ಸದಾ ಒಂದಿಲ್ಲೊಂದು ವಿವಾದಗಳ ಕೇಂದ್ರವಾಗುವ ನಟ ದರ್ಶನ್ ತೂಗುದೀಪ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡದ ಪ್ರಮುಖ್ ಟಿವಿ ವಾಹಿನಿಗಳು ದರ್ಶನ್ ಬಗ್ಗೆ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲವಾದರೂ ಇತರೆ ಡಿಜಿಟಲ್ ಮಾಧ್ಯಮಗಳ ಮೂಲಕ ದರ್ಶನ್ ಸುದ್ದಿಯಲ್ಲಿದ್ದಾರೆ. ಮುಂಬರುವ ʼಕ್ರಾಂತಿʼ ಚಿತ್ರದ ಹಾಡಿನ ಬಿಡುಗಡೆ ವೇಳೆ ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯಕ್ಕೆ ಕನ್ನಡ ಚಿತ್ರರಂಗವೇ ಬೆಚ್ಚಿ ಬಿದ್ದಿದೆ.
ಕ್ರಾಂತಿ ಚಿತ್ರದ ಪ್ರಚಾರದ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ಕಿಡಿಗೇಡಿಗಳು ವಿಕೃತಿ ತೋರಿಸಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತಾದರೂ, ಅದು ಎಸೆದಿರುವುದು ಯಾರು ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ. ಸದ್ಯ ಲಭ್ಯವಿರುವ ವಿಡಿಯೋದಲ್ಲಿ ದರ್ಶನ್ ಮೇಲೆ ಮಾತ್ರ ಚಪ್ಪಲಿ ಬೀಳುವಂತೆ ಕಂಡು ಬಂದಿದ್ದರೂ, ಅಲ್ಲಿದ್ದ ನಟಿ ರಚಿತರಾಮ್ ಹಾಗೂ ಸ್ಥಳೀಯ ರಾಜಕಾರಣಿ ಒಬ್ಬರ ಪುತ್ರರ ಮೇಲೂ ಚಪ್ಪಲಿ ಎಸೆತ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿ ಮೂಲಗಳು ಹೇಳಿವೆ. ಅದಾಗ್ಯೂ, ಅದಕ್ಕೆ ಸಾಕ್ಷಿಗಳೇನೂ ಸಿಕ್ಕಿಲ್ಲ.
ಈಗ ವಿಷಯ ಇರುವುದು ಅದಲ್ಲ. ಜನಪ್ರಿಯ ನಟನೊಬ್ಬನಿಗೆ ಸಾರ್ವಜನಿಕವಾಗಿ ಚಪ್ಪಲಿ ಎಸೆದು ಅವಮಾನ ಮಾಡುವಂತಹ ಕೃತ್ಯಕ್ಕೆ ಪ್ರಚೋದನೆ ಏನು ಅನ್ನುವುದು ಕೂಡಾ ಚರ್ಚಾರ್ಹ.!
ಅಪ್ಪು ಹೆಸರು ಥಳುಕು ಹಾಕಿಕೊಂಡದ್ದೇಕೆ?
ಹೇಳಿ ಕೇಳಿ, ಹೊಸಪೇಟೆಗೂ ದಿವಂಗತ ಪುನೀತ್ ರಾಜ್‌ಕುಮಾರ್ ರಿಗೂ ಅವಿನಾಭಾವ ನಂಟಿದೆ. ಇಡೀ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ತುಂಬಿದ್ದಾರೆ. ಹೊಸಪೇಟೆಯಲ್ಲಿ ನಿಂತು ಸುಮ್ಮನೆ ಒಂದು ಸಣ್ಣ ಕಲ್ಲು ಎಸೆದರೂ ಅದು ಒಬ್ಬ ಅಪ್ಪು ಅಭಿಮಾನಿಗೆ ತಾಗುತ್ತೆ, ಅಷ್ಟೊಂದು ಅಪ್ಪು ಅಭಿಮಾನಿಗಳು ಇಲ್ಲಿದ್ದಾರೆ ಎಂಬ ಮಾತೊಂದಿದೆ. ಹೊಸಪೇಟೆಯ ಜನರ ಅಭಿಮಾನಕ್ಕೂ ಅಪ್ಪು ಫಿದಾ ಆಗಿದ್ದರು. ರಣವಿಕ್ರಮ, ಜೇಮ್ಸ್, ದೊಡ್ಮನೆ ಹುಡ್ಗ ಸೇರಿದಂತೆ ಅಪ್ಪು ಅವರ ಹಲವು ಚಿತ್ರದ ಚಿತ್ರೀಕರಣವನ್ನೂ ಹೊಸಪೇಟೆಯಲ್ಲೇ ನಡೆಸಲಾಗಿದೆ. ಅದೂ ಅಲ್ಲದೆ, ಪದೇ ಪದೇ ಹೊಸಪೇಟೆಗೆ ಭೇಟ ನೀಡುತ್ತಿದ್ದ ಅಪ್ಪು, ಅಲ್ಲಿನ ಅಭಿಮಾನಿಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.
ಅಚಾನಕ್ ಆಗಿ ಅಪ್ಪು ಅಗಲಿದಾಗ ಇಡಿಯ ಕರ್ನಾಟಕದಂತೆ ಹೊಸಪೇಟೆಯೂ ಶೋಕ ಸಾಗರದಲ್ಲಿ ಮುಳುಗಿತ್ತು. ನಂತರ ತನ್ನ ನೆಚ್ಚಿನ ನಟನ ಹೆಸರನ್ನು ಸರ್ಕಲ್‌ಗೆ ಇಡುವಂತೆ ಅಲ್ಲಿನ ಜನರೂ ಒತ್ತಾಯಿಸಿ, ಅಪ್ಪು 7 ಅಡಿಯ ಪುತ್ಥಳಿಯನ್ನೂ ನಿರ್ಮಿಸಿದ್ದರು.
ಇಷ್ಟೇ ಆಗಿದ್ದರೆ, ಈ ಕತೆ ಇಲ್ಲಿಗೆ ಮುಗಿಯುತ್ತಿತ್ತು. ಆದರೆ, ದರ್ಶನ್ ಯೂಟ್ಯೂಬ್ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆಯೊಂದು ತಪ್ಪಾಗಿ ಅರ್ಥೈಸಲ್ಪಟ್ಟು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಬಳಿಕ ನಡುಗಿದ ವಿದ್ಯಾಮಾನಗಳಿಗೂ ಈಗ ನಡೆದ ಘಟನೆಗೂ ಸಂಬಂಧವಿದೆ ಎನ್ನಲಾಗುತ್ತಿದೆ.
ದರ್ಶನ್ ತಮ್ಮ ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡುವ ಭರದಲ್ಲಿ ಪುನೀತ್ ಹಾಗೂ ಅವರ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆಂಬುದು ಅಪ್ಪು ಅಭಿಮಾನಿಗಳ ಆರೋಪ. ಇದಕ್ಕಾಗಿ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡಿದ್ದರು. ಅದಾಗ್ಯೂ ದರ್ಶನ್ ಮೇಲೆ ಪುನೀತ್ ಅಭಿಮಾನಿಗಳ ಕೋಪ ಹಾಗೇ ಉಳಿದಿತ್ತು. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ಅತಿಕೆಟ್ಟ ಫ್ಯಾನ್ ವಾರ್ ಗಳ ವೇಳೆ ದರ್ಶನ್ ಅಭಿಮಾನಿಗಳು ಡಾ. ರಾಜ್ ವಂಶವನ್ನು, ಪುನೀತ್ ರನ್ನೂ ನಿಂದಿಸುವುದು ನಡೆಯುತ್ತಲೇ ಇತ್ತು. ಇನ್ನೊಂದೆಡೆ ವಿಷ್ಣು ಅಭಿಮಾನಿಗಳೂ ದರ್ಶನ್ ಅಭಿಮಾನಿಗಳೊಂದಿಗೆ ಸೇರಿ ದೊಡ್ಮನೆಯ ನಿಂದನೆಯಲ್ಲಿ ತೊಡಗಿದ್ದರು.
ಈ ನಡುವೆ, ಕ್ರಾಂತಿ ಚಿತ್ರದ ಹಾಡನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲೂ ಒಂದು ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಅಸಲಿ ಜಿದ್ದು ಆರಂಭಗೊಳ್ಳುವುದು ಇಲ್ಲಿಂದಲೇ..
ಹೊಸಪೇಟೆ ಅಪ್ಪು ಕೋಟೆ, ಇಲ್ಲಿ ಪುನೀತ್ ರನ್ನು ಅವಮಾನಿಸಿದವರು ಬಂದು ಪ್ರಚಾರ ಮಾಡಬಾರದು ಎಂದು ಕೆಲವು ವಿಕೃತ ಪುನೀತ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ದರ್ಶನ್ ಅಭಿಮಾನಿಗಳು ಹೊಸಪೇಟೆಯಲ್ಲಿ ನಡೆಯುವ ಕ್ರಾಂತಿ ಪ್ರಚಾರವನ್ನು ಬಹಳವೇ ವಿಜೃಂಭಿಸಿದರು.
ಆನೆ ಬರ್ತಾ ಇದೆ, ತಾಕತ್ತಿದ್ದರೆ ಕಟ್ಟಿ ಹಾಕಿ…!
ವಿವಾದ ತೀವ್ರಗೊಳ್ಳುವಂತೆ ದರ್ಶನ್ ಅಭಿಮಾನಿಗಳು ಹೊಸಪೇಟೆಯಲ್ಲಿ ಮತ್ತೊಂದು ವಿಕೃತಿಯನ್ನು ಮೆರೆದರು. ʼಆನೆ ಬರ್ತಾ ಇದೆ, ತಾಕತ್ತಿದ್ದರೆ ಕಟ್ಟಿ ಹಾಕು…!ʼ ಎಂದು ದರ್ಶನ್ ಪರವಾಗಿ ಹೊಸಪೇಟೆಯಲ್ಲಿ ಬ್ಯಾನರ್ ಒಂದನ್ನು ದರ್ಶನ್ ಅಭಿಮಾನಿಗಳು ಹಾಕಿದ್ದರು. ಇದು ಅಪ್ಪು ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು.
ಹಾಡು ಬಿಡುಗಡೆಗೆ ಚಿತ್ರತಂಡದೊಂದಿಗೆ ಭಾನುವಾರ ಸಂಜೆ ನಗರಕ್ಕೆ ಬಂದಿದ್ದ ನಟ ದರ್ಶನ್ ತೂಗುದೀಪ ಅವರು ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದರು. ಅಪ್ಪು ಅಭಿಮಾನಿಗಳ ಆಕ್ರೋಶ ಗಮನಿಸಿದ ಚಿತ್ರತಂಡವು 15 ನಿಮಿಷದಲ್ಲೇ ಕಾರ್ಯಕ್ರಮ ಮುಗಿಸಿ ಅಲ್ಲಿಂದ ತೆರಳಿತು.
‘ಕ್ರಾಂತಿ’ ಸಿನಿಮಾದ ‘ಬೊಂಬೆ.. ಬೊಂಬೆ’ ಹಾಡು ಬಿಡುಗಡೆಗೆ ನಗರದ ವಾಲ್ಮೀಕಿ ವೃತ್ತದಲ್ಲಿ ತೆರೆದ ಲಾರಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೃತ್ತದುದ್ದಕ್ಕೂ ದರ್ಶನ್ ಅವರ ಫ್ಲೆಕ್ಸ್ ಹಾಕಲಾಗಿತ್ತು. ಮೊದಲೇ ಕೆರಳಿದ್ದ ಅಪ್ಪು ಅಭಿಮಾನಿಗಳು ಅದರ ಬಳಿಯೇ ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್, ಬ್ಯಾನರ್ ಕೂಡ ಹಾಕಿದ್ದರು. ಪುನೀತ್ ಭಾವಚಿತ್ರ, ಅವರ ಚಿತ್ರವಿರುವ ಧ್ವಜ, ಪೋಸ್ಟರ್ ಹಿಡಿದು ಇಡೀ ನಗರ ಸುತ್ತಾಡಿದರು.
ರಾತ್ರಿ ಎಂಟು ಗಂಟೆಗೆ ದರ್ಶನ್ ಹಾಗೂ ಚಿತ್ರತಂಡ ಕಾರ್ಯಕ್ರಮ ಸ್ಥಳಕ್ಕೆ ಬರುತ್ತಿದದಂತೆ ಅಪ್ಪು ಅಭಿಮಾನಿಗಳ ಆಕ್ರೋಶ ಏರುತ್ತಲೇ ಹೋಯಿತು . ದರ್ಶನ್ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ಎದುರಿನಲ್ಲೇ ಅವರ ಬ್ಯಾನರ್ ಹರಿದು ಹಾಕಿದರು. ಅಪ್ಪು.. ಅಪ್ಪು ಎಂದು ಜಯಘೋಷ ಹಾಕಿದರು. ದರ್ಶನ್ ಬಂದ ಬಸ್ಸಿನ ಮೇಲೆ ಯುವಕರ ಗುಂಪೊಂದು ಪುನೀತ್ ಅವರ ಭಾವಚಿತ್ರ ಹಿಡಿದುಕೊಂಡು ಕುಣಿಯಿತು. ಈ ಎಲ್ಲಾ ಗೊಂದಲದ ನಡುವೆ ದರ್ಶನ್ ಬ್ಯಾನರ್ ಹರಿಯಲಾಯಿತು, ದರ್ಶನ್ ಕಡೆಗೆ ಚಪ್ಪಲಿ ಎಸೆದು ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಲಾಯಿತು. ದರ್ಶನ್ ಅಲ್ಲಿ ಯಾವುದೇ ಅನಾಹುತ ನಡೆಯಬಾರದೆಂಬ ಉದ್ದೇಶದಿಂದ ಸಮಚಿತ್ತತೆಯಿಂದ ವರ್ತಿಸಿದರು. ಚಿತ್ರತಂಡವು ಅಲ್ಲಿಂದ ಬೇಗನೇ ಹೊರಟು ಸಂಭಾವ್ಯ ಅನಾಹುತವನ್ನು ತಪ್ಪಿಸಿಕೊಂಡಿತ್ತು. ಒಂದು ವೇಳೆ, ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಕಿತ್ತಾಟ ಶುರು ಆಗಿದ್ದರೆ ಅದು ಭಾರೀ ಅನಾಹುತವನ್ನೇ ಸೃಷ್ಟಿಸಿ ಬಿಡುತ್ತಿತ್ತು. ಯಾಕೆಂದರೆ ಅದಕ್ಕೆ ಅಲ್ಲೆ ನೆರೆದಿದ್ದ ಸಾವಿರಾರು ಸಂಖ್ಯೆಯ ಉನ್ಮಕ್ತ ಅಭಿಮಾನಿಗಳೇ ಸಾಕ್ಷಿ.!
ಸ್ಟಾರ್ ವಾರ್ ಕಳಂಕ
ದರ್ಶನ್ ಮೇಲೆ ಚಪ್ಪಲಿ ಎಸೆದಾಗಿನಿಂದ ಸ್ಟಾರ್ ವಾರ್, ಅಭಿಮಾನಿಗಳ ಫ್ಯಾನ್ ವಾರ್ ಗಳ ಬಗ್ಗೆ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದಲ್ಲಿ ಸ್ಟಾರ್ ವಾರ್ ನಡೆದಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದರ್ಶನ್ ತಮ್ಮ ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡುವ ಸಲುವಾಗಿ ನೀಡಿದ ಹೇಳಿಕೆಯನ್ನು ಅಪ್ಪು ಅಭಿಮಾನಿಗಳು ತಪ್ಪಾಗಿ ಅರ್ಥೈಸಿದ್ದಾರೆ. ಅವರ ಆಕ್ರೋಶ ಭರಿತ ಪ್ರತಿಕ್ರಿಯೆಗಳಿಗೆ ದರ್ಶನ್ ಅಭಿಮಾನಿಗಳು ಇನ್ನಷ್ಟು ಆಕ್ರೋಶ ಭರಿತರಾಗಿ, ರಾಜ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ, ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದ ಬಗ್ಗೆ ವ್ಯಂಗ್ಯವಾಗಿ ಬರೆದು ಅಪ್ಪು ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸುತ್ತಿದ್ದಾರೆ. (ಇಲ್ಲಿ ಪ್ರಕಟಗೊಳಿಸಲು ಯೋಗ್ಯವಿಲ್ಲದಷ್ಟು ಅಸಹ್ಯದಿಂದ ಕೂಡಿದ್ದರಿಂದ ಇಂತಹ ಪ್ರತಿಕ್ರಿಯೆಗಳನ್ನು ಇಲ್ಲಿ ಹಾಕುತ್ತಿಲ್ಲ, ಟ್ವಿಟರ್ ನಲ್ಲಿ ಗಮನಿಸಿದರೆ ಇಂತಹ ಕೆಟ್ಟಾ ಕೊಳಕು ಪ್ರತಿಕ್ರಿಯೆಗಳು ಕಂಡು ಬರುತ್ತವೆ.)
ದರ್ಶನ್ ಹಾಗೂ ಪುನೀತ್ ಪರಸ್ಪರ ಗೌರವ ಕೊಡುತ್ತಿದ್ದರೂ, ರಾಜ್ ಕುಟುಂಬದ ಬಗ್ಗೆ ದರ್ಶನ್ ಗೆ ಒಳ್ಳೆಯ ಅಭಿಪ್ರಾಯವಿದ್ದರೂ, ಅದನ್ನು ಪದೇ ಪದೇ ಬಹಿರಂಗವಾಗಿ ತೋರ್ಪಡಿಸುತ್ತಿದ್ದರೂ ಉಭಯ ನಟರ ಅಭಿಮಾನಿಗಳ ವಿಕೃತಿ, ಧ್ವೇಷ ಕಡಿಮೆಯಾಗುತ್ತಿಲ್ಲ. ಹೊಸಪೇಟೆಯಲ್ಲಿ ಕಾರ್ಯಕ್ರಮಕ್ಕೆ ಮುನ್ನ ಅಪ್ಪು ಪುತ್ಥಳಿಗೆ ದರ್ಶನ್ ವಂದಿಸಿರುವುದು, ಮಾಲಾರ್ಪಣೆ ಮಾಡಿರುವುದು ನೋಡಿಯೂ ದರ್ಶನ್ ಮೇಲಿನ ಧ್ವೇಷ ಅಪ್ಪು ಅಭಿಮಾನಿಗಳಿಗೆ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟ ಅಪ್ಪು ನಟನ ಪ್ರತಿಮೆಗೆ ಮಾಲೆ ಹಾಕಿರುವುದೂ ದರ್ಶನ್ ರ ವಿಕೃತ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗಿಲ್ಲ. ಅಪ್ಪು, ರಾಜ್ ಕುಟುಂಬವನ್ನು ಕೆಣಕುವಂತೆ ಟ್ವೀಟ್ ಮಾಡಿದ್ದ ದರ್ಶನ್ ಅಭಿಮಾನಿಯೊಬ್ಬ ಅಪ್ಪು ಪ್ರತಿಮೆಗೆ ದರ್ಶನ್ ಮಾಲೆ ಹಾಕಿದ್ದು ವಿರೋಧಿಸಿ ಟ್ವೀಟ್ ಮಾಡಿದ್ದರು. ದರ್ಶನ್ ರನ್ನೇ ಅವರ ಅಭಿಮಾನಿಗಳು ಈ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಇದೆಲ್ಲಾ ನೋಡುವಾಗ, ಈ ಅಭಿಮಾನಿಗಳೆಂದು ಕರೆಸಿಕೊಳ್ಳುವವರಿಗೆ ತಮ್ಮ ನಟನ ಮೇಲಿನ ಪ್ರೀತಿಗಿಂತ ಮತ್ತೊಬ್ಬ ನಟನ ಮೇಲಿರುವ ಧ್ವೇಷವೇ ಹೆಚ್ಚಾಗಿದೆ ಎಂಬಂತೆ ಕಾಣುತ್ತಿದೆ. ಒಬ್ಬರನ್ನು ಪ್ರೀತಿಸಲು ಮತ್ತೊಬ್ಬರು ವಿರೋಧಿಸುತ್ತಿಲ್ಲ ಈ ವಿಕೃತ ಅಭಿಮಾನಿಗಳು. ಮತ್ತೊಂದು ನಟನನ್ನು ಧ್ವೇಷಿಸುವ ಸಲುವಾಗಿಯೇ ಇನ್ನೊಬ್ಬ ನಟನ ಅಭಿಮಾನಿಯೆಂಬ ಸೋಗು ಹಾಕಿಕೊಂಡಿದ್ದಾರೆ. ದರ್ಶನ್ ರಾಜ್ ಕುಟುಂಬದ ಬಗ್ಗೆ ಅಷ್ಟೆಲ್ಲಾ ಒಳ್ಳೆಯ ಮಾತನಾಡಿದರೂ ದರ್ಶನ್ ಅಭಿಮಾನಿಗಳೆನಿಸಿಕೊಂಡವರು ರಾಜ್ ಕುಟುಂಬದ ತೇಜೋವಧೆಗೆ ಇಳಿಯುತ್ತಿರಲಿಲ್ಲ. ಅಪ್ಪು ಗುಣವನ್ನು ಅರಿತವರು ದರ್ಶನ್ ಗೆ ಚಪ್ಪಲಿಯನ್ನೂ ಎಸೆಯುತ್ತಿರಲಿಲ್ಲ.!