ಕಳೆದ ಕೆಲವು ದಿನಗಳಿಂದ ಕನ್ನಡದ ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಕನ್ನಡ ಚಿತ್ರಲೋಕದ ಕೆಲವು ʼದೊಡ್ಡʼ ಮನುಷ್ಯರ ಬೀದಿ ಜಗಳದ ಕುರಿತೇ ಗಮನ ಕೇಂದ್ರೀಕರಿಸಿದೆ. ಕುಮಾರಸ್ವಾಮಿ vs ಸುಮಲತಾ ನಡುವಿನ ವಾಕ್ಸಮರಗಳು ಹಿನ್ನೆಲೆಗೆ ಸರಿಯುತ್ತಿದ್ದಂತೆಯೇ ಸುಮಲತಾ ಪರವಾಗಿ ಮತ ಪ್ರಚಾರ ಮಾಡಿರುವ ದರ್ಶನ್ ಅವರ ವಿವಾದ ಮುನ್ನೆಲೆಗೆ ಬಂದಿದೆ. ಬಹುಷ ಇದು ಕಾಕತಾಳೀಯ!
ಅದೇನೆ ಇರಲಿ, ಟಿಆರ್‌ಪಿಯ ಹಿಂದೆ ರಣ ಹದ್ದುಗಳಂತೆ ಓಡುತ್ತಿರುವ ಟಿವಿ ಮಾಧ್ಯಮಗಳು ದಿನದ 24 ಗಂಟೆಯೂ ಇಂದ್ರಜಿತ್ ಅಥವಾ ದರ್ಶನ್ ಕುರಿತಾದ ಸುದ್ದಿಯನ್ನೇ ಬಿತ್ತರಿಸುತ್ತಿದೆ. ಪಕ್ಕಾ ಉದ್ಯಮವಾಗಿ ಕಾರ್ಯ ನಿರ್ವಹಿಸುವ ಟಿವಿ ಮಾಧ್ಯಮಗಳು ತಮಗೆ ತಾವು ಯಾವುದೇ ಸಮಜಾಯಿಷಿ ನೀಡಿಕೊಂಡರೂ, ಪದೇ ಪದೇ ದರ್ಶನ್, ಇಂದ್ರಜಿತ್ ಅಸಭ್ಯ ಪದಬಳಕೆಯನ್ನು ತಿರುವಿ ತಿರುವಿ ಪ್ರಸಾರ ಮಾಡುತ್ತಾ ದರ್ಶನ್ – ಇಂದ್ರಜಿತ್ ತೋರಿದ ಅಸೂಕ್ಷ್ಮತೆಯನ್ನೇ ಪಾಲಿಸುತ್ತಿರುವುದು ಕನ್ನಡ ವೀಕ್ಷಕರ ದೌರ್ಭಾಗ್ಯ..!
ಸಿನೆಮಾ ಅನ್ನುವುದು ಏಕಕಾಲಕ್ಕೆ ದೊಡ್ಡ ಸಮೂಹದ ಮೇಲೆ ಪ್ರಭಾವ ಬೀರುವಂತಹ ಮಾಧ್ಯಮ. ಸಿನೆಮಾ ಮಾತ್ರವಲ್ಲ, ಸಿನೆಮಾ ನಟರು ತಮ್ಮ ಅಭಿಮಾನಿಗಳ ಮೇಲೆ ಪ್ರಭಾವ ಬೀರುವಷ್ಟು ತಾಕತ್ತು ಹೊಂದಿದ್ದಾರೆ. ದರ್ಶನ್‌ರಂತಹ ಅಪಾರ ಅಭಿಮಾನಿ ವರ್ಗ ಹೊಂದಿರುವಂತಹ ನಟರು ಈ ಹಿನ್ನೆಲೆಯಲ್ಲಿ ತಾವು ಆಡುವ ಮಾತುಗಳ ಕುರಿತು ಸೂಕ್ಷ್ಮ ಎಚ್ಚರಿಕೆಯನ್ನು ಹೊಂದಿರಬೇಕಾಗಿರುವುದು ಈ ಕಾರಣಕ್ಕೆ.
ಹೀಗೆ ಪ್ರಭಾವ ಬೀರುವಂತಹ ವ್ಯಕ್ತಿತ್ವಗಳು ಹಿಂಸಾತ್ಮಕ ಮಾತುಗಳಿಂದ, ಅಸಭ್ಯ ಪದಬಳಕೆಯಿಂದ ದೂರ ನಿಂತು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಬೇಕು. ತಮ್ಮ ಮೇಲೆ ಅಭಿಮಾನವಿಟ್ಟ ಜನರಿಗೆ ಸಾರ್ವಜನಿಕ ವ್ಯಕ್ತಿಗಳು ಮಾಡುವ ಕನಿಷ್ಟ ಉಪಕಾರ ಇದು.
ಆದರೆ, ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಬಂದು ʼಗಂಡುಸ್ತನ, ಗಾಂ*, ತಲೆ ಕಡೀತಿನಿʼ ಎಂಬಂತಹ ಪುರುಷ ಮೇಲರಿಮೆಯ ಮಾತುಗಳನ್ನಾಡುತ್ತಾ ಸಿನೆಮಾದಂತೆಯೇ ಲಾಂಗು, ಮಚ್ಚುಗಳೆಂದು ಆವಾಝ್ ಹಾಕುವುದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಹೋಗುತ್ತದೆಯೆನ್ನುವುದನ್ನು ಜನಪ್ರಿಯ ನಾಯಕ ನಟ ದರ್ಶನ್ ಅವರು ಅರಿತುಕೊಳ್ಳಬೇಕು.
ಇಂದ್ರಜಿತ್ ಲಂಕೇಶ್ ಕೂಡಾ, ದರ್ಶನ್ ವಿಚಾರದಲ್ಲಿ ವೈಯಕ್ತಿಕ ಹಗೆ ಸಾಧಿಸುವಂತಹ ಪ್ರಯತ್ನ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅನಗತ್ಯವಾಗಿ ಈ ವಿಚಾರದಲ್ಲಿ ತಲೆ ಹಾಕಿ ರಂಪಾಟಕ್ಕೆ ಕಾರಣವಾಗಿದ್ದಾರೆ ಎನ್ನುವ ಆರೋಪ ಅವರ ಮೇಲೆ ಕೇಳಿ ಬರುತ್ತಿದೆ.
ಹೊಟೆಲಿನ ಸಪ್ಲೈಯರ್ ವಿರುದ್ಧ ದರ್ಶನ್ ಹಲ್ಲೆ ಮಾಡಿದ್ದರೆ, ಅಥವಾ ಮಾಡಿರುವ ಕುರಿತು ತನಗೆ ಮಾಹಿತಿ ಇದ್ದಿದ್ದರೆ ಅದನ್ನು ಇಂದ್ರಜಿತ್ ಸಾರ್ವಜನಿಕವಾಗಿ ಹೇಳಿಕೊಳ್ಳಬಹುದು. ಆದರೆ ಅದನ್ನೇ ಮುಂದಿಟ್ಟು, ಮೈಸೂರಿನ ಪೊಲೀಸರೇನು ಕೈಗೆ ʼಬಳೆ ತೊಟ್ಟಿದ್ದಾರʼ ಎಂದು ಪ್ರಶ್ನಿಸುವುದು, ಕೈಗೆ ಬಳೆ ತೊಟ್ಟವರು ಕೈಲಾಗದವರು ಎಂಬಂತಹ ಪುರುಷ ಕೇಂದ್ರಿತ ಮಾತುಗಳನ್ನು ಪತ್ರಕರ್ತನಾದವನು ಆಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿದೆ.
ಅದೇ ವೇಳೆ, ಪ್ರಕರಣವೊಂದಕ್ಕೆ ಅನಗತ್ಯವಾಗಿ ಜಾತಿ ಆಯಾಮ ಕಟ್ಟಿ ಚಿತ್ರಿಸುವುದು ಕೆಟ್ಟ ನಡವಳಿಕೆ, ಮಾತ್ರವಲ್ಲ ಅಕ್ಷಮ್ಯ ಕೂಡಾ. ʼಒಬ್ಬ ದಲಿತನಿಗೆ ಆತನ ಜಾತಿ ಹಿನ್ನೆಲೆಗಾಗಿ ದಬ್ಬಾಳಿಕೆ ನಡೆದಿದ್ದರೆ ಖಂಡಿತವಾಗಿಯೂ ಆ ಅನ್ಯಾಯದ ಮೂಲ ಕಾರಣವಾಗಿರುವ ಜಾತಿಯನ್ನು ಉಲ್ಲೇಖಿಸಲೇಬೇಕುʼ.
ಆದರೆ, ಹೊಟೆಲಿನಲ್ಲಿ ನಡೆದಿದೆಯೆನ್ನಲಾದ ಹಲ್ಲೆ ಪ್ರಕರಣದಲ್ಲಿ ಸಪ್ಲೈಯರ್ ದಲಿತನೆಂಬ ಕಾರಣಕ್ಕೆ ಹಲ್ಲೆಯಾಗಿದೆಯೆಂದು ಇಂದ್ರಜಿತ್ ಅವರ ಹೇಳಿಕೆಯಲ್ಲೇ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಹೀಗಿರುವಾಗ ವೃಥಾ ದಲಿತ ಪದವನ್ನು ಎಳೆದು ತಂದು ನಿಜವಾಗಿ ದಲಿತರ ಮೇಲಾಗುವ ದೌರ್ಜನ್ಯದ ಗಂಭೀರತೆಯನ್ನು ತನ್ನ ವೈಯಕ್ತಿಕ ಹಗೆತನಗಳಿಗಾಗಿ ಬಳಸಿಕೊಂಡಿದ್ದಾರೆ. ಹಾಗೂ ದರ್ಶನ್ರನ್ನು ಅವಿದ್ಯಾವಂತ ಎಂದು ಕರೆಯುವ ಮೂಲಕ ತನ್ನ ಬೌದ್ಧಿಕ ಅಹಂಕಾರ ಪ್ರದರ್ಶಿಸಿದ್ದಾರೆ.
ಹಾಗೆಂದು, ದರ್ಶನ್ ಅಮಾಯಕರು ಎಂದಲ್ಲ. ತಮ್ಮ ನಟನೆಯಿಂದಲೂ ತಮ್ಮ ಸಾರ್ವಜನಿಕ ನಡೆವಳಿಕೆಯಿಂದಲೂ ಹಿರಿತನ ತೋರಿಸಿರುವ ರಾಜ್‌ಕುಮಾರ್, ವಿಷ್ಣುವರ್ಧನ್‌ನಂತಹ ಮೇರು ವ್ಯಕ್ತಿತ್ವಗಳ ಚಿತ್ರಲೋಕದ ಓರ್ವ ಪ್ರತಿನಿಧಿಯಾಗಿ ಅಗೌರವಯುತವಾಗಿ ಪ್ರತಿಕ್ರಿಯಿಸಿ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕಳಂಕ ತರದಂತೆ ಜಾಗರೂಕರಾಗಬೇಕಾದ ಅನಿವಾರ್ಯತೆ ಎಲ್ಲಾ ನಟ-ನಟಿಯರುಗಳೂ ಪಾಲಿಸಬೇಕು. ದರ್ಶನ್ ಅವರು ಕೂಡ ಇದಕ್ಕೆ ಹೊರತಲ್ಲ.
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಶ್ರೀನಿವಾಸ ತೂಗುದೀಪ ಅವರ ಕೊಡುಗೆಗಳನ್ನಾದರೂ ಗಮನಿಸಿ ದರ್ಶನ್ ಸೌಜನ್ಯಪೂರಕವಾಗಿ ನಡೆದುಕೊಳ್ಳಬೇಕು. ರೈತರ ರಾಯಭಾರಿಯೂ ಆಗಿರುವ ದರ್ಶನ್ ತಲೆ ಕಡಿಯುತ್ತೇನೆ, ಮಚ್ಚು ಹಿಡಿಯುತ್ತೇನೆ ಎಂಬಂತೆ ಮಾತಗಳಾಡಿ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ರೈತ ಮುಖಂದರೇ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ರೈತರ ರಾಯಭಾರಿ, ಕಲಾವಿದ ಮಾತ್ರವಲ್ಲ ಓರ್ವ ಮನುಷ್ಯನಾಗಿಯೂ ಕೂಡಾ ದರ್ಶನ್ ಇಂತಹ ಮಾತುಗಳನ್ನು ಆಡಬಾರದೆಂಬುದು ಸದಭಿರುಚಿಯ ಅಭಿಮಾನಿಗಳ, ನಾಗರಿಕರ ವಿನಂತಿ.
ಯಾರದ್ದೋ ಮೇಲಿನ ಜಿದ್ದಿಗಾಗಿ, ಇನ್ಯಾರನ್ನೋ ಹಣಿಯಲು ಲೈಂಗಿಕ ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಅವಹೇಳನ ಮಾಡುವಂತಹ ಪ್ರವೃತ್ತಿಯಿಂದ ಇನ್ನೂ ಹೊರಬಾರದ ಪುರುಷಾಹಂಕಾರದ ಮಾತುಗಳು ಓರ್ವ ಕಲಾವಿದನಿಗೆ ಮಾತ್ರವಲ್ಲ, ಯಾರಿಗೂ ತಕ್ಕುದಲ್ಲ. ಲೈಂಗಿಕ ಅಲ್ಪಸಂಖ್ಯಾತರನ್ನು ಅವಹೇಳಿಸುವಂತಹ, ಲಿಂಗ ತಾರತಮ್ಯದ ಅಸೂಕ್ಷ್ಮ ಪದಬಳಕೆಯನ್ನು ಆಡುತ್ತಾ ಅವುಗಳನ್ನು ಇನ್ನಷ್ಟು ಸಹಜ ಬಳಕೆಯಾಗಿ ಮಾಡದಿರುವಂತಹ ಸಮಾಜ ನಿರ್ಮಿಸುವಲ್ಲಿ ಗಂಭೀರ ಪಾತ್ರವನ್ನು ದರ್ಶನ್ ರಂತಹವರು ಪಾಲಿಸಬೇಕು.
ಕನ್ನಡ ಸಾಂಸ್ಕೃತಿಕ ಲೋಕದ ಇವರುಗಳೇ ಈ ರೀತಿ ಮನುಷ್ಯ ಸಂವೇದನೆಯನ್ನು ಕಳೆದುಕೊಂಡು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿಯುವ ಅಪಾಯ ಇರುವುದರಿಂದ, ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯರು ಇಂತಹ ನಡೆವಳಿಕೆಗಳನ್ನು ಮುಲಾಜಿಲ್ಲದೆ ಖಂಡಿಸಿ, ಕಿರಿಯರಿಗೆ ಬುದ್ದಿ ಹೇಳಬೇಕು. ಅಂತಹ ಒಂದು ಮುಂದಾಳತ್ವದ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕನ್ನಡತನಕ್ಕೆ ಧಕ್ಕೆ ಬರುವಾಗಲೆಲ್ಲಾ ಮುಂದೆ ನಿಲ್ಲುವಂತೆ ನೋಡಬೇಕಿದೆ.