ನವದೆಹಲಿ: ಪಕ್ಷದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಅಂತಾ ಸಿಎಂ ಹೇಳಿದ್ರಾ..? ಇಲ್ಲಾ ನಾನು ಹೇಳಿದ್ದೇನಾ..? ಪಕ್ಷ ಹೇಗೆ ಹೇಳುತ್ತದೆ ಹಾಗೆ ಕೇಳಿಕೊಂಡು ಹೋಗುತ್ತೇನೆ ಎನ್ನುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಷ್ಟು ವರ್ಷ ಸಿಎಂ ಆಗಿರಬೇಕು ಎಂದು ಹೈಕಮಾಂಡ್ ಹೇಳುತ್ತದೆ. ನಮಗೆ ಹೇಳಿದ ಕೆಲಸ ನಾವು ಮಾಡಿಕೊಂಡು ಹೋಗಬೇಕು. ಪಕ್ಷದ ಚೌಕಟ್ಟು ಬಿಟ್ಟು ನಾನು ಎಂದೂ ಹೋಗುವುದಿಲ್ಲ. ಯಾವ ನವೆಂಬರ್ ಕ್ರಾಂತಿಯೂ ಇಲ್ಲ. ಡಿಸೆಂಬರ್ ಇಲ್ಲ, ಜನವರಿಯೂ ಇಲ್ಲ. 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ. 2025,2026ಕ್ಕೂ ಯಾವ ಕ್ರಾಂತಿ ಆಗಲ್ಲ. ಮುಂದಿನ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದರು.

ಮಾತು ಮುಂದುವರಿಸಿದ ಅವರು, ಓಟ್ ಚೋರಿ ಸಂಬಂಧ ನವೆಂಬರ್ 9ನೇ ತಾರೀಖು ಮತ್ತೆ ದೆಹಲಿಗೆ ಬರಬೇಕು. ಓಟ್ ಚೋರಿ ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ನೀಡಲು ಸೂಚಿಸಿದ್ದೆ. ಸಹಿ ಅಭಿಯಾನದ ಬಗ್ಗೆ ವರದಿ ನೀಡಲು ಕೇಳಿದ್ದೆ 9ನೇ ತಾರೀಖು ಒಳಗೆ ವರದಿ ನೀಡಬೇಕು. ಕೊಡದಿದ್ದರೆ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ದಯೆ ಇಲ್ಲದೇ ಅವರನ್ನು ಕಿತ್ತು ಹಾಕುತ್ತೇನೆ. ಶಾಸಕರ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ಮುಲಾಜಿಲ್ಲದೇ ನಾನು ಹೈಕಮಾಂಡ್‌ಗೆ ವರದಿ ನೀಡುತ್ತೇನೆ ಎಂದು ಹೇಳಿದರು.


