ಈ ವರ್ಷದ ಮಾರ್ಚ್ ಕಳೆದ 122 ವರ್ಷಗಳಲ್ಲಿ ಅತ್ಯಂತ ಕಠಿಣ ಉಷ್ಣತೆಯನ್ನು ದಾಖಲಿಸಿದೆ. ಇದು ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿರುವುದಲ್ಲದೆ ಭಾರತದ ಅತಿ ಹೆಚ್ಚಿನ ಜನರ ಆಹಾರ ಧಾನ್ಯವಾಗಿರುವ ಗೋಧಿ ಬೆಳೆಯ ಮೇಲೂ ತೀವ್ರವಾದ ಪರಿಣಾಮ ಬೀರಿದೆ. ಶಾಖದ ಅಲೆಗಳು ಹಲವು ಕಡೆ ಗೋಧಿ ಬೆಳೆಯನ್ನು ಸುಟ್ಟು ಕರಕಲಾಗಿಸಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಯ ಲಭ್ಯತೆಯನ್ನು ಖಚಿತಪಡಿಸಲು ಗೋಧಿ ರಫ್ತನ್ನು ನಿರ್ಬಂಧಿಸುವುದನ್ನು ಭಾರತ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಸರ್ಕಾರವು ಪ್ರಸಕ್ತ ಋತುವಿನಲ್ಲಿ 111 ಮಿಲಿಯನ್ ಟನ್ಗಳ ಗೋಧಿ ಉತ್ಪಾದನೆಯನ್ನು ನಿರೀಕ್ಷಿಸಿತ್ತು,ಈಗ 105 ಮಿಲಿಯನ್ ಟನ್ಗಳ ಉತ್ಪಾದನೆ ಮಾತ್ರ ಸಾಧ್ಯ ಎಂದು ಅಂದಾಜಿಸಿದೆ.
ಈ ಹಿನ್ನೆಲೆಯಲ್ಲಿ ದೇಶೀಯ ಸರಬರಾಜುಗಳನ್ನು ಖಾತ್ರಿಪಡಿಸಿಕೊಳ್ಳಲು ಗೋಧಿ ರಫ್ತುಗಳಿಗೆ ಮಿತಿ ಹೇರಲು ಸರ್ಕಾರವು ಪರಿಶೀಲಿಸುತ್ತಿದೆ ಎನ್ನಲಾಗಿದೆ. ಉನ್ನತ ಅಧಿಕಾರಿಗಳು ಈ ಕ್ರಮದ ಬಗ್ಗೆ ಚರ್ಚಿಸಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಲಿದ್ದಾರೆ, ನಂತರ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಯೋಜನೆಯ ಅಂಗವಾಗಿ ಗೋಧಿಗೆ ಕನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿ ಅದಕ್ಕಿಂತ ಕಡಿಮೆ ಬೆಲೆಗೆ ವಿದೇಶಕ್ಕೆ ಸಾಗಿಸದಂತೆ ತಂತ್ರ ರೂಪಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿರುವುದಾಗಿಯೂ ಪತ್ರಿಕೆ ವರದಿ ಮಾಡಿದೆ. ಈ ರೀತಿಯಾಗಿ ಮಾಡುವುದರಿಂದ ಗೋಧಿ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸದೆ, ಸರ್ಕಾರವು ದೇಶೀಯ ಪೂರೈಕೆಯನ್ನು ಹೆಚ್ಚಿಸಬಹುದು ಮತ್ತು ಬೆಲೆಗಳನ್ನೂ ನಿಯಂತ್ರಣದಲ್ಲಿಡಬಹುದು.

ಇತ್ತ ಉತ್ಪಾದನೆಯಲ್ಲಿನ ಕುಸಿತವು ದೇಶೀಯ ಮಾರುಕಟ್ಟೆಯಲ್ಲಿ ಕಳವಳವನ್ನು ಉಂಟುಮಾಡುತ್ತಿದೆ, ಲಕ್ಷಾಂತರ ಜನರು ತಮ್ಮ ಮುಖ್ಯ ಜೀವನೋಪಾಯ ಮತ್ತು ಆಹಾರ ಮೂಲವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಉತ್ಪಾದನೆಯಲ್ಲಿನ ಕುಸಿತವು ರೈತರ ಆದಾಯಕ್ಕೆ ಹಾನಿ ಮಾಡುತ್ತದೆ. ದೇಶೀಯ ಮಾರಕಟ್ಟೆಯಲ್ಲಿ ಗೋಧಿಯ ಹರಿವನ್ನು ಕುಸಿಯದಂತೆ ತಡೆಯಲು ರಫ್ತಿನ ಮೇಲೆ ಮಿತಿ ಹೇರುವುದು ಅನಿವಾರ್ಯ.
ಆದರೆ ರಫ್ತುಗಳನ್ನು ನಿಗ್ರಹಿಸುವುದರಿಂದ, ಉಕ್ರೇನ್ ರಷ್ಯಾದ ಯುದ್ಧದಿಂದಾಗಿ ಜಾಗತಿಕವಾಗಿ ಏರಿರುವ ಗೋಧಿ ಬೆಲೆಯ ಲಾಭವನ್ನು ಪಡೆಯಲು ಉದ್ದೇಶಿದ್ದ ಭಾರತದ ಮಹತ್ವಾಕಾಂಕ್ಷೆಗೆ ಹಿನ್ನಡೆಯಾಗಲಿದೆ. ಈ ಯುದ್ಧದಿಂದಾಗಿ ಪ್ರಮುಖ ಗೋಧಿ ಆಮದುದಾರ ರಾಷ್ಟ್ರಗಳು ಪೂರೈಕೆಗಾಗಿ ಭಾರತದತ್ತ ನೋಡುತ್ತಿವೆ, ಅಗ್ರ ಖರೀದಿದಾರ ರಾಷ್ಟ್ರವಾದ ಈಜಿಪ್ಟ್ ಈಗಾಗಲೇ ಭಾರತದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಅಲ್ಲದೆ ಪ್ರಪಂಚದಾದ್ಯಂತ ಗಗನಕ್ಕೇರುತ್ತಿರುವ ಆಹಾರದ ಬೆಲೆ ಮತ್ತು ಕೊರತೆ ಈ ಕ್ರಮದಿಂದ ಮತ್ತಷ್ಟು ಹೆಚ್ಚಲಿದೆ. ಈಗಾಗಲೇ ಜಾಗತಿಕವಾಗಿ ಆಹಾರದ ಹಣದುಬ್ಬರ ಅತಿರೇಕದ ವೇಗದಲ್ಲಿ ಏರುತ್ತಿದ್ದು ಎಲ್ಲಾ ರಾಷ್ಟ್ರಗಳು ತಮ್ಮ ದೇಶದೊಳಗೆ ಆಹಾರದ ಪೂರೈಕೆಯನ್ನು ರಫ್ತು ನಿಷೇಧಿಸಿ ರಕ್ಷಿಸಹೊರಟರೆ ಈ ಹಣದುಬ್ಬರ ಮತ್ತಷ್ಟು ಜಾಗತಿಕ ಬಿಕ್ಕಟ್ಟು ಸೃಷ್ಟಿಸಲಿದೆ ಎನ್ನುವ ಆತಂಕವೂ ತಲೆದೋರಿದೆ
ಈ ನಡುವೆ ಭಾರತೀಯ ಅಧಿಕಾರಿಗಳೂ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆ ಎಂಬುದರ ಸಂಕೇತವಾಗಿ, ಸೆಂಟ್ರಲ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿದರವನ್ನು ಬುಧವಾರ ಅಚ್ಚರಿಯ ಕ್ರಮದಂತೆ ಹೆಚ್ಚಿಸಿದೆ. ನಿರಂತರವಾಗಿ ಹಣದುಬ್ಬರದ ಒತ್ತಡವು ಹೆಚ್ಚು ತೀವ್ರವಾಗುತ್ತಿದೆ. ಈ ಬಗ್ಗೆ ಮಾತಾಡಿರುವ ಗವರ್ನರ್ ಶಕ್ತಿಕಾಂತ ದಾಸ್ ಬೆಲೆಗಳು ‘ತುಂಬಾ ಕಾಲ’ ಈ ಮಟ್ಟದಲ್ಲಿ ಉಳಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
