ಆರೋಗ್ಯಕರ ಹಾಗೂ ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಒಂದು ಸುರಕ್ಷಿತ ಮತ್ತು ಸಮನ್ವಯದ ವೇದಿಕೆ. ಯಾವುದೇ ದೇಶದ ಪ್ರಗತಿಯನ್ನು ಅಳೆಯವಾಗ ಶೈಕ್ಷಣಿಕ ಪ್ರಗತಿಯನ್ನೂ ಒಂದು ಅಳತೆಗೋಲಿನಂತೆ ಬಳಸಲಾಗುವುದು ಸ್ವಾಭಾವಿಕ ಹಾಗೂ ಸಾರ್ವತ್ರಿಕ ಲಕ್ಷಣ. ಏಕೆಂದರೆ ಭವಿಷ್ಯದ ಯುವ ಪೀಳಿಗೆಗೆ ಒಂದು ನಿರ್ದಿಷ್ಟ ಮಾರ್ಗ ತೋರುವ ನಿಟ್ಟಿನಲ್ಲಿ ಶಿಕ್ಷಣದ ಭೂಮಿಕೆ ಮಹತ್ತರ ಪಾತ್ರ ವಹಿಸುತ್ತದೆ. ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತಕ್ಕೆ ಕಾಲಿಡುವ ಅಂದರೆ ಪ್ರೌಢಶಾಲಾ ಹಂತಕ್ಕೆ ಪ್ರವೇಶಿಸುವ ಮಕ್ಕಳ ವಿದ್ಯಾರ್ಜನೆಯು ಮುಂದಿನ ಹಲವು ಪೀಳಿಗೆಗಳ ಭವಿಷ್ಯದ ಬೌದ್ಧಿಕ ಬುನಾದಿಯೂ ಆಗುತ್ತದೆ. ಹಾಗಾಗಿಯೇ ಆಧುನಿಕ ನಾಗರಿಕ ಪ್ರಪಂಚದಲ್ಲಿ ಶೈಕ್ಷಣಿಕ ವಲಯಗಳಲ್ಲಿ ಆಯಾ ಸಮಾಜಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ಜ್ಞಾನಶಾಖೆಗಳನ್ನು ಮರುವಿಮರ್ಶೆಗೊಳಪಡಿಸುವ ಮೂಲಕ ಶಾಲಾ ಮಕ್ಕಳ ಪಠ್ಯ ಕ್ರಮದಲ್ಲಿ ಕಾಲದಿಂದ ಕಾಲಕ್ಕೆ ಪರಿಷ್ಕರಣೆ ಮಾಡಲಾಗುತ್ತದೆ.
ಕರ್ನಾಟಕದ ಸಂದರ್ಭದಲ್ಲೂ ಈ ಪರಿಷ್ಕರಣೆ ನಡೆಯುತ್ತಲೇ ಬಂದಿದೆ. ಈ ಪರಿಷ್ಕರಣೆ ಯಾವ ದಿಕ್ಕಿನಲ್ಲಿರಬೇಕು ಎಂಬ ಪ್ರಶ್ನೆ ಎದುರಾದಾಗ ನಾವು ಕ್ರಮಿಸಿ ಬಂದ, ಕ್ರಮಿಸಬೇಕಾದ ಮತ್ತು ಕ್ರಮಿಸಬಹುದಾದ ಹಾದಿಯನ್ನೂ ಪ್ರಧಾನವಾಗಿ ಪರಿಗಣಿಸಬೇಕಾಗುತ್ತದೆ. ಕರ್ನಾಟಕ ಸರ್ಕಾರ ಈಗ 8, 9 ಮತ್ತು 10ನೆ ತರಗತಿಯ ಪಠ್ಯಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು ಇದು ವಿವಾದಕ್ಕೂ ಕಾರಣವಾಗಿದೆ. ಆಡಳಿತಾರೂಢ ಪಕ್ಷ ತನ್ನ ರಾಜಕೀಯ ಬೆಳವಣಿಗೆಗಾಗಿ ಅನುಸರಿಸುವ ಒಂದು ಸಿದ್ಧಾಂತ ಶಿಕ್ಷಣ ವ್ಯವಸ್ಥೆಯ ಸರಕಾಗುವುದು ಸದಾ ಅಪಾಯಕಾರಿಯಾಗೇ ಕಾಣುತ್ತದೆ. ಪ್ರಸಕ್ತ ವಿವಾದದಲ್ಲಿ ಪಠ್ಯ ಪರಿಷ್ಕರಣ ಸಮಿತಿ ಶಿಫಾರಸು ಮಾಡಿರುವ ಕೆಲವು ಬದಲಾವಣೆಗಳು ಈ ದಿಕ್ಕಿನಲ್ಲೇ ಸಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈಗ ತೆಗೆದುಹಾಕಲಾಗಿರುವ ಪಠ್ಯಗಳು ಯಾವುದೋ ಒಂದು ಸಿದ್ಧಾಂತವನ್ನು ಪೋಷಿಸುವಂತಿದ್ದು ಎಂದು ಭಾವಿಸುವುದೇ ಅಪ್ರಬುದ್ಧತೆ ಎನಿಸಿಕೊಳ್ಳುತ್ತದೆ. ಕಾರಣ ಭಾರತದ ಬಹುತ್ವ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಮೂಡಿಬರುವ ಯಾವುದೇ ಸಾಹಿತ್ಯ ರಚನೆಯೂ ಸಹ ಸಮಕಾಲೀನ ಸಂದರ್ಭದಲ್ಲಿ ಅಪ್ರಸ್ತುತವಾಗುವುದಿಲ್ಲ.
ಆಧುನಿಕ ಭಾರತ ನಿರ್ಮಾಣವಾಗಿರುವುದು ಅನೇಕ ದಾರ್ಶನಿಕ ಚಿಂತಕರ ಬೌದ್ಧಿಕ ಆಲೋಚನೆಗಳ ಬುನಾದಿಯ ಮೇಲೆ. ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಲಿದ್ದ ಜಾತಿ ವ್ಯವಸ್ಥೆಯ ದೌರ್ಜನ್ಯ, ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಹೀನ ಆಚರಣೆಗಳಿಂದ ವಿಮೋಚನೆ ಪಡೆಯುವ ನಿಟ್ಟಿನಲ್ಲಿ ಬುದ್ಧ, ಬಸವಣ್ಣ ಮುಂತಾದವರ ಮಹನೀಯರ ಚಿಂತನೆಗಳನ್ನೇ ವಿಸ್ತರಿಸಿ ಫುಲೆ, ಅಂಬೇಡ್ಕರ್ ಮುಂತಾದವರು ರೂಪಿಸಿದ ಹೊಸ ಆಲೋಚನೆಗಳ ಫಲವಾಗಿಯೇ ಭಾರತ ತನ್ನ ಬಹುತ್ವ ಸಂಸ್ಕೃತಿಯನ್ನು, ಸಮನ್ವಯತೆಯನ್ನು ಉಳಿಸಿಕೊಳ್ಳಲು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಾಗಿದೆ. ಈ ದೇಶದ ಪರಂಪರೆಯಲ್ಲಿ ಆಳವಾಗಿ ಬೇರೂರಿದ್ದ ಸ್ತ್ರೀ ಶೋಷಣೆಯ ತಾತ್ವಿಕ ಚಿಂತನೆಗಳು, ಮಹಿಳೆಯರನ್ನು ಸದಾ ದಾಸ್ಯದಲ್ಲಿಡುವಂತಹ ಸಂಹಿತೆಗಳು ಮತ್ತು ಈ ತಾತ್ವಿಕ ನೆಲೆಗಳು ಪೋಷಿಸಿದಂತಹ ಪಿತೃ ಪ್ರಧಾನ ವ್ಯವಸ್ಥೆ ಇಂದಿಗೂ ಸಹ ನಮ್ಮ ಸಮಾಜದಲ್ಲಿ ಪಾರಮ್ಯ ಸಾಧಿಸಿದೆ. ಈ ಬೆಳವಣಿಗೆಗೆ ಪೂರಕವಾಗಿದ್ದ ಸೈದ್ಧಾಂತಿಕ ನೆಲೆಗಳನ್ನು ಭೇದಿಸಿ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ಸಮನ್ವಯವನ್ನು ಸಾಧಿಸುವ ನಿಟ್ಟಿನಲ್ಲಿ ಅನೇಕಾನೇಕ ಸಾಮಾಜಿಕ-ಸಾಂಸ್ಕೃತಿಕ ಚಿಂತಕರು ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ.

ಇಂದು ಈ ನೆಲೆಗಳನ್ನು ಕಾಪಾಡಿಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ವರ್ತಮಾನದ ಸಮಾಜದ ಮೇಲಿದೆ. ಬದಲಾಗುತ್ತಿರುವ ಪ್ರಪಂಚದಲ್ಲಿ ಆಧುನಿಕ ತಂತ್ರಜ್ಞಾನ ಸಮಾಜದೊಳಗಿನ ಮಾನವೀಯ ಮೌಲ್ಯಗಳನ್ನೂ ಮಾರುಕಟ್ಟೆಯ ಸರಕಿನಂತೆ ವಿನಿಮಯಕ್ಕೊಳಪಡಿಸುತ್ತಿರುವಾಗ, ಯುವ ಪೀಳಿಗೆಗೆ ಈ ದೇಶ ಚಾರಿತ್ರಿಕ ಸಂದರ್ಭಗಳಲ್ಲಿ ಕಂಡಿರುವಂತಹ ಸಾಂಸ್ಕೃತಿಕ ಕ್ರೌರ್ಯ, ದೌರ್ಜನ್ಯ ಮತ್ತು ಅಸ್ಪೃಶ್ಯತೆಯಂತಮ ಅಮಾನುಷ ಕಾಲಘಟ್ಟಗಳನ್ನು ಪರಿಚಯಿಸುವ ಹೊಣೆ ನಮ್ಮ ಮೇಲಿದೆ. ಇದರೊಟ್ಟಿಗೇ ಈ ಒಂದು ಸಾಮಾಜಿಕ ಚೌಕಟ್ಟುಗಳನ್ನು ಭೇದಿಸಿ, ಮಾನವ ಸಮಾಜದ ವಿಮೋಚನೆಗೆ ಶ್ರಮಿಸಿ ಸಹಬಾಳ್ವೆ, ಸೋದರತ್ವ, ಸಮನ್ವಯ ಮತ್ತು ಸೌಹಾರ್ದತೆಯ ನೆಲೆಗಳನ್ನು ವಿಸ್ತರಿಸಿದ ಚಿಂತಕರನ್ನು ಪರಿಚಯಿಸುವ ಹೊಣೆಯೂ ನಮ್ಮ ಮೇಲಿದೆ. ಈ ಹೊರೆಯನ್ನು ಇಳಿಸಿಕೊಳ್ಳಬೇಕಾದರೆ, ಯುವ ಪೀಳಿಗೆಯನ್ನು ಭವಿಷ್ಯ ಸಮಾಜಕ್ಕಾಗಿ ಬೌದ್ಧಿಕವಾಗಿ ಸಿದ್ಧಪಡಿಸುವ ಶಿಕ್ಷಣ ವ್ಯವಸ್ಥೆಯೂ ಅತ್ಯವಶ್ಯ.
ಶಿಕ್ಷಣದಲ್ಲಿ ಅಳವಡಿಸಲಾಗುವ ಪಠ್ಯಕ್ರಮಗಳು ಈ ದಿಕ್ಕಿನಲ್ಲಿದ್ದರೆ ಯಾವುದೇ ಸೈದ್ಧಾಂತಿಕ ಹಂಗು ಇಲ್ಲದೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಸಾಧಿಸಲು ಸಾಧ್ಯ. ಆದರೆ ಪ್ರಸ್ತುತ ವಿವಾದಕ್ಕೀಡಾಗಿರುವ ನೂತನ ಪಠ್ಯಕ್ರಮದ ಕೆಲವು ಪಾಠಗಳು ವಿರುದ್ಧ ದಿಕ್ಕಿನಲ್ಲಿವೆ. ಪಾರಂಪರಿಕ ಜ್ಞಾನ ಪಡೆದುಕೊಳ್ಳುವುದಕ್ಕೂ ಪರಂಪರೆಯೊಳಗಿನ ಅವೈಜ್ಞಾನಿಕ ಅಥವಾ ಜೀವ ವಿರೋಧಿ ಚಿಂತನೆಗಳನ್ನು ವೈಭವೀಕರಿಸುವುದಕ್ಕೂ ಅಪಾರ ಅಂತರವಿದೆ. ಮಹಿಳಾ ಸಮಾನತೆ ಮತ್ತು ಸಬಲೀಕರಣದ ಧ್ವನಿಗಳು ಇನ್ನೂ ಗಟ್ಟಿಯಾಗಬೇಕಾದ ಸಂದರ್ಭದಲ್ಲಿ ಪುರುಷ ಪ್ರಾಧಾನ್ಯತೆಯನ್ನು ಪೋಷಿಸುವ ಪಠ್ಯಗಳನ್ನು ಅಳವಡಿಸುವುದರಿಂದ ವಿಕಸನ ಹೊಂದಬೇಕಾದ ಯುವ ಮನಸುಗಳು ಸಾಂಸ್ಕೃತಿಕವಾಗಿ ಹಿಂದಕ್ಕೆ ಚಲಿಸಿಬಿಡುತ್ತವೆ. ಈ ಎಚ್ಚರ ಪಠ್ಯ ಕ್ರಮ ಪರಿಷ್ಕರಣ ಸಮಿತಿಯಲ್ಲಿ ಇರಬೇಕಾಗುತ್ತದೆ.
ಮೇಲಾಗಿ ಏಳು ಕೋಟಿ ಜನಸಂಖ್ಯೆ ಇರುವ ಮತ್ತು ಒಂದು ಶ್ರೀಮಂತ ಪರಂಪರೆಯ ಭಾಷೆಯನ್ನು ಹೊಂದಿರುವ ರಾಜ್ಯದಲ್ಲಿ ಭಾಷಾ ಪಠ್ಯಗಳನ್ನು ರಚಿಸಲು ಹಾಗೂ ಪರಿಷ್ಕರಿಸಲು ಆಳವಾದ ಅಧ್ಯಯನ ಮತ್ತು ಚಾರಿತ್ರಿಕ ಜ್ಞಾನ ಇರಬೇಕಾಗುತ್ತದೆ. ಶಿಕ್ಷಣವನ್ನು ಮಕ್ಕಳನ್ನು ಮುಂದಕ್ಕೆ ದಾಟಿಸುವ ಸೇತುವೆ ಎಂದು ಭಾವಿಸದೆ ಅವರ ಭವಿಷ್ಯವನ್ನು ನಿರ್ಮಿಸುವ ಸುಭದ್ರ ಬುನಾದಿ ಎಂದು ಪರಿಗಣಿಸುವ ಆಲೋಚನೆ ಇರಬೇಕಾಗುತ್ತದೆ. ಈ ಭವಿಷ್ಯದ ಹಾದಿಯಲ್ಲಿ ಪ್ರಾಚೀನ ಚಿಂತನೆಗಳ ಸಸಿಗಳನ್ನು ನೆಟ್ಟರೆ ಬೌದ್ಧಿಕವಾಗಿ ಸಮಾಜದ ಹಿಮ್ಮುಖ ಚಲನೆಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. ಹಾಗಾಗಿಯೇ ಒಬ್ಬ ಪರಿಣತ ಶಿಕ್ಷಣ ತಜ್ಞರೇ ಪಠ್ಯಕ್ರಮ ಪರಿಷ್ಕರಣೆಯನ್ನು ನೆರವೇರಿಸಬೇಕಾಗುತ್ತದೆ. ಇದು ಆಗಿಲ್ಲದಿರುವುದರಿಂದಲೇ ಪ್ರಸ್ತುತ ಪರಿಷ್ಕರಣೆಗಳು ರಾಜಕೀಯ ಸಿದ್ಧಾಂತಗಳನ್ನು ಹೇರುವ ಒಂದು ಪ್ರಯತ್ನವಾಗಿ ಮಾತ್ರ ಕಾಣುತ್ತಿದೆ. ಈ ಸೂಕ್ಷ್ಮವನ್ನು ಶಿಕ್ಷಣ ಸಚಿವರಾದರೂ ಅರಿತಿರಬೇಕು.
ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬಲ್ಲ ಚಿಂತಕರು ಅನೇಕರಿದ್ದಾರೆ. ಎಡ-ಬಲದ ಹಂಗಿಲ್ಲದಂತಹ ಒಂದು ಸಮನ್ವಯದ ಪಠ್ಯಕ್ರಮವನ್ನು ರೂಪಿಸುವ ಬೌದ್ಧಿಕ ಸಂಪತ್ತು ನಮ್ಮ ನಡುವೆ ಜೀವಂತವಾಗಿದೆ. ಸಾಮಾಜಿಕ ನ್ಯಾಯ, ಸೋದರತ್ವ ಮತ್ತು ಬಹುಸಾಂಸ್ಕೃತಿಕ ನೆಲೆಗಳ ಸಮನ್ವಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಬೌದ್ಧಿಕ ನೆಲೆಗಳೇ ದಾರಿದೀಪವಾಗಬಲ್ಲವು. ಪೂರ್ವಗ್ರಹಗಳಿಲ್ಲದೆ, ರಾಜಕೀಯ ಸಿದ್ಧಾಂತಗಳ ಅಹಮಿಕೆಗೆ ಬಲಿಯಾಗದೆ ಯುವ ಪೀಳಿಗೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ನೀತಿಯನ್ನು ರೂಪಿಸುವ ಇಚ್ಚಾಶಕ್ತಿ ಸರ್ಕಾರದಲ್ಲಿ ಇರಬೇಕಿತ್ತು. ಇದು ಇಲ್ಲದಿರುವುದೇ ಪ್ರಸ್ತುತ ವಿವಾದಕ್ಕೂ ಕಾರಣವಾಗಿದೆ.











