ಬಿಟ್ ಕಾಯಿನ್ ಹಗರಣದಲ್ಲಿ ಒಂದು ಕಡೆ ರಾಜಕಾರಣಿಗಳ ಕೆಸರೆರಚಾಟ ಮುಂದುವರಿದಿದ್ದರೆ, ಮತ್ತೊಂದು ಕಡೆ ಆ ಕುರಿತು ಪೊಲೀಸರ ಹೇಳಿಕೆಗಳು ಇಡೀ ಪ್ರಕರಣದ ಕುರಿತ ಈಗಾಗಲೇ ಇರುವ ಅನುಮಾನಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಿವೆ.
ಬಿಟ್ ಕಾಯಿನ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನಡೆಸಿದ ಅಕ್ರಮಗಳು ಕುರಿತು ತನಿಖೆ ನಡೆಸುವ ವೇಳೆ ಆತ ನಡೆಸಿದ ಹತ್ತಾರು ಸಾವಿರ ಕೋಟಿ ರೂ. ಮೌಲ್ಯದ ಸಾವಿರಾರು ಬಿಟ್ ಕಾಯಿನ್ ಹ್ಯಾಕ್ ಮಾಹಿತಿ ತಿಳಿದ ಬಳಿಕ ಸಿಸಿಬಿ ಪೊಲೀಸರು ಆತನ ವಶದಲ್ಲಿರುವ ಬಿಟ್ ಕಾಯಿನ್ ಗಳನ್ನು ಪರಿಶೀಲಿಸುತ್ತಾರೆ. ಆಗ ಆತನ ವ್ಯಾಲೆಟ್ ನಲ್ಲಿ 31 ಬಿಟ್ ಕಾಯಿನ್ ಇರುವುದು ಪತ್ತೆಯಾಗುತ್ತದೆ. ಆ ಬಿಟ್ ಕಾಯಿನ್ ಗಳನ್ನು ತಮ್ಮ ವಶಕ್ಕೆ ಪಡೆಯಲು ತಮ್ಮದೇ ಆದ ವ್ಯಾಲೆಟ್ ಅಗತ್ಯವಿದೆ ಎಂದು ವ್ಯಾಲೆಟ್ ಮತ್ತು ಸಂಬಂಧಿತ ಬಿಟ್ ಕಾಯಿನ್ ವಹಿವಾಟು ಖಾತೆ ತೆರೆಯಲು ಇಲಾಖೆಯ ಅನುಮತಿಯನ್ನೂ ಪಡೆಯುತ್ತಾರೆ.
ಈ ವಿಷಯವನ್ನು ಸ್ವತಃ ಸಿಸಿಬಿ ಪೊಲೀಸರೇ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ್ದರು ಮತ್ತು 2021ರ ಜನವರಿ 12ರಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಬರೋಬ್ಬರಿ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಗಳನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಹೇಳಿದ್ದರು. ಜನವರಿ 18ರಂದು ಬಿಟ್ ಕಾಯಿನ್ ವರ್ಗಾವಣೆಯ ಕುರಿತು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದ ತನಿಖಾಧಿಕಾರಿ, ಪಂಚನಾಮೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದ್ದರು. ಹಾಗೇ ಯುನೋಕಾಯಿನ್ ಕಂಪನಿಯ ನಿರ್ದೇಶಕರಾದ ಹರೀಶ್ ಬಿ ವಿ ಅವರಿಂದ ಸೈಬರ್ ಕ್ರೈಂ ಠಾಣೆಯಲ್ಲಿ ವ್ಯಾಲೆಟ್ ಖಾತೆಯನ್ನೂ ತೆರೆದಿದ್ದ ಬಗ್ಗೆ ಕೂಡ ಪಂಚನಾಮೆ ಮಾಡಿದ್ದಾರೆ.
ಬಳಿಕ ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರುಗಳಾದ ಶ್ರೀನಿವಾಸ್ ಟಿ ಮತ್ತು ಚೇತನ್ ಟಿ ಅವರ ಸಮ್ಮುಖದಲ್ಲಿ ರಾಬಿನ್ ಖಂಡೇಲವಾಲನ ವ್ಯಾಲೆಟ್ ಖಾತೆಯಲ್ಲಿದ್ದ ಬಿಟ್ ಕಾಯಿನ್ ಗಳನ್ನು ಸೈಬರ್ ಕ್ರೈಮ್ ಹೆಸರಿನಲ್ಲಿ ಯುನೋ ಕಾಯಿನ್ ಟೆಕ್ನಾಲಜೀಸ್ ಲಿ. ಕ್ರಿಪ್ಟೋಕರೆನ್ಸಿ ಎಕ್ಸ ಚೇಂಜ್ ನಲ್ಲಿ ತೆರೆದಿದ್ದ ಪೊಲೀಸರ ಖಾತೆಗೆ ವರ್ಗಾವಣೆ ಮಾಡಲಾಗಿದೆ(2,50,484.73 ರೂ. ಮೌಲ್ಯದ 0.08 ಬಿಟ್ ಕಾಯಿನ್ ) ಎಂಬುದನ್ನು ವರ್ಗಾವಣೆ ಮಾಡಲಾದ ಬಿಟ್ ಕಾಯಿನ್ ಗಳ ಹೆಸರಿನೊಂದಿಗೆ ಉಲ್ಲೇಖಿಸಿ ಪಂಚನಾಮೆ ಮಾಡಲಾಗಿತ್ತು(ಪಂಚನಾಮೆ ಪ್ರತಿ ಗಮನಿಸಿ).
ಬಳಿಕ ರಾಬಿನ್ ಖಾತೆಯಲ್ಲಿ ಇನ್ನೂ 186 ಬಿಟ್ ಕಾಯಿನ್ ಇರುವುದಾಗಿಯೂ ಮತ್ತು ಅವುಗಳನ್ನು ಕೂಡ ತಮ್ಮ ವಶಕ್ಕೆ(ಸೈಬರ್ ಕ್ರೈಂ ವ್ಯಾಲೆಟ್ ಗೆ) ಪಡೆದಿರುವುದಾಗಿ ಹೇಳಿದ್ದ ಸಿಸಿಬಿ ಪೊಲೀಸರು, ಜನವರಿ 22ರಂದು ಆ ಸಂಬಂಧ ಮೂರನೇ ಪಂಚನಾಮೆ ಮಾಡಿ, ಅಪ್ಲಿಕೇಶನ್ ದೋಷಪೂರಿತವಾಗಿದ್ದು, ತಪ್ಪಾದ ರಸೀದಿ ನೀಡಿದೆ ಎಂದು ಪಂಚನಾಮೆ ಮುಗಿಸಿದ್ದರು. ಅದಾದ ನಂತರ ಈ ಮೊದಲು ವಶಪಡಿಸಿಕೊಂಡಿರುವುದಾಗಿ ಹೇಳಿ ಪಂಚನಾಮೆ ಮಾಡಿದ್ದ 31 ಬಿಟ್ ಕಾಯಿನ್ ವರ್ಗಾವಣೆ ಕೂಡ ನಕಲಿ ಎಂದು, ಸದ್ಯ ತಮ್ಮ ಖಾತೆಯಲ್ಲಿ ಯಾವುದೇ ಬಿಟ್ ಕಾಯಿನ್ ಇಲ್ಲ ಎಂದು ಷರಾ ಬರೆದಿದ್ದರು.
ಆದರೆ, ಈ ಎಲ್ಲಾ ಬಿಟ್ ಕಾಯಿನ್ ಪತ್ತೆ, ವಶಪಡಿಸಿಕೊಂಡದ್ದು ಮತ್ತು ಸೈಬರ್ ಕ್ರೈಂ ಪೊಲೀಸರ ವ್ಯಾಲೆಟ್ ತೆರೆದು ಅಲ್ಲಿಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಳ್ಳುವ ಅಷ್ಟೂ ಪ್ರಕ್ರಿಯೆಯ ವೇಳೆ ಪ್ರಮುಖ ಆರೋಪಿ ಶ್ರೀಕೃಷ್ಣ ಮತ್ತು ಆತನ ಸಹಚರ ರಾಬಿನ್ ಕೂಡ ಸಿಸಿಬಿ ಪೊಲೀಸರ ವಶದಲ್ಲೇ ಇದ್ದರು. ಪೊಲೀಸರ ವಶದಲ್ಲಿರುವಾಗಲೇ ಶ್ರೀಕೃಷ್ಣ ತನ್ನ ಹ್ಯಾಕಿಂಗ್ ವಿವರಗಳನ್ನು ತಿಳಿಸಿದ ಮೇಲೆಯೇ ಪೊಲೀಸರಿಗೆ ಆತ ಹ್ಯಾಕ್ ಮಾಡಿರುವ ಬಿಟ್ ಕಾಯಿನ್ ರಾಬಿನ್ ಖಾತೆಯಲ್ಲಿರುವುದು ತಿಳಿದಿತ್ತು. ಅವರು ನೀಡಿದ ಅವರ ಖಾತೆಯ ವಿವರಗಳು ಮತ್ತು ಪಾಸ್ ವರ್ಡ್ ಪಡೆದೇ ಪೊಲೀಸರು 31 ಮತ್ತು 186 ಬಿಟ್ ಕಾಯಿನ್ ಇರುವುದನ್ನು ಖಚಿತಪಡಿಸಿಕೊಂಡಿದ್ದರು ಮತ್ತು ಯುನೋ ಕಾಯಿನ್ ಟೆಕ್ನಾಲಜೀಸ್ ಲಿ.ನ ನಿರ್ದೇಶಕರಾದ ಹರೀಶ್ ಮತ್ತು ಸಾತ್ವಿಕ್ ಸಮ್ಮುಖದಲ್ಲೇ ಅವರ ನೆರವಿನೊಂದಿಗೇ ಆ ಕಾಯಿನ್ ಗಳನ್ನು ವರ್ಗಾವಣೆ ಮಾಡಿ, ಅವರ ಎಕ್ಸ್ ಚೇಂಜ್ ನಲ್ಲಿಯೇ ತೆರೆದ ‘ಸೈಬರ್ ಕ್ರೈಂ’ ಹೆಸರಿನ ಖಾತೆಯ ವ್ಯಾಲೆಟ್ ನಲ್ಲಿ ಇಡಲಾಗಿತ್ತು(18.01.2021ರಂದು).
ಹಾಗಿರುವಾಗ, ಜ.18ರಂದು ವರ್ಗಾವಣೆಯಾಗಿ ಸೈಬರ್ ಪೊಲೀಸರ ವ್ಯಾಲೆಟ್ ಸೇರಿದ್ದ ಸುಮಾರು ಬಿಲಿಯನ್ ಡಾಲರ್ ಮೊತ್ತದ 31 +186 ಬಿಟ್ ಕಾಯಿನ್ ಗಳು ಏಕಾಏಕಿ ನಾಪತ್ತೆಯಾಗಿದ್ದು ಹೇಗೆ? ಅದರಲ್ಲೂ ಪ್ರಮುಖ ಆರೋಪಿಗಳು ಸಿಸಿಬಿ ಪೊಲೀಸರ ವಶದಲ್ಲೇ ಇರುವಾಗ, ಪೊಲೀಸರು ಅವರ ಮೇಲೆ ಹದ್ದಿನಕಣ್ಣಿಟ್ಟು ವಿಚಾರಣೆ ನಡೆಸುತ್ತಿರುವಾಗಲೇ ಹೀಗೆ ಈ ಬಿಟ್ ಕಾಯಿನ್ ಗಳನ್ನು ಕದ್ದವರು ಯಾರು? ಎಂಬುದು ಪ್ರಶ್ನೆ.
ಈ ನಡುವೆ, ಬೆಂಗಳೂರು ಪೊಲೀಸ್ ಕಮೀಷರನ್ ಕಮಲ್ ಪಂಥ್ ಅವರು ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಆರಂಭದಲ್ಲಿ 31.8 ಬಿಟ್ ಕಾಯಿನ್ ಗಳು ಆರೋಪಿಯ ವ್ಯಾಲೆಟ್ ನಲ್ಲಿದ್ದವು. ನಂತರ ತೆಗೆದು ನೋಡಿದಾಗ 186.81 ಬಿಟ್ ಕಾಯಿನ್ ಇದ್ದವು. ಆದರೆ, ಖಾಸಗಿ ಕೀ ಲಭಿಸದ ಕಾರಣ ಅವುಗಳನ್ನು ಪೊಲೀಸ್ ವ್ಯಾಲೆಟ್ ಗೆ ವರ್ಗಾಯಿಸಲು ಆಗಿರಲಿಲ್ಲ. ಇದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ” ಎಂದಿದ್ದಾರೆ(ಪ್ರಜಾವಾಣಿ ವರದಿ).
ಅಂದರೆ, ಬಿಟ್ ಕಾಯಿನ್ ಇರುವುದು ಪತ್ತೆಯಾಗಿದ್ದರೂ ಖಾಸಗಿ ಕೀ ಲಭಿಸದ ಕಾರಣ ಅವುಗಳನ್ನು ಪೊಲೀಸರ ಸೈಬರ್ ಕ್ರೈಂ ವ್ಯಾಲೆಟ್ ಗೆ ವರ್ಗಾವಣೆ ಮಾಡಲು ಆಗಿರಲಿಲ್ಲ ಎಂಬುದು ಕಮೀಷನರ್ ವಾದ. ಹಾಗಾದರೆ, ಸಿಸಿಬಿ ಪೊಲೀಸರು ಬಿಟ್ ಕಾಯಿನ್ ವರ್ಗಾವಣೆ ಕುರಿತು ಪಂಚನಾಮೆ ಮತ್ತು ಎಫ್ ಐಆರ್ ಮಾಡಿದ್ದು ಹೇಗೆ? ಬಿಟ್ ಕಾಯಿನ್ ವರ್ಗಾವಣೆ ಯಶಸ್ವಿಯಾಗಿದೆ ಎಂದು ಅಧಿಕೃತವಾಗಿ ಮಾಡಿದ ಎಫ್ ಐಆರ್ ಮತ್ತು ಪಂಚನಾಮೆ ನಿಜವೇ? ಅಥವಾ ಪೊಲೀಸ್ ಕಮೀಷರ್ನ ಹೇಳಿಕೆ ನಿಜವೇ? ಎಂಬುದು ಈಗಿರುವ ಪ್ರಶ್ನೆ.
ಇದೇ ಹೊತ್ತಿಗೆ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತ್ತೊಂದು ಹೇಳಿಕೆ ಇಡೀ ಪ್ರಕರಣದ ಕುರಿತ ಸಂಶಯಗಳಿಗೆ ಇನ್ನಷ್ಟು ಇಂಬು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣನನ್ನು ಬಳಸಿಕೊಂಡು ಕಾಂಗ್ರೆಸ್ಸಿಗರು ಯುವ ಕಾಂಗ್ರೆಸ್ ಚುನಾವಣೆಯನ್ನು ಹ್ಯಾಕ್ ಮಾಡಿದ್ದಾರೆ ಎಂಬ ಅವರ ಹೇಳಿಕೆ ವಿವಾದಕ್ಕೀಡಾಗಿದೆ. ಯುವ ಕಾಂಗ್ರೆಸ್ ಚುನಾವಣೆ ನಡೆದಾಗ ಶ್ರೀಕಿ ಸಿಸಿಬಿ ಪೊಲೀಸರ ವಶದಲ್ಲೇ ಇದ್ದ. ಹಾಗಾಗಿದ್ದರೆ ಚುನಾವಣೆ ಹ್ಯಾಕ್ ಮಾಡಲು ಆತನಿಗೆ ಮೊಬೈಲ್, ಲ್ಯಾಪ್ ಟಾಪ್ ನಂತಹ ಸೌಲಭ್ಯ ಮತ್ತು ಇಂಟರ್ ನೆಟ್ ವ್ಯವಸ್ಥೆ ಮಾಡಿದವರು ಯಾರು? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಎತ್ತಿದ್ದಾರೆ.
ಪ್ರಿಯಾಂಕ್ ಎತ್ತಿರುವ ಈ ಪ್ರಶ್ನೆ, 31 ಬಿಟ್ ಕಾಯಿನ್ ವರ್ಗಾವಣೆ ಮತ್ತು ದಿಢೀರ್ ಮಾಯವಾದ ಪ್ರಕರಣಕ್ಕೂ ಅನ್ವಯವಾಗುತ್ತದೆ ಮತ್ತು ಅಂತಿಮವಾಗಿ ಸಿಸಿಬಿ ಪೊಲೀಸರತ್ತಲೇ ಬೊಟ್ಟು ಮಾಡಬೇಕಾಗುತ್ತದೆ ಎಂಬುದು ವಿಪರ್ಯಾಸ!