• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಪರಾಧ ರಾಜಕಾರಣವೂ ಸಾಮಾಜಿಕ ಸ್ತಿತ್ಯಂತರಗಳೂ

ನಾ ದಿವಾಕರ by ನಾ ದಿವಾಕರ
May 11, 2023
in ಅಂಕಣ
0
ಅಪರಾಧ ರಾಜಕಾರಣವೂ ಸಾಮಾಜಿಕ ಸ್ತಿತ್ಯಂತರಗಳೂ
Share on WhatsAppShare on FacebookShare on Telegram

ಸಮಾಜವೊಂದು ಪಾಪಪ್ರಜ್ಞೆಯನ್ನು ಕಳೆದುಕೊಂಡಾಗ ಅಪರಾಧಗಳೂ ಮಾನ್ಯತೆ ಪಡೆಯುತ್ತವೆ

ADVERTISEMENT

ಅಪರಾಧ ಮುಕ್ತ ರಾಜಕಾರಣದ ಉದಾತ್ತ ಧ್ಯೇಯವನ್ನು ಪ್ರತಿಯೊಂದು ರಾಜಕೀಯ ಪಕ್ಷವೂ ಹೊಂದಿರುವಂತೆ ಕಂಡುಬಂದರೂ, ಯಾವುದೇ ಪಕ್ಷಗಳು ತಮ್ಮೊಳಗಿನ ಅಪರಾಧಿಗಳನ್ನು ಸಕ್ರಿಯ ರಾಜಕಾರಣದಿಂದ ಪ್ರತ್ಯೇಕಿಸಲಾಗುತ್ತಿಲ್ಲ. ಪಾತಕ ಕೃತ್ಯಗಳನ್ನೂ, ಘೋರ ಅಪರಾಧಗಳನ್ನೂ ಮತ್ತು ರಾಜಕೀಯ ಪ್ರೇರಿತವಾಗಿ ಅನಗತ್ಯವಾಗಿ ಹೊರಿಸಲಾಗಿರುವ ಅಪರಾಧಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಪೇಕ್ಷ ನೆಲೆಯಲ್ಲಿ ನಿಷ್ಕರ್ಷೆ ಮಾಡುವ ಒಂದು ಧೋರಣೆಯನ್ನು ಪ್ರಧಾನ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ರೂಢಿಸಿಕೊಂಡಿರುವುದರಿಂದ ಅಪರಾಧದ ಹಿನ್ನೆಲೆಯ ನಾಯಕರು ಸಚಿವ ಸಂಪುಟವನ್ನೂ ಅಲಂಕರಿಸುವುದನ್ನೂ ನೋಡುತ್ತಿದ್ದೇವೆ. ಆರೋಪಿಯನ್ನು ನ್ಯಾಯವ್ಯವಸ್ಥೆಯು ಅಪರಾಧಿ ಎಂದು ಘೋಷಿಸುವವರೆಗೂ ಆತ/ಆಕೆ ನಿರಪರಾಧಿಯಾಗಿಯೇ ಇರುವ ನ್ಯಾಯಶಾಸ್ತ್ರದ ರೂಢಿಗತ ಸಂಹಿತೆಯು ಸರ್ವಮಾನ್ಯವಾಗಿರುವುದರಿಂದ ಸಮಾಜವೂ ಸಹ ಸಾಬೀತಾಗದ ಅಪರಾಧಗಳನ್ನು ವ್ಯಕ್ತಿಗತ ನೆಲೆಯಲ್ಲೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿಯೇ ಜಾಮೀನು ಪಡೆದು ಹೊರಬಂದಿರುವ ವ್ಯಕ್ತಿಗಳೂ ಅಧಿಕಾರ ರಾಜಕಾರಣದ ಫಲಾನುಭವಿಗಳಾಗಲು ಸಾಧ್ಯವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ರಾಜಕಾರಣದ ಅಪರಾಧೀಕರಣವನ್ನು ಹಲವು ಆಯಾಮಗಳಲ್ಲಿ ಚರ್ಚಿಸಬೇಕಾಗುತ್ತದೆ. ರಾಜಕೀಯ ವಲಯದಲ್ಲಿ ಢಾಳಾಗಿ ಎದ್ದು ಕಾಣುತ್ತಿರುವ ಪಾತಕ ಲೋಕದ ಛಾಯೆ ಮತ್ತು ಸಮಾಜಘಾತುಕತೆಯ ಲಕ್ಷಣಗಳನ್ನು ಹೊರ ಜಗತ್ತಿನ ವಿಶಾಲ ಸಮಾಜದ ಚೌಕಟ್ಟಿನಿಂದ ಹೊರಗಿಟ್ಟು ನೋಡಲಾಗುವುದಿಲ್ಲ. ಹಾಗೆಯೇ ಸಂಪತ್ತಿನ ಕ್ರೋಢೀಕರಣ ಸಂಪನ್ಮೂಲಗಳ ಮೇಲಿನ ಯಜಮಾನಿಕೆಯನ್ನೂ  ಸಹ ಅಲಕ್ಷಿಸಲಾಗುವುದಿಲ್ಲ. ರಾಜಕೀಯ ವಲಯದಲ್ಲಿ ದುರುದ್ದೇಶಪೂರಿತವಾಗಿ ಹೊರಿಸಲಾಗುವ ಅಪರಾಧಗಳನ್ನು ಹೊರಗಿಟ್ಟು ನೋಡಿದಾಗಲೂ, ಸಮಾಜದ ನಿತ್ಯ ಚಟುವಟಿಕೆಗಳಲ್ಲಿ ಕುಗ್ರಾಮದಿಂದ ಮೆಟ್ರೋಪಾಲಿಟನ್‌ ನಗರಗಳವರೆಗೂ ಸಮಾಜದ ಒಂದು ಗುಂಪು ವ್ಯವಸ್ಥಿತವಾಗಿ ಪಾತಕ ಲೋಕದೊಡನೆ ನಿಕಟ ಸಂಬಂಧ ಹೊಂದಿರುವುದನ್ನು ಗಮನಿಸಲು ಸಾಧ್ಯ. ಈ ಗುಂಪುಗಳು ರಾಜಕೀಯವಾಗಿಯೂ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಂಡಿರುವುದನ್ನೂ ಗಮನಿಸಬಹುದು.

ಮಾರುಕಟ್ಟೆ ಆರ್ಥಿಕತೆ ಮತ್ತು ಅಪರಾಧ

ನವ ಉದಾರವಾದಿ ಆರ್ಥಿಕತೆ ಮತ್ತು ಮಾರುಕಟ್ಟೆ ಪೈಪೋಟಿಯನ್ನೇ ಅವಲಂಬಿಸಿದ ಧನಾರ್ಜನೆಯ ಮಾರ್ಗಗಳು ಸಹಜವಾಗಿಯೇ ಸಮಾಜದಲ್ಲಿ ಹಣ, ಪ್ರತಿಷ್ಠೆ, ಸ್ಥಾನಮಾನ ಹಾಗೂ ಗೌರವ ಸಂಪಾದಿಸಲು ಭಿನ್ನ ಆಲೋಚನೆಗಳನ್ನು ಬಯಸುತ್ತವೆ. ತನ್ನ ಭೌತಿಕ ಶ್ರಮದಿಂದ ಅಥವಾ ಬೌದ್ಧಿಕ ಸಾಮರ್ಥ್ಯವನ್ನು ಬಳಸಿ ಅಥವಾ ಔದ್ಯಮಿಕ ಜ್ಞಾನವನ್ನು ಬಳಸಿ ಶ್ರೀಮಂತಿಕೆಯನ್ನು ಪಡೆಯಲು ಬಯಸುವ ಪ್ರತಿ ವ್ಯಕ್ತಿಯಲ್ಲೂ ಸಹಜವಾಗಿ ಇರಬೇಕಾದ ಸಂಯಮ, ಆತ್ಮತೃಪ್ತಿ ಹಾಗೂ ಸಮಾಜಮುಖಿ ಧೋರಣೆ ಜಾಗೃತಾವಸ್ಥೆಯಲ್ಲಿರುವ ಸಮಾಜಗಳಲ್ಲಿ ಅಪರಾಧೀಕರಣದ ಪ್ರಮಾಣವೂ ಕಡಿಮೆ ಇರುತ್ತದೆ. ಆದರೆ ಮಿತಿಮೀರಿದ ಸಂಪತ್ತಿನ ಕ್ರೋಢೀಕರಣ ಮತ್ತು ಎಲ್ಲೆ ಮೀರಿದ ವಾಣಿಜ್ಯಾಸಕ್ತಿಗಳು ಮನುಷ್ಯನನ್ನು ವಾಮ ಮಾರ್ಗಗಳಿಗೆ ಸುಲಭವಾಗಿ ಕೊಂಡೊಯ್ಯುತ್ತವೆ.  ಬಂಡವಾಳಶಾಹಿ ಅರ್ಥಿಕತೆಯಲ್ಲಿ ಸಂಪತ್ತಿನ ಕ್ರೋಢೀಕರಣಕ್ಕೆ ಹಾಗೂ ಎಲ್ಲೆ ಮೀರಿದ ಧನಾರ್ಜನೆಗಳಿಗಾಗಿಯೇ ಹಲವು ರೀತಿಯ ವಾಮ ಮಾರ್ಗಗಳೂ ಸಹ ರೂಪುಗೊಂಡಿರುತ್ತವೆ. ಈ ಮಾರ್ಗಗಳಿಗೆ ನೆರವಾಗುವ ಹಲವು ಸಾಂಸ್ಥಿಕ ನೆಲೆಗಳನ್ನೂ ಸಹ ಇದೇ ವ್ಯವಸ್ಥೆಯೇ ಸೃಷ್ಟಿಸುವುದಲ್ಲದೆ, ನಾಗರಿಕರ ನಡುವೆ ಈ ಸಿರಿವಂತಿಕೆಗೆ ಮತ್ತು ಅದರಿಂದ ಸೃಷ್ಟಿಯಾಗುವ ಅಸಮಾನತೆಗಳಿಗೆ ಒಂದು ಅಧಿಕೃತ ಮಾನ್ಯತೆಯನ್ನೂ ನೀಡಲಾಗುತ್ತದೆ.

ಹಾಗೆ ನೋಡಿದರೆ ಅಪರಾಧ ಮುಕ್ತ ಸಮಾಜವನ್ನು ಊಹಿಸುವುದೂ ಕಷ್ಟ. ಎಷ್ಟೇ ಸಮ ಸಮಾಜವನ್ನು ನಿರ್ಮಿಸಿದರೂ ಸಹ ಸಮಾಜದಲ್ಲಿ ವಿಭಿನ್ನ ಕಾರಣಗಳಿಗಾಗಿ ಪಾತಕ ಲಕ್ಷಣಗಳು ಮನುಷ್ಯರಲ್ಲಿ ಸೃಷ್ಟಿಯಾಗುತ್ತಲೇ ಇರುತ್ತದೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಪಮಾನ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆ ಮುಂತಾದ ಪ್ರಾಪಂಚಿಕ ವಿದ್ಯಮಾನಗಳು ಸಹಜವಾಗಿಯೇ ಅವಕಾಶವಂಚಿತರ ನಡುವೆ, ಅಪಮಾನಿತರ ನಡುವೆ, ಬಹಿಷ್ಕೃತರ ನಡುವೆ ಪಾತಕ ಲಕ್ಷಣಗಳನ್ನು ಹೆಚ್ಚಿಸುತ್ತದೆ. ಆದರೆ ಈ ಅಸಮಾಧಾನದ ಅಭಿವ್ಯಕ್ತಿಗೆ ಒಂದು ಸಾಮಾಜಿಕ-ಸಾಂಸ್ಕೃತಿಕ ಸ್ವರೂಪವನ್ನು ನೀಡುವುದರ ಮೂಲಕ ಎಂತಹುದೇ ಅಸಮಾನತೆಗಳಿದ್ದರೂ, ಸಮಾಜವನ್ನು ಸಂಯಮ-ಶಾಂತಿ-ಸಹನೆಯಿಂದ ಅಪರಾಧ ಮುಕ್ತ ಮಾಡಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಸರ್ವ ಸಮಾನತೆ ಬಯಸುವ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ನೈತಿಕ ಕರ್ತವ್ಯ ಇದು. ಮತ್ತೊಂದು ಬದಿಯಲ್ಲಿ ಈ ಅಸಮಾನತೆಯ ನೆಲೆಗಳನ್ನೇ ತಮ್ಮ ಅಭಿವೃದ್ಧಿಯ ಅಥವಾ ಮುನ್ನಡೆಯ ಹಾಸುಗಲ್ಲುಗಳಂತೆ ಬಳಸಲು ಸದಾ ಸನ್ನದ್ಧವಾಗಿರುವ ಹಲವಾರು ಶಕ್ತಿಗಳು, ಜನಮಾನಸದಲ್ಲಿನ ಹತಾಶೆ ಮತ್ತು ಆಕ್ರೋಶಗಳನ್ನು ಪಾತಕ ಜಗತ್ತಿನೆಡೆಗೆ ಕೊಂಡೊಯ್ಯಲು ಉತ್ಸುಕವಾಗಿರುತ್ತವೆ.

ಈ ಶಕ್ತಿಗಳು ತಮ್ಮ ಅಡಿಪಾಯವನ್ನು ಭದ್ರಪಡಿಸಿಕೊಳ್ಳಲು ಹಾಗೂ ತಾವು ಪೋಷಿಸಿ ಬೆಳೆಸುವ ಪಾತಕ ಲೋಕದ ಹಾದಿಯನ್ನು ಸುಗಮಗೊಳಿಸಲು ಮೊದಲು ಮಾರುಕಟ್ಟೆಯ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತವೆ ವ್ಯಾಪಾರ, ವಹಿವಾಟು, ಉತ್ಪಾದನಾ ಮೂಲಗಳು ಹಾಗೂ ಬಂಡವಾಳ ಹೂಡಿಕೆ್ ಮತ್ತು ಸಮೃದ್ಧಿಗೆ ಪೂರಕವಾಗುವಂತಹ ರಿಯಲ್‌ ಎಸ್ಟೇಟ್‌ನಂತಹ ವ್ಯವಹಾರಗಳಲ್ಲಿ ತಮ್ಮ ಸಣ್ಣ ಹೆಜ್ಜೆಯನ್ನು ಊರಲು ಜನಸಾಮಾನ್ಯರಲ್ಲಿನ ಅಸಮಾಧಾನಗಳನ್ನೇ ಬಳಸಿಕೊಳ್ಳುತ್ತವೆ. ಮಾರುಕಟ್ಟೆ ಆರ್ಥಿಕತೆ ಒದಗಿಸುವ ಬಂಡವಾಳದ ಹರವು ಮತ್ತು ವಿಸ್ತರಣೆಯ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಲೇ ಸಮಾಜದಲ್ಲಿ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸಲು ಅವಕಾಶ ವಂಚಿತರಿಗೆ ಹೊಸ ಅವಕಾಶ/ನೆಲೆ ಸ್ಥಾಪಿಸುವ ಭರವಸೆಯನ್ನು ನೀಡಿ ತಮ್ಮೊಳಗೆ ಸೆಳೆದುಕೊಳ್ಳುತ್ತವೆ.  ನಿರುದ್ಯೋಗದ ಪ್ರಮಾಣ ಹೆಚ್ಚಾಗಿರುವ ಎಲ್ಲ ಸಮಾಜಗಳಲ್ಲೂ ಈ ಪ್ರಕ್ರಿಯೆಯನ್ನು ಔದ್ಯೋಗಿಕ/ಔದ್ಯಮಿಕ ಹಾಗೂ ಹಣಕಾಸು ವಲಯದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ರಿಯಲ್‌ ಎಸ್ಟೇಟ್‌ ಉದ್ಮಮ ಈ ನಿಟ್ಟಿನಲ್ಲಿ ಒಂದು ಸ್ಪಷ್ಟ ಉದಾಹರಣೆ.

ಮದ್ಯದ ವ್ಯಾಪಾರವನ್ನೂ ಒಳಗೊಂಡಂತೆ ಎಲ್ಲ ಪದಾರ್ಥಗಳ ಮಾರುಕಟ್ಟೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲಬೆರಕೆ ಮತ್ತು ಕಳ್ಳಸಂತೆ ವ್ಯಾಪಾರಗಳಂತೆಯೇ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲೂ ಸಹ ಆಡಳಿತ ವ್ಯವಸ್ಥೆಯ ಒಳಬಿರುಕುಗಳನ್ನು ಬಳಸಿಕೊಂಡು, ಅಧಿಕಾರ ಕೇಂದ್ರಗಳ ಪ್ರಭಾವಿ ವಲಯವನ್ನು ತಲುಪುವ ಒಂದು ವ್ಯವಸ್ಥಿತ ಮಾರ್ಗ ನಮ್ಮ ಆಳ್ವಿಕೆಯ ನೆಲೆಗಳಲ್ಲಿ ಇಂದಿಗೂ ಗುರುತಿಸಲು ಸಾಧ್ಯವಾದೀತು.  ಅಕ್ರಮ ಭೂಸ್ವಾಧೀನ, ಭೂ ಒತ್ತುವರಿ, ಅಕ್ರಮ ಬಡಾವಣೆಗಳ ನಿರ್ಮಾಣ, ಕಳಪೆ ಕಾಮಗಾರಿಯ ವಸತಿ ಸಮುಚ್ಚಯಗಳು, ನಿವೇಶನಗಳನ್ನು ನೋಂದಣಿ ಮಾಡುವಲ್ಲಿ ನಡೆಯುವ ಅಕ್ರಮಗಳು, ಬಡಾವಣೆ ನಿರ್ಮಾಣದಲ್ಲಿ ಅನುಸರಿಸಲಾಗುವ ನಿಯಮಬಾಹಿರ ಮಾರ್ಗಗಳು ಇವೆಲ್ಲವೂ  ಸಹ ಸಮಾಜದ ಅಪರಾಧೀಕರಣಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತಲೇ ಹೋಗುತ್ತದೆ. ಏಕೆಂದರೆ ಈ ಮಾರ್ಗದಲ್ಲಿ ತಮ್ಮ ಅಸ್ತಿತ್ವ, ಭವಿಷ್ಯ ಹಾಗೂ ಕೂಡಿಟ್ಟ ಸಂಪತ್ತಿನ ಸ್ಥಿರ ಪ್ರಗತಿಯನ್ನು ಅಪೇಕ್ಷಿಸುವ ಉದ್ಯಮಿ , ಹೊರಗಿನ ಸಮಾಜದಲ್ಲಿರುವ ಪಾತಕ ಲಕ್ಷಣಗಳನ್ನು ಬಳಸಿಕೊಳ್ಳುತ್ತಲೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾನೆ.

ನವ ಉದಾರವಾದದ ಆಗಮನ-ಜಾಗತೀಕರಣ ಪ್ರಕ್ರಿಯೆಯ ತೀವ್ರತೆ ಹಾಗೂ ಇದರ ಫಲವಾಗಿಯೇ ಕಾಣುವ ಕ್ಷಿಪ್ರ ಗತಿಯ ನಗರೀಕರಣ ಪ್ರಕ್ರಿಯೆ ಸಂಪತ್ತು ಕ್ರೋಢೀಕರಣದ ಹೊಸ ಮಾರ್ಗಗಳನ್ನು ಸೃಷ್ಟಿಸಿದಂತೆಯೇ ಕ್ರೋಢೀಕೃತವಾದ ಅಕ್ರಮ ಸಂಪತ್ತನ್ನು ರಕ್ಷಿಸುವ ಪಡೆಗಳನ್ನೂ, ಕಾಲಾಳುಗಳನ್ನೂ ಸೃಷ್ಟಿಸಿರುವುದನ್ನೂ ಕಳೆದ ಮೂರು ದಶಕಗಳಲ್ಲಿ ನಾವು ನೋಡಿದ್ದೆವೆ. ಸಮಾಜದಲ್ಲಿ ಪಾತಕ ಧೋರಣೆ ಹೆಚ್ಚಾಗಲು ಅನ್ಯ ಕಾರಣಗಳೆಷ್ಟೇ ಇದ್ದರೂ, ಈ ಔದ್ಯಮಿಕ ವಿಸ್ತರಣೆ, ಬಂಡವಾಳದ ಹರಿವು ಮತ್ತು ಹರವು , ಸಂಪತ್ತಿನ ಅಗಾಧತೆ ಹಾಗೂ ಸಂಪನ್ಮೂಲ-ಉತ್ಪಾದನಾ ನೆಲೆಗಳ ಮೇಲಿನ ಹಿಡಿತ ಈ ಅಂಶಗಳೇ ಎಲ್ಲ ಸಮಾಜಗಳಲ್ಲೂ ಪಾತಕ ಲೋಕಗಳನ್ನು ಸೃಷ್ಟಿಸಿರುವುದನ್ನು ಗುರುತಿಸಬಹುದು. ಉತ್ತರ ಭಾರತದಲ್ಲಿ ಹಾಗೂ ತಮಿಳು ನಾಡು ಮತ್ತು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಭೂಮಾಲೀಕತ್ವ ತನ್ನ ಆಧಿಪತ್ಯವನ್ನು ಸಾಧಿಸಿದಂತೆಯೇ ಮಹಾರಾಷ್ಟ್ರ, ಗುಜರಾತ್‌ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಔದ್ಯಮಿಕ ಯಜಮಾನಿಕೆ ತನ್ನದೇ ಆದ ಪಾತಕ ಲೋಕವನ್ನು ಸೃಷ್ಟಿಸಿದೆ.

ಅಪರಾಧ ಲೋಕದ ನೆಲೆಗಳು

ಈ ಪಾತಕ ಲೋಕವನ್ನು ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟ ಅಧಿಕಾರಿಗಳಲ್ಲಿ, ಉನ್ನತ ಸ್ಥಾನದಲ್ಲಿರುವ ಅಧಿಕಾರಶಾಹಿಯಲ್ಲಿ, ಸರ್ಕಾರಿ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರಲ್ಲಿ, ಯೋಜನೆಗಳನ್ನು ಅನುಷ್ಟಾನಗೊಳಿಸಲು ನೆರವಾಗುವ ಇಂಜಿನಿಯರುಗಳುಗಳಲ್ಲಿ, ಹಣಕಾಸು ವಲಯದ ಸಾಂಸ್ಥಿಕ ಚೌಕಟ್ಟಿನೊಳಗೇ ಸಾಲ ಸೌಲಭ್ಯಗಳನ್ನು, ಇತರ ಸವಲತ್ತುಗಳನ್ನು ಪೂರೈಸಬೇಕಾದ ಬ್ಯಾಂಕ್‌ ಮತ್ತಿತರ ಸಂಸ್ಥೆಗಳಲ್ಲಿ ಹಾಗೂ ಅಧಿಕಾರ ಕೇಂದ್ರದ ಎಲ್ಲ ಇಲಾಖೆಗಳಲ್ಲೂ ಗುರುತಿಸಲಾಗುತ್ತಿದೆ. ಔದ್ಯಮಿಕ ವಲಯವು ಶಿಸ್ತುಬದ್ಧತೆಯಿಂದ ಕಾನೂನು ನಿಯಮಗಳನ್ನು ಪಾಲಿಸಿದರೆ, ಅಧಿಕಾರಶಾಹಿಯು ಆಡಳಿತ ನಿಯಮಗಳನ್ನು ಅನುಸರಿಸಿದರೆ, ಆಡಳಿತನೀತಿ ನಿರೂಪಕರು ಸಾಂವಿಧಾನಿಕ ಬದ್ಧತೆಯಿಂದ ಪ್ರಾಮಾಣಿಕವಾಗಿ ನಡೆದುಕೊಂಡರೆ ಈ ಎಲ್ಲ ಅಪರಾಧದ ಬಾಹುಗಳನ್ನೂ ಸುಲಭವಾಗಿ ಕತ್ತರಿಸಲು ಸಾಧ್ಯ. ಆದರೆ ಅಧಿಕಾರ ರಾಜಕಾರಣವೂ ಔದ್ಯಮೀಕರಣಕ್ಕೊಳಗಾಗಿ ಒಂದು ಲಾಭದಾಯಕ ವೃತ್ತಿಯಾಗಿರುವಾಗ ಇದನ್ನು ಅಪೇಕ್ಷಿಸುವುದೂ ಸಹ ಅತಿರೇಕ ಎನಿಸುತ್ತದೆ.

ಈ ಪಾತಕ ಲೋಕದ ಹೊರತಾಗಿಯೂ ನಮಗೆ ಕಣ್ಣಿಗೆ ರಾಚುತ್ತಿರುವ ಅಪರಾಧಗಳೆಂದರೆ ಸಾರ್ವಜನಿಕ ಜೀವನದಲ್ಲಿ ಕಾಣುತ್ತಿರುವ ಕೊಲೆ, ಗುಂಪು ಹತ್ಯೆ, ಅತ್ಯಾಚಾರ, ಮಹಿಳಾ ದೌರ್ಜನ್ಯ ಮತ್ತು ಲೂಟಿಕೋರತನ. ತನ್ನ ಅಸ್ತಿತ್ವ, ಭವಿಷ್ಯ ಹಾಗೂ ಅಡಿಪಾಯವನ್ನು ಸುರಕ್ಷಿತವಾಗಿರಿಸಲು ಔದ್ಯಮಿಕ ಜಗತ್ತು ಅಧಿಕಾರ ಕೇಂದ್ರಗಳಿಗೆ ನಿಕಟವಾದಷ್ಟೂ, ಅಧಿಕಾರ ರಾಜಕಾರಣದ ನೆಲೆಗಳು ಭ್ರಷ್ಟವಾಗುತ್ತಲೇ ಹೋಗುತ್ತವೆ. ಕೇವಲ ಒಂದು ದಶಕದ ಹಿಂದೆ ಕರ್ನಾಟಕದ ರಾಜಕಾರಣದಲ್ಲಿ ರಿಯಲ್‌ ಎಸ್ಟೇಟ್‌ ಪ್ರಭಾವವನ್ನು ಮಾತ್ರ ಕಾಣಬಹುದಿತ್ತು. ಆದರೆ ಇಂದು ಅಧಿಕಾರ ಕೇಂದ್ರದಲ್ಲೇ ರಿಯಲ್‌ ಎಸ್ಟೇಟ್‌ ಉದ್ದಿಮೆ ತನ್ನ ಸುರಕ್ಷಿತ ಸ್ಥಾನವನ್ನು ಪಡೆದಿದೆ. ಔದ್ಯಮಿಕ ಹಿತಾಸಕ್ತಿ ಇಲ್ಲದ ಚುನಾಯಿತ ಜನಪ್ರತಿನಿಧಿಗಳನ್ನು ಸೂಕ್ಷ್ಮ ದರ್ಶಕದ ಮುಖಾಂತರ ಹುಡುಕಬೇಕಿದೆ. ಹಾಗಾಗಿಯೇ ತಮ್ಮ ಔದ್ಯಮಿಕ ಅಸ್ತಿತ್ವವನ್ನು ಪೋಷಿಸಿ, ಬೆಳೆಸಿ, ಸಂರಕ್ಷಿಸಲು ಅಧಿಕಾರ ರಾಜಕಾರಣವನ್ನು ಆಶ್ರಯಿಸುವ ರಾಜಕೀಯ ನಾಯಕರು ಹಲವು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನೂ ಸಹ ತಮ್ಮ ಕಾಲಾಳುಗಳಂತೆ, ಕಾವಲುಪಡೆಗಳಂತೆ, ಹಿಂಬಾಲಕರಂತೆ, ರಕ್ಷಕರಂತೆ ಬಳಸಿಕೊಳ್ಳುತ್ತಾರೆ. ಕಾಲಕ್ರಮೇಣ ಇದೇ ಕಾಲಾಳು ಪಡೆಗಳ ಗರ್ಭದಿಂದಲೇ ಪಾತಕ ಜಗತ್ತಿನ ಪ್ರತಿನಿಧಿಗಳೂ ಹೊರಹೊಮ್ಮಿ ಜನಪ್ರತಿನಿಧಿಗಳಾಗಲು ಬಯಸುತ್ತಾರೆ. ಇಂತಹ ಹಲವು ಉದಾಹರಣೆಗಳನ್ನು ಪ್ರಸಕ್ತ ಚುನಾವಣೆಗಳಲ್ಲೂ ಪ್ರತ್ಯಕ್ಷವಾಗಿಯೇ ನೋಡಲು ಸಾಧ್ಯವಾಗಿದೆ.

ಹಾಗಾಗಿಯೇ ಹಣಕಾಸು ಭ್ರಷ್ಟತೆ, ಅಧಿಕಾರ ಭ್ರಷ್ಟತೆ ಮತ್ತು ನೈತಿಕ ಭ್ರಷ್ಟತೆಗಳ ಒಂದು ಸಮೀಕರಣವನ್ನು ರಾಜಕೀಯ ವಲಯದಲ್ಲಿ, ಬಾಹ್ಯ ಸಮಾಜದಲ್ಲಿ ಎದುರಿಸುತ್ತಿದ್ದೇವೆ. ಕೋಟ್ಯಂತರ ರೂಗಳ ಅಕ್ರಮದ ಆರೋಪ ಎದುರಿಸುವ ರಾಜಕೀಯ ನಾಯಕರನ್ನೂ ಹೆಗಲೆ ಮೇಲೆ ಹೊತ್ತು ವಿಜೃಂಭಿಸುವ ಒಂದು ಯುವ ಪಡೆ ನಮ್ಮ ನಡುವೆ ಸಿದ್ಧವಾಗುತ್ತದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಶಿಕ್ಷೆಯ ಭೀತಿ ಎದುರಿಸುವ ಅಧಿಕಾರಿಗಳು ರಾಜಕೀಯ ಪಕ್ಷಗಳನ್ನು ಸುರಕ್ಷಿತ ವಲಯದಂತೆ ಭಾವಿಸಿ ಆಶ್ರಯ ಪಡೆಯಲೆತ್ನಿಸುತ್ತಾರೆ. ಲೈಂಗಿಕ ದೌರ್ಜನ್ಯ,  ಅತ್ಯಾಚಾರದಂತಹ ಹೀನ ಕೃತ್ಯಗಳನ್ನೂ ಎಸಗಿದವರೂ ಸಹ ಕಾನೂನು ಆಶ್ರಯದಲ್ಲೇ ಕೆಲಕಾಲವಾದರೂ ನಿರಪರಾಧಿಗಳಂತೆ ಮುಕ್ತವಾಗಿ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಮೇಲಿನ ಆರೋಪವು ನಿರಾಧಾರ ಎಂದು ಸಾಬೀತಾಗುವವರೆಗೂ ತಾವು ಅಪರಾಧಿ ಅಲ್ಲ ಎಂಬ ನ್ಯಾಯಶಾಸ್ತ್ರದ ಸಂಹಿತೆಯೇ ಇಂತಹ  ಪಾತಕಿಗಳಿಗೆ ಆಶ್ರಯ ನೀಡುತ್ತದೆ. ನ್ಯಾಯಶಾಸ್ತ್ರವು ಸಾಕ್ಷಿ ಪುರಾವೆ ಅಪೇಕ್ಷಿಸುತ್ತದೆ. ಆದರೆ ಕಣ್ಣೆದುರಿನ ಸಮಾಜ ಪ್ರತ್ಯಕ್ಷ ಸಾಕ್ಷಿಯೇ ಆಗಿರುತ್ತದೆ. ಆರೋಪವನ್ನೇ ಅಪಮಾನ ಎಂದು ಸಹಿಸಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಉದಾತ್ತ ರಾಜಕಾರಣದ ಪರಂಪರೆಯಿಂದ ಸಂಪೂರ್ಣವಾಗಿ ಹೊರಬಂದಿರುವ ಭಾರತದ ರಾಜಕಾರಣದಲ್ಲಿ, ಇಂತಹ ಹಲವು ಅಪರಾಧಿಗಳೂ ಸಹ ಶಾಸನಸಭೆಗಳನ್ನು ಪ್ರತಿನಿಧಿಸುತ್ತಿರುವುದನ್ನು ನೋಡುತ್ತಿದ್ದೇವೆ.

ರಾಜಕೀಯ ಅಪರಾಧೀಕರಣ

ಇಂತಹ ಅಪರಾಧಿಗಳಿಗೆ ಮಾನ್ಯತೆ ದೊರೆಯಲು ಕಾರಣ ಎಂದರೆ ಅವರಂತೆಯೇ ಅಪರಾಧ ಎಸಗಿದ ಮತ್ತೊಬ್ಬ ವ್ಯಕ್ತಿ ವಿರೋಧ ಪಕ್ಷದಲ್ಲೋ, ಆಡಳಿತ ಪಕ್ಷದಲ್ಲೋ ಅಥವಾ ಚರಿತ್ರೆಯ ಪುಟಗಳಲ್ಲೋ ಇದ್ದೇ ಇರುತ್ತಾರೆ.  ಹಣಕಾಸು ಭ್ರಷ್ಟಾಚಾರ ಪ್ರಕರಣಗಳಲ್ಲೂ ಇದು ಸಹಜವಾಗಿ ಕಂಡುಬರುತ್ತಿರುವ ವಿದ್ಯಮಾನ. ಪರ್ಸೆಂಟೇಜ್‌ ಸರ್ಕಾರ ಎನ್ನುವುದು ಅಪಮಾನಕರ ಹಣೆಪಟ್ಟಿಯಾಗುವುದಕ್ಕಿಂತಲೂ ಹೆಚ್ಚಾಗಿ, ಪರ್ಸೆಂಟೇಜ್‌ ಪ್ರಮಾಣವು ಅಪಮಾನದ ಸ್ತರವನ್ನು ನಿರ್ಧರಿಸುತ್ತದೆ. ಸಾರ್ವಜನಿಕರ ನಡುವೆಯೂ ಇದೇ ಧೋರಣೆ ರೂಢಿಗತವಾಗಿರುವುದರಿಂದ, ಸುಶಿಕ್ಷಿತ ವಲಯದ ನಾಗರಿಕರೂ ಸಹ “ ಈಗ ಮೊದಲಿನಷ್ಟು ಭ್ರಷ್ಟಾಚಾರ ಇಲ್ಲ ” ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಈ ಸಬೂಬು ಹಸುಗೂಸಿನ ಮೇಲೆ ನಡೆಯುವ ಅತ್ಯಾಚಾರದ ಸಂದರ್ಭದಲ್ಲೂ, ಹತ್ಯಾಕಾಂಡಗಳ ಸಂದರ್ಭದಲ್ಲೂ ಕೇಳಿಬರುತ್ತದೆ. “ ಆಗ,,,,,, ಅವರ ಮೇಲೆ,,,,, ನಡೆದಿರಲಿಲ್ಲವೇ? ” ಎಂಬ ಜಟಿಲ ಪ್ರಶ್ನೆಗೆ ನಾಗರಿಕ ಜಗತ್ತಿನಲ್ಲಿ ಉತ್ತರ ಶೋಧಿಸುವುದಾದರೂ ಎಲ್ಲಿ  ?

ಪಾತಕ ಜಗತ್ತಿನ ಒಳಗೆ ಒಂದು ರೀತಿಯ ರಾಜಕೀಯ ಇರುವಂತೆಯೇ ರಾಜಕೀಯ ವಲಯದಲ್ಲೂ ಸಹ ಒಂದು ಪಾತಕ ಜಗತ್ತು ಸಣ್ಣದಾಗಿಯಾದರೂ ಮನೆ ಮಾಡಿಕೊಂಡಿರುವುದು ಭಾರತೀಯ ಪ್ರಜಾಪ್ರಭುತ್ವದ ದುರಂತ. ರಾಜಕಾರಣವನ್ನು ಇದರಿಂದ ಮುಕ್ತಗೊಳಿಸುವ ಒಂದು ಅಭಿಯಾನವನ್ನೇ ಹಲವು ದಶಕಗಳ ಹಿಂದೆ ನಡೆಸಲಾಗಿತ್ತು. ರಾಜಕೀಯದ ಅಪರಾಧೀಕರಣವನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಪಣ ತೊಟ್ಟ ಅನೇಕರು ಇಂದು ಈ ಅಪರಾಧ ಲೋಕದ ನಡುವೆಯೇ ಅಧಿಕಾರ ಪೀಠಗಳಲ್ಲಿ ಸ್ಥಾಪಿತರಾಗಿದ್ದಾರೆ. ಯಾವ ಕೃತ್ಯವನ್ನು ಅಪರಾಧ ಎಂದು ನಿರ್ವಚನೆ ಮಾಡುವುದು ? ಒಂದು ಸ್ವಸ್ಥ ಸಮಾಜದ ಚೌಕಟ್ಟಿನಲ್ಲಿ ಕಳ್ಳತನ, ಲೂಟಿ, ದರೋಡೆ, ಕೊಲೆ, ಹತ್ಯೆ, ಗುಂಪು ಹಲ್ಲೆ, ಅತ್ಯಾಚಾರ, ಅಸ್ಪೃಶ್ಯತೆ, ಗುಂಪು ಥಳಿತ, ಸಾಮಾಜಿಕ ಬಹಿಷ್ಕಾರ ಇವೆಲ್ಲವೂ ಅಪರಾಧಗಳೇ ಆಗುತ್ತವೆ. ಹಾಗೆಯೇ ಸಾಂಸ್ಥಿಕ ಲೂಟಿ ಎನ್ನಬಹುದಾದ ಲಂಚಗುಳಿತನ ಮತ್ತು ಹಣಕಾಸು ಭ್ರಷ್ಟಾಚಾರವೂ ಸಹ ಅಪರಾಧ ಎನಿಸಿಕೊಳ್ಳುತ್ತದೆ. ವಾಣಿಜ್ಯ ಪ್ರಪಂಚದಲ್ಲಿ, ಮಾರುಕಟ್ಟೆ ಚೌಕಟ್ಟಿನಲ್ಲಿ ನಡೆಯುವ ಅಕ್ರಮಗಳೂ ಸಹ ಅಪರಾಧಗಳೇ ಆಗುತ್ತವೆ.

ವಿಶಾಲ ಸಮಾಜದಲ್ಲಿರುವ ನಾಗರಿಕರು ತಮ್ಮದೇ ಆದ ಸ್ವಾರ್ಥ ಹಿತಾಸಕ್ತಿಗಾಗಿ ಅಥವಾ ಪಕ್ಷ/ವ್ಯಕ್ತಿ/ತತ್ವ/ಸಿದ್ಧಾಂತಗಳಿಗೆ ಬದ್ಧರಾಗಿ ಈ ಅಪರಾಧಗಳನ್ನು ಸಮರ್ಥಿಸಿಕೊಳ್ಳುವ ಒಂದು ವಾತಾವರಣದಲ್ಲಿ ನಾವಿದ್ದೇವೆ. ಹಾಗಾಗಿಯೇ ಮೂರು ವರ್ಷಗಳಲ್ಲಿ ಎಂಟುನೂರು ಪಟ್ಟು ಸಂಪತ್ತು ವೃದ್ಧಿಯಾದರೂ ಅಂತಹ ಉದ್ಯಮಿ ನಮ್ಮ ಕಣ್ಣಿಗೆ ಅಪರಾಧಿಯಾಗಿ ಕಾಣುವುದಿಲ್ಲ. ಹಾಗೆಯೇ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಿದ ವ್ಯಕ್ತಿಗಳೂ ಸಹ ಅವರ ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ-ಆಧ್ಯಾತ್ಮಿಕ ಸ್ಥಾನಮಾನಗಳಿಗೆ ಅನುಗುಣವಾಗಿ ಸನ್ಮಾನಿತರಾಗಿಬಿಡುತ್ತಾರೆ. ಹಂತಕರನ್ನೂ ಸಹ ಸನ್ನಡತೆಯ ಗೌರವಕ್ಕೆ ಪಾತ್ರರಾಗಿಸುವಾಗ ನಾಗರಿಕ ಜಗತ್ತು ಮೌನವಾಗಿಯೇ ಇರುತ್ತದೆ.. ಬಾಹ್ಯ ಸಮಾಜದ ಈ ಮೌನ ಅಥವಾ ನಿಷ್ಕ್ರಿಯ ಸಮ್ಮತಿಯ ಪರಿಣಾಮವಾಗಿಯೇ ಅಧಿಕಾರ ರಾಜಕಾರಣದಲ್ಲೂ ಇಂತಹವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಂವಿಧಾನಿಕ ನೈತಿಕತೆ ಮತ್ತು ಸಾಮಾಜಿಕ ನಿಷ್ಠೆ ಎರಡೂ ಸಹ ಇಲ್ಲಿ ಮರೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಭಾರತದ ರಾಜಕಾರಣವನ್ನು ಅಪರಾಧೀಕರಣದಿಂದ ಮುಕ್ತವಾಗಿಸಬೇಕಾದರೆ, ಬಾಹ್ಯ ಸಮಾಜದ ನಾಗರಿಕರ ನಡುವೆ ಸಂವಿಧಾನ ಪ್ರಜ್ಞೆ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆ, ಸಾಮಾಜಿಕ-ಸಾಂಸ್ಕೃತಿಕ ಅರಿವು ಹಾಗೂ ಮಾನವೀಯತೆಯ ನೆಲೆಗಳು ಗಟ್ಟಿಯಾಗಬೇಕು. ಅಧಿಕಾರ ರಾಜಕಾರಣದಿಂದಾಚೆಗೆ, ವ್ಯಕ್ತಿ-ಪಕ್ಷ-ತತ್ವ ನಿಷ್ಠೆಗಳಿಂದಾಚೆಗೆ ಒಂದು ಸುಂದರ ಜಗತ್ತು ನಿರ್ಮಿಸುವುದು ನಾಗರಿಕರ ಆದ್ಯತೆಯಾಗಬೇಕು. ಇಂದಿನ ಯುವ ಪೀಳಿಗೆಯ ನಡುವೆ ಈ ಸಂವೇದನೆಯ ಸೇತುವೆಗಳನ್ನು ನಿರ್ಮಿಸುವ ಮೂಲಕ ಅರಿವು ಮೂಡಿಸುವ ಪ್ರಯತ್ನಗಳು ನಡೆಯಬೇಕು. ಆಗ ಮಾತ್ರ ಭಾರತದ ರಾಜಕಾರಣ ಹಾಗೂ ಆಡಳಿತ ವ್ಯವಸ್ಥೆ ಅಪರಾಧ ಮುಕ್ತ, ಅಪರಾಧಿ ಮುಕ್ತವಾಗಲು ಸಾಧ್ಯವಾದೀತು.

ಬೆಕ್ಕು-ಕೊರಳು-ಗಂಟೆ ಜೊತೆಗೆ ದಾರವೂ ಇದೆ, ಕಟ್ಟುವ ಯುವ ಕೈಗಳನ್ನು ಶೋಧಿಸಬೇಕಿದೆ.

ನಾ ದಿವಾಕರ

Tags: cabinetCriminal PoliticiansCriminal PoliticsCriminalsGovernment FormationPolitician
Previous Post

ಕರ್ನಾಟಕದಲ್ಲಿ ಮಾಧ್ಯಮವ್ಯಾಧಿ

Next Post

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಸ್ಪತ್ರೆಗೆ ದಾಖಲು

Related Posts

ಲಿಂಗಾಯತರು ಕೈಗಾರಿಕಾ  ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ
Top Story

ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

by ಪ್ರತಿಧ್ವನಿ
January 29, 2026
0

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ,...

Read moreDetails
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

January 28, 2026
ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

January 26, 2026

ಬೆಂಗಳೂರಿನ ಹೃದಯಭಾಗದಲ್ಲೊಂದು ಅತ್ಯಾಕರ್ಷಕ ಹಾಗೂ ಸುಸಜ್ಜಿತ ಸಿನಿಮಾ ಮಲ್ಟಿಪ್ಲೆಕ್ಸ್ “AMB ಸಿನಿಮಾಸ್”(ಕಪಾಲಿ ಮಾಲ್)

January 22, 2026
Eshwar Khandre: ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ ಖಂಡ್ರೆ..!!

Eshwar Khandre: ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ ಖಂಡ್ರೆ..!!

January 21, 2026
Next Post
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಸ್ಪತ್ರೆಗೆ ದಾಖಲು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಸ್ಪತ್ರೆಗೆ ದಾಖಲು

Please login to join discussion

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

February 2, 2026
ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada