ಮುಂದಿನ ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಿಯೋಜನೆಗೊಳಿಸುವ ಅಗತ್ಯವೇ ಬೀಳುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ಧಾರೆ.
ಜಮ್ಮುವಿನಲ್ಲಿ ಶನಿವಾರ ನಡೆದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) 83ನೇ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಲವೇ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಯ ಅಗತ್ಯವೇ ಇರುವುದಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಿಆರ್ಪಿಎಫ್ ಪಾತ್ರವನ್ನು ಶ್ಲಾಘಿಸಿದ್ದಾರೆ.
” ಕಾಶ್ಮೀರ ಮತ್ತು ಈಶಾನ್ಯ ಭಾಗ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಸಿಆರ್ಪಿಎಫ್ ಸಂಕಲ್ಪ ಮಾಡಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಮೂರು ಪ್ರದೇಶಗಳಲ್ಲಿ ಶಾಂತಿಯ ವಾತಾವರಣ ನೆಲೆಸಲಿದ್ದು, ಸಿಆರ್ಪಿಎಫ್ ಅಗತ್ಯ ಇರುವುದಿಲ್ಲ ಎಂದು ಅವರು ಹೇಳಿದರು. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮತ್ತು ಇದರ ಸಂಪೂರ್ಣ ಕ್ರೆಡಿಟ್ ಸಿಆರ್ಪಿಎಫ್ಗೆ ಸಲ್ಲುತ್ತದೆ ಎಂದು ಅಮಿತ್ ಶಾ ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಭದ್ರತಾ ಪರಿಸ್ಥಿತಿಯಲ್ಲಿ ಪ್ರಮುಖ ಸುಧಾರಣೆಯಾಗಿದೆ ಎಂದು ಅವರು ಹೇಳಿದರು. ಜಮ್ಮು-ಕಾಶ್ಮೀರದಲ್ಲಿ 370 ಪರಿಚ್ಛೇದ ರದ್ದುಗೊಳಿಸಿದ ಬಳಿಕ ಭಯೋತ್ಪಾದನೆಯ ಮೇಲೆ ನಿರ್ಣಾಯಕ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.