ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ಬೇರ್ಪಡುವ ವದಂತಿಗಳ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೋಯೆಬ್ ಮಲ್ಲಿಕ್ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.

ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಕೇಳಿ ಬಂದಿತ್ತು. ಅಲ್ಲದೇ ಕಳೆದ ವರ್ಷ ʻಹುಟ್ಟುಹಬ್ಬದ ಶುಭಾಶಯಗಳುʼ ಎಂದು ಬರೆದುಕೊಂಡಿದ್ದ ಶೋಯಬ್ ಮಲಿಕ್ ಬರೆದು, ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ನಡುವೆ ಸನಾ ಜಾವೇದ್ ಕೂಡ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸನಾ ಶೋಯೆಬ್ ಮಲಿಕ್ ಎಂದು ಬದಲಾಯಿಸಿದ್ದಾರೆ. ಸನಾ ಜಾವೇದ್ 2020ರಲ್ಲಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು ಮತ್ತು 2023ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು.
ಈ ಹಿಂದೆ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ಮುಸ್ಲಿಂ ಸಾಂಪ್ರದಾಯದಂತೆ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ನಂತರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ವಲಿಮಾದಲ್ಲೂ ಮದುವೆ ಸಮಾರಂಭ ನಡೆಸಿಕೊಂಡಿದ್ದರು. ಈ ದಂಪತಿಯ ಮೊದಲ ಮಗು ಇಜಾನ್ 2018ರಲ್ಲಿ ಜನಿಸಿದರು.