ಕ್ರಿಸ್‌ಮಸ್‌ನಿಂದಾಗಿ ಸಾಲು ರಜೆ, ಮಾತ್ರವಲ್ಲದೇ ಹೊಸ ವರ್ಷಾಚರಣೆಯೂ ವಾರಾಂತ್ಯವಾದ ಶನಿವಾರ, ಭಾನುವಾರ ಬಂದಿರುವುದು ಪ್ರವಾಸ ಪ್ರಿಯರಿಗೆ ಹಾಗೂ ಹೊಸ ವರ್ಷ ಆಚರಣೆಗೆ ಚಿಂತನೆ ಮಾಡುತ್ತಿದ್ದವರಿಗೆ ಅನುಕೂಲವಾಗಿದೆ.
ಮೈಸೂರು: ನಗರದ ಹೋಟೆಲ್ ಉದ್ಯಮಕ್ಕೆ ಈ ಬಾರಿ ಹೊಸ ವರ್ಷಾಚರಣೆ ಹೊಸ ಚೈನತ್ಯ ನೀಡಿದೆ. ಎಲ್ಲಾಹೋಟೆಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿದ್ದು, ಎರಡು ವರ್ಷಗಳಿಂದ ಕ್ಷೀಣಿಸಿದ್ದ ವಿದೇಶಿ ಹಾಗೂ ರಾಜ್ಯ,ಅಂತಾರಾಜ್ಯ ಪ್ರವಾಸಿಗರು ಮತ್ತೆ ಅರಮನೆ ನಗರಿಯತ್ತ ಧಾವಿಸುತ್ತಿದ್ದಾರೆ
ನಗರದಲ್ಲಿ 1500ಕ್ಕೂ ಹೆಚ್ಚು ಹೋಟೆಲ್, ಕ್ಲಬ್, ಲಾಡ್ಜ್‌ಗಳಿವೆ. ಡಿ.20ರಿಂದಲೇ ಈ ಎಲ್ಲಾಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ನವೆಂಬರ್‌ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ ಮೈಸೂರು ಭಾಗಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿಕಳೆದ ಎರಡು ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿಂದೆ ಗುಂಪುಗಳಾಗಿ ವಿದೇಶಿಗರು ಭೇಟಿ ನೀಡುತ್ತಿದ್ದರು. ಇದೀಗ ಮತ್ತೆ ಆ ದಿನಗಳು ಮರುಕಳಿಸಿವೆ.
ಕ್ರಿಸ್‌ಮಸ್‌ನಿಂದಾಗಿ ಸಾಲು ರಜೆ, ಮಾತ್ರವಲ್ಲದೇ ಹೊಸ ವರ್ಷಾಚರಣೆಯೂ ವಾರಾಂತ್ಯವಾದ ಶನಿವಾರ, ಭಾನುವಾರ ಬಂದಿರುವುದು ಪ್ರವಾಸ ಪ್ರಿಯರಿಗೆ ಹಾಗೂ ಹೊಸ ವರ್ಷ ಆಚರಣೆಗೆ ಚಿಂತನೆ ಮಾಡುತ್ತಿದ್ದವರಿಗೆ ಅನುಕೂಲವಾಗಿದೆ. ಹೋಟೆಲ್‌ಗಳಲ್ಲಿಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾನಾ ಬಗೆಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಿದ್ದು, ಆಹಾರ ಪ್ರಿಯರ ಮನಸೂರೆಗೊಳ್ಳಲಿವೆ. ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ವ್ಯವಸ್ಥೆಗೆ ಅನುಗುಣವಾಗಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಹೊಸ ವರ್ಷದ ಪಾರ್ಟಿಗಳಲ್ಲಿ ಪಾಲ್ಗೊಳಲು ಟಿಕೆಟ್ ಕಾಯ್ದಿರಿಸುವ ಕಾರ್ಯವೂ ನಡೆದಿದೆ.













