಲಿ ಸೇರಿಕೊಂಡಿದೆ.

ಸಾಮಾನ್ಯವಾಗಿ ಮಂಡ್ಯ ಹಾಗೂ ಮೈಸೂರು ಭಾಗಗಳಲ್ಲಿ ಕಿಚ್ಚು ಹಾಯಿಸುವ ಎತ್ತುಗಳ ಮೈ ಮೇಲೆ ಸಿನಿಮಾ ನಟರು ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಲ್ಲಿ ಚಾಲೆಂಜಿಂಜ್ ಸ್ಟಾರ್ ದರ್ಶನ್ ಹೆಸರನ್ನು ಹೆಚ್ಚಾಗಿ ಬರೆಯಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ದರ್ಶನ್ ಹೆಸರು ಎಲ್ಲೆಡೆ ರಾರಾಜಿಸುತ್ತಿದೆ. ಈ ಬಾರಿ ಮಂಡ್ಯ ಹೈದ ಗಿಲ್ಲಿಯ ಹೆಸರು ಹಾಗೂ ಭಾವಚಿತ್ರ ಕೂಡ ಎತ್ತುಗಳ ಮೇಲೆ ರಾರಾಜಿಸುತ್ತಿದೆ.

ಹೌದು ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸ್ಪರ್ಧಿಯಾಗಿರುವ ಗಿಲ್ಲಿಯ ಹೆಸರು ಹಾಗೂ ಭಾವಚಿತ್ರ ಈ ಬಾರಿಯ ಎತ್ತುಗಳ ಮೇಲೆ ಕಂಡು ಬಂದಿದ್ದು, ಕರ್ನಾಟಕದಲ್ಲಿ ಫಿನಾಲೆ ತಲುಪಿರುವ ಗಿಲ್ಲಿ ನಟನ ಹವಾ ಹೇಗಿದೆ ಎನ್ನುವುದುದಕ್ಕೆ ಸಾಕ್ಷಿಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಪ್ರತಿಭೆ ಗಿಲ್ಲಿ ನಟ ಅವರ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗೆಲುವಿಗೆ ಸಂಪೂರ್ಣ ಮಂಡ್ಯ ಜಿಲ್ಲೆ ಹಾರೈಸುತ್ತಿದ್ದು, ರಾಜಕೀಯ ನಾಯಕರು ಕೂಡ ಗಿಲ್ಲಿ ಪರ ಮತ ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಗಿಲ್ಲಿಯ ಹವಾ ಜೋರಾಗಿದೆ.











