
D BOSS ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಜೂನ್ 8 ರಂದು ನಡೆದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಜೈಲು ಸೇರಿದ್ದ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಗುರುವಾರ ಮುಗಿದಿತ್ತು ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ದರ್ಶನ್ ಅನ್ನು ಹಾಜರುಪಡಿಸಿದ್ದರು.

ನಟ ದರ್ಶನ್ ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಸ್ತರಣೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪಾತ್ರವಿರುವ ಎಲ್ಲರನ್ನು ಅನ್ನಪೂರ್ಣೇಶ್ವರಿ ಪೊಲೀಸರು ಬಂಧಿಸಿ ವಿಚಾರ ನಡೆಸಿದ್ದರು. ಅವರೆಲ್ಲರನ್ನು ಇಂದು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಕೋರ್ಟ್ ಮುಂದೆ ನಿಲ್ಲಿಸಲಾಗಿತ್ತು.ನಟ ದರ್ಶನ್ ಪ್ರೇಯಸಿ ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆ ತಂದು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.

ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಮನಬಂದಂತೆ ಹಲ್ಲೆ ಮಾಡಿದ್ದರು ಎಂಬ ಬಲವಾದ ಸಾಕ್ಷ್ಯ ಸಿಕ್ಕಿತ್ತು. ಕರೆಂಟ್ ಶಾಕ್ ಕೊಟ್ಟು, ಕಬ್ಬಿಣದ ಸರಳಿನಿಂದ ಹೊಡೆದು, ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ದರ್ಶನ್ A2 ಆರೋಪಿಯಾಗಿದ್ದು, ಪವಿತ್ರಾಗೌಡ A1 ಆರೋಪಿ ಆಗಿದ್ದಾರೆ. ಇದೀಗ ಮತ್ತೆ ಡಿ ಆಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.