ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರ್ತಿದೆ. ದೋಸ್ತಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹಾಗು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು (Star Chandru) ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಗುರುವಾರ ಮಂಡ್ಯ ಕ್ಷೇತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸುವ ಮೂಲಕ ಮಂಡ್ಯ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಬಂದಿಲ್ಲ ಎನ್ನುವ ನಟ ದರ್ಶನ್, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ನೀಡಿ ಗೆಲ್ಲಿಸಿ ಎಂದು ಅಬ್ಬರಿಸಿದ್ದಾರೆ.

ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಪರ ಪ್ರಚಾರ ಮಾಡ್ತಿರೋದು ಹಾಲಿ ಸಂಸದೆ ಸುಮಲತಾ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಇತ್ತೀಚಿಗೆ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಬಹಿರಂಗ ಸಭೆಯಲ್ಲಿ ಬಹಿರಂಗ ಸವಾಲು ಹಾಕಿದ್ದರು. ಸುಮಲತಾ ಅವರೇ ಕಳೆದ ಬಾರಿಯ ಚುನಾವಣೆಯಲ್ಲಿ ನೀವು ಮಳವಳ್ಳಿ ಹುಚ್ಚೇಗೌಡನ ಸೊಸೆ ಎಂದು ಮತ ಕೇಳಿದ್ದಿರಿ, ಆ ಋಣವನ್ನ ಈ ಚುನಾವಣೆಯಲ್ಲಿ ತೀರಿಸಿ. ಕಳೆದ ಬಾರಿ ಅತಿ ಹೆಚ್ಚು ಮತ ಕೊಟ್ಟಿದ್ದು ಈ ಮಳವಳ್ಳಿ ತಾಲೂಕಿನ ಜನ. ಆ ಜನರಿಗೆ ಅವಮಾನ ಮಾಡುವ ಕೆಲಸ ಮಾಡಬೇಡಿ ಎಂದಿದ್ದರು. ಇದೀಗ ತಮ್ಮ ದತ್ತು ಮಗ ದರ್ಶನ್ರನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳಿಸುವ ಮೂಲಕ ಸುಮಲತಾ ಜಾಣತನ ಮೆರೆದಿದ್ದಾರೆ ಅನ್ನೋ ಮಾತು ಚರ್ಚೆ ಆಗ್ತಿದೆ.

ನಟ ದರ್ಶನ್ ಬೆಳಗ್ಗೆ 11 ಗಂಟೆ ಸುಮಾರಿಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮತಯಾಚನೆ ಶುರು ಮಾಡಿದರು. ತೆರೆದ ವಾಹನ ಏರಿದ ದರ್ಶನ್, ಅಭಿಮಾನಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರ ಕಡೆಗೆ ಕೈ ಬೀಸುತ್ತಾ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳುತ್ತಾ ಸಾಗಿದ್ರು. ನಡುವಲ್ಲಿ ಮಳೆ ಬಂದಾಗಲೂ ನಿಲ್ಲಿಸದ ದರ್ಶನ್, ಮಳೆಯಲ್ಲೇ ಪ್ರಚಾರ ಮಾಡಿದ್ರು. ಕಳೆದ ಬಾರಿ ನಮ್ಮ ಅಮ್ಮ ಸುಮಲತಾ ಪರವಾಗಿ ನರೇಂದ್ರ ಸ್ವಾಮಿ ಕೆಲಸ ಮಾಡಿದ್ದರು. ಹೀಗಾಗಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡ್ತಿದ್ದೇನೆ ಎಂದು ತಿಳಿಸಿದ್ರು. ಮಳವಳ್ಳಿ ತಾಲ್ಲೂಕಿನ ಹುಸ್ಕೂರು, ಹಾಡ್ಲಿ, ಬೆಳಕವಾಡಿ, ಪುರಿಗಾಲಿ ಸೇರಿದಂತೆ 17 ಗ್ರಾಮಗಳಲ್ಲಿ ದರ್ಶನ್ ಪ್ರಚಾರ ನಡೀತು.

ಸುಮಲತಾ ಬಳಿ ಈ ಬಗ್ಗೆ ಮಾತನಾಡದೆ ಮಂಡ್ಯದಲ್ಲಿ ದರ್ಶನ್ ಪ್ರಚಾರ ಮಾಡಲು ಹೋಗಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸಪೋರ್ಟ್ ಮಾಡಿತ್ತು. ಜೆಡಿಎಸ್ ಜೊತೆಗೆ ದೋಸ್ತಿ ಮಾಡಿಕೊಂಡರೂ ಒಳಗೊಳಗೆ ಕಾಂಗ್ರೆಸ್ ಸುಮಲತಾ ಬೆಂಬಲಿಸಿದ್ದರಿಂದಲೇ ಗೆದ್ದಿದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ಕಾರಣದಿಂದ ಈ ಬಾರಿ ಸುಮಲತಾ ರಾಜಕೀಯವಾಗಿ ಬಿಜೆಪಿ ಸೇರ್ಪಡೆ ಆದರೂ ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಸುಮಲತಾ ಹಾಗು ದರ್ಶನ್ ಬಾಂಧ್ಯವ್ಯ ಹೇಗಿದೆ ಎನ್ನುವುದನ್ನು ಬಲ್ಲ ಮಂಡ್ಯ ಜನರು ಸುಮಲತಾನೇ ಮುಂದೆ ನಿಂತು ಕಳುಹಿಸಿದ್ದಾರೆ. ಇತ್ತೀಚಿಗೆ ರಾಜಕೀಯ ನಿರ್ಧಾರ ತಿಳಿಸುವ ಸಂದರ್ಭದಲ್ಲೂ ದರ್ಶನ್ ಸುಮಲತಾ ಜೊತೆಗಿದ್ದರು. ಈಗಲೂ ದರ್ಶನ್ ಸುಮಲತಾ ಮಾತನಾಡಿಕೊಂಡೇ ಹೀಗೆ ಮಾಡಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಬೆಂಕಿ ಹಾಕಿಕೊಳ್ತಿದ್ದಾರೆ.

ಕೃಷ್ಣಮಣಿ






