ದೇಶದ ವಿವಿಧ ಬ್ಯಾಂಕ್ ಖಾತೆಯಿಂದ ಹಣ ಕಳ್ಳತನ ಮಾಡುತ್ತಿದ್ದ ಸೈಬರ್ ವಂಚಕರನ್ನು ದಾವಣಗೆರೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸೈಯದ್ ಅರ್ಫಾತ್ ಹಾಸನ ಜಿಲ್ಲೆಯ ಬೇಲೂರಿನ ಶಾಂತಿನಗರ ನಿವಾಸಿಯಾಗಿದ್ದು, ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಂದಿತನ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಬಂದಿತನ ಖಾತೆಯಲ್ಲಿ ಜುಲೈ 27 ರಿಂದ ಆಗಸ್ಟ್ 19 ರವರೆಗೆ ಸುಮಾರು 150 ಕೋಟಿ ರೂ ಹಣ ಜಮೆಯಾಗಿದೆ. ಆರೋಪಿಗಳು 132 ಕೋಟಿ ರೂ. ಹಣ ವಿತ್ ಡ್ರಾ. ಮಾಡಿದ್ದು, ಖಾತೆಯಲ್ಲಿ 18 ಕೋಟಿ ರೂ. ಹಾಗೆ ಇದೆ. ಪೊಲೀಸರು ಆ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ.

ಆರೋಪಿಗಳು ದಾವಣಗೆರೆ ನಗರದ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆಯಿಂದ ಪ್ರಮೋದ್ ಎಂಬುವರ 52,60, 523 ರೂ.ಹಣವನ್ನು ಎಗರಿಸಿದ್ದರು. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಬಹುದೊಡ್ಡ ಪ್ರಕರಣದ ರಹಸ್ಯ ಬಯಲಾಗಿದೆ. ಸೈಬರ್ ಕ್ರೈಮ್ ಪೊಲೀಸರ ಸಾಧನೆಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.