ಮಹಾರಾಷ್ಟ್ರ : ತಾಯಿ ಪ್ರತ್ಯಕ್ಷ ದೇವರು ಅಂತಾರೆ. ಆದರೆ ಮಹಾರಾಷ್ಟ್ರದ ಕಲಾಚೌಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪುತ್ರಿ ಆಕೆಯ ಮೃತದೇಹದೊಂದಿಗೆ ಮೂರು ತಿಂಗಳು ವಾಸ ಮಾಡಿದ್ದಾಳೆ. ತಾಯಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಕಬ್ಬಿಣದ ಕಪಾಟಿನಲ್ಲಿ ಸಂಗ್ರಹಿಸಿ ಇಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಮಹಿಳೆಯನ್ನು ವೀಣಾ(55) ಎಂದು ಗುರುತಿಸಲಾಗಿದೆ. ಪುತ್ರಿ ರಿಂಪಲ್ ಜೈನ್(24)ಳನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈಕೆ ಡಿಸೆಂಬರ್ ತಿಂಗಳಲ್ಲಿ ತಾಯಿಯನ್ನು ಕೊಲೆ ಮಾಡಿ ಚೂರಿಯಿಂದ ಆಕೆಯ ದೇಹವನ್ನು ತುಂಡು ತುಂಡು ಮಾಡಿದ್ದಳು ಎನ್ನಲಾಗಿದೆ. ನೆರೆಹೊರೆಯವರು ತಾಯಿ ಎಲ್ಲಿ ಎಂದು ಕೇಳಿದರೆ ಅವರು ಕಾನ್ಪುರಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಳು ಎನ್ನಲಾಗಿದೆ.

ತಾಯಿಯ ಮೃತದೇಹದಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ ಬಳಿಕ ನೆರೆಹೊರೆಯವರು ಈ ಬಗ್ಗೆ ರಿಂಪಲ್ ಬಳಿಯಲ್ಲಿ ಅನೇಕ ಬಾರಿ ತಗಾದೆ ತೆಗೆದಿದ್ದರು ಎನ್ನಲಾಗಿದೆ. ಮೃತದೇಹದ ವಾಸನೆಯನ್ನು ಮರೆ ಮಾಚಲು ಈಕೆ 200ಕ್ಕೂ ಅಧಿಕ ಪರ್ಫ್ಯೂಮ್ ಬಾಟಲಿ ಹಾಗೂ ರೂಮ್ ಫ್ರೆಶ್ನರ್ ಬಳಕೆ ಮಾಡಿದ್ದಳು ಎನ್ನಲಾಗಿದೆ. ಆದರೂ ವಾಸನೆ ಬಗ್ಗೆ ಅಕ್ಕ ಪಕ್ಕದ ಮನೆಯವರು ದೂರುತ್ತಲೇ ಇದ್ದ ಹಿನ್ನೆಲೆಯಲ್ಲಿ ಈಕೆ ಎಲ್ಲರೊಂದಿಗೆ ಸಂಪರ್ಕ ಕಡಿದುಕೊಂಡು ಮನೆಯ ಒಳಗೆ ವಾಸವಿದ್ದಳು ಎನ್ನಲಾಗಿದೆ.
ಮಂಗಳವಾರ ರಾತ್ರಿ ಎಂದಿನಂತೆ ಹಣ ನೀಡಲು ಬಂದ ಸೋದರ ಸಂಬಂಧಿಗೆ ರಿಂಪಲ್ ಮನೆ ಒಳಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಈತ ತನ್ನ ತಾಯಿ ಹಾಗೂ ಸಹೋದರನನ್ನು ರಿಂಪಲ್ ಮನೆಗೆ ಕರೆಯಿಸಿದ್ದಾನೆ. ಆಗಲೂ ಮನೆ ಒಳಗೆ ಪ್ರವೇಶಿಸಲು ಈಕೆ ಅವಕಾಶ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ರಿಂಪಲ್ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆಯ ತಪಾಸಣೆ ನಡೆಸಿದ ವೇಳೆಯಲ್ಲಿ ಕಪಾಟಿನ ಒಳಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಮೃತದೇಹದ ಕೊಳೆತ ತುಂಡುಗಳು ಪತ್ತೆಯಾಗಿದೆ. ಮಾನಸಿಕ ಸ್ಥಿಮಿತ ಸರಿಯಿಲ್ಲದೇ ರಿಂಪಲ್ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.