ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ ಜೈಲಿನಲ್ಲೂ ಬಿಂದಾಸ್ ಆಗಿದ್ದಾರೆ ಅನ್ನೋದಕ್ಕೆ ಸಾಕ್ಷಿಗಳು ಬಿಡುಗಡೆ ಆಗಿದ್ವು. ರೆಸಾರ್ಟ್ ರೀತಿಯಲ್ಲಿ ರೌಡಿಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ರಿಲೀಸ್ ಆಗಿತ್ತು. ಆ ಬಳಿಕ ಬೆಂಗಳೂರಿನ ರೌಡಿಶೀಟರ್ ಸತ್ಯ ಜೊತೆಗೆ ವಿಡಿಯೋ ಕಾಲ್ ಮಾಡಿದ್ದೂ ಕೂಡ ಬಯಲಾಗಿತ್ತು.
ಆ ಎರಡು ವಿಚಾರಗಳೇ ಭಾರೀ ಸದ್ದು ಮಾಡುವಾಗ ಬ್ಯಾರಕ್ ಒಳಗೆ ಬೆಡ್ ಮೇಲೆ ಸಹಕೈದಿ ಜೊತೆ ಕುಳಿತು ನಟ ದರ್ಶನ್ ಹರಟೆ ಹೊಡೆಯುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಸದ್ಯ ಈಗಾಗಲೇ 9 ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಇದೀಗ ಹೊಸ ಫೋಟೋ ಬಿಡುಗಡೆ ಆಗಿದ್ದು, ಅದರ ಬಗ್ಗೆಯೂ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ರೌಡಿಶೀಟರ್ಗಳ ಜೊತೆ ದರ್ಶನ್ ಕುಳಿತು ಮಾತನಾಡ್ತಿರುವ ಫೋಟೋ ವೈರಲ್ ಆಗ್ತಿದ್ದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಜೈಲು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಬಂಧಿಖಾನೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ದರ್ಶನ್ ವಿರುದ್ಧ ಮತ್ತೆ 3 FIR ದಾಖಲಾಗಿದೆ ಎಂದಿದ್ದಾರೆ.
ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿರುವುದು, ಜೈಲಿನ ಒಳಗಡೆ ಸಿಗರೇಟ್ ಕೊಟ್ಟಿರುವುದು ಸೇರಿದಂತೆ FIR ಮಾಡಿಕೊಂಡು ಸಿಸಿಟಿವಿ ಪರಿಶೀಲನೆ ಮಾಡ್ತಿದ್ದೇವೆ. ಸಿಸಿ ಕ್ಯಾಮರಾಗಳ ಪರಿಶೀಲನೆ ವೇಳೆ ಕರ್ತವ್ಯ ಲೋಪ ಗೊತ್ತಾಗಿದೆ. ಅಧಿಕಾರಿಗಳ ವೈಫಲ್ಯದಿಂದ ಇಷ್ಟೆಲ್ಲಾ ನಡೆದಿದೆ ಎಂದಿದ್ದಾರೆ. ಇದೇ ವೇಳೆ ಆರೋಪಿಗಳನ್ನು ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.