ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಲೇವಡಿ ಮಾತುಗಳನ್ನಾಡಿದ್ದ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸೋಮವಾರ (ಸೆಪ್ಟೆಂಬರ್ 11) ತಿರುಗೇಟು ನೀಡಿದೆ.
ತನ್ನನ್ನು ಎಕ್ಸ್ ಜಾಲತಾಣದಲ್ಲಿ ಕೆಣಕಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದೇ ಜಾಲತಾಣದಲ್ಲಿ ಜೆಡಿಎಸ್ ಕುಟುಕಿದೆಯಲ್ಲದೆ, ಆ ಪಕ್ಷವನ್ನು ಗೆದ್ದಲು ಹಿಡಿದ ಪಕ್ಷ ಎಂದು ಟೀಕಿಸಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಮಾತು ಕೇಳಿ ಮತಿಗೆಟ್ಟು ಕೂತ ರಾಜ್ಯ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಸಿಂಗಲ್ ಸೀಟಿಗೂ ದಿಕ್ಕಿಲ್ಲದ ಸ್ಥಿತಿ ನೆನೆದು ಕೈಕೈ ಪರಚಿಕೊಳ್ಳುತ್ತಿದೆ. ಪಕ್ಷ ವಿಸರ್ಜನೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಯನ್ನೇ ತಿರುಚುತ್ತಿರುವ ಕೂಗುಮಾರಿ, ಈಗ ಮಾರಿ ಉಳಿಸಿಕೊಳ್ಳಲು ಸತ್ಯ ತಿರುಚುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
75 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಜಾತ್ಯತೀತತೆ ಜಪ ಮಾಡಿಕೊಂಡೇ ಅಧಿಕಾರದ ಅಮಲಿನಲ್ಲಿ ತೇಲಿ ‘ಜಲ್ಸಾ’ ಹೊಡೆದ ಆ ಪಕ್ಷಕ್ಕೆ ತನ್ನ ಕೊಳಕು ಬೆನ್ನೇ ಕಾಣುತ್ತಿಲ್ಲ. ಶಿವಸೇನೆ, ಜೆಡಿಯು, ಡಿಎಂಕೆಯಂಥ ಪ್ರಾದೇಶಿಕ ಪಕ್ಷಗಳ ‘ಬಾಲ’ದಲ್ಲಿಯೇ ಬದುಕು ಕಂಡುಕೊಂಡು ಏದುಸಿರು ಬಿಡುತ್ತಾ ದೇಶದ ಉದ್ದಗಲಕ್ಕೂ ‘ಹಸ್ತವ್ಯಸ್ತ’ವಾಗಿದೆ ಎಂದು ಪಕ್ಷ ಕಿಡಿಕಾರಿದೆ.