ನವದೆಹಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಬರೆದಿರುವ ನೀರಿನ ಹೆಜ್ಜೆ ಪುಸ್ತಕದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(H. D. Kumaraswamy) ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಬರೆದಿರುವ ಆ ಪುಸ್ತಕ ಕೇವಲ ಕಟ್ ಅಂಡ್ ಪೇಸ್ಟ್ ಅಷ್ಟೇ. ಬೇರೆ ಯಾವುದೋ ಪುಸ್ತಕದಲ್ಲಿ ಬರೆದಿರುವುದನ್ನೇ ಕತ್ತರಿಸಿ ಈ ಪುಸ್ತಕದಲ್ಲಿ ಅಂಟಿಸಿದ್ದಾರೆ. ನನಗೆ ಈ ಪುಸ್ತಕವನ್ನು ಯಾರೋ ತಂದುಕೊಟ್ಟರು. ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಅದನ್ನು ಆಸಕ್ತಿಯಿಂದ ಓದುತ್ತೇನೆ. ಆದರೆ, ಈ ಪುಸ್ತಕ ನೋಡಿದಾಗ ಇಲ್ಲಿರುವುದು ಅವರ ಹೆಜ್ಜೆಗಳಲ್ಲ, ಯಾರದೋ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಎಂದು ತೋರಿಸುವ ಕಸರತ್ತು ಮಾಡಿದ್ದಾರೆ ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಜನರನ್ನು ಯಾಮಾರಿಸುವುದಕ್ಕೆ ನಮ್ಮ ನೀರು- ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದರು. ಮೇಕೆದಾಟು ಮಾತ್ರ ಇದ್ದಲ್ಲಿಯೇ ಇದೆ. ಸುಪ್ರೀಂ ಕೋರ್ಟ್ ಕೇಂದ್ರಿಯ ಜಲ ಆಯೋಗದ (CWC) ಹೋಗಿ ವಾದ ಮಂಡಿಸಿ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವವರು ಇವರು ರಾಜಕೀಯ ಪಾರ್ಟನರ್‌ಗಳೇ ಆಗಿದ್ದಾರೆ. ಇವರು ಹೋಗಿ ಕುಳಿತು ಮಾತನಾಡಬೇಲ್ಲವೇ? ಎಂದು ಪ್ರಶ್ನಿಸಿದರು.

ಇನ್ನು ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರ್ಕಾರದ ಅಧಿಕಾರ ಮಾತ್ರವಲ್ಲ, ರಾಜ್ಯ ಸರಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ? ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಮೀರಿದೆ. ಅದರಲ್ಲಿ 50 ವರ್ಷಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದೆ. ಆಗ ಮೇಕೆದಾಟು ಬಗ್ಗೆ ಏನು ಮಾಡಿದಿರಿ ಎಂದು ಜನರಿಗೆ ಹೇಳಬೇಕಲ್ಲವೇ? ಎಂದು ರಾಜ್ಯ ಸರಕಾರವನ್ನು ಕೇಂದ್ರ ಸಚಿವರು ಪ್ರಶ್ನಿಸಿದರು.

ಮಾತೆತ್ತಿದರೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯ ಸರಕಾರ ಮಾಡುತ್ತಿರುವುದೇನು? ನಾನು ಕೇಂದ್ರ ಸಚಿವನಾದ ಕೂಡಲೇ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕುದುರೆಮುಖ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ದೇವದಾರಿ ಗಣಿ ಯೋಜನೆಗೆ ಹಣಕಾಸು ಖಾತರಿ ನೀಡುವ ಕಡತಕ್ಕೆ ಸಹಿ ಹಾಕಿದೆ. ಮರು ದಿನದಿಂದಲೇ ಅದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಯಿತು. ಈಗ ಅವರ ಪಕ್ಷದ ಜನಪ್ರತಿನಿಧಿ ಒಬ್ಬರು ಬಳ್ಳಾರಿಯಲ್ಲಿ ದಿನನಿತ್ಯ ಪ್ರತಿಭಟನೆ ಮಾಡಿಸುವ, ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಗೆ ವೈಯಕ್ತಿಕವಾಗಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್ಎಂಡಿಸಿ) ದಿಂದ ಲಾಭವಾಗುವ ಕೆಲಸ ಆಗಲಿಲ್ಲ ಎಂದು ಯೋಜನೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಸಹಕಾರ ಪಡೆಯುವುದು, ಕೊಡುವುದು ಎಂದರೆ ಹೀಗೇನಾ? ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.












