ಬೆಂಗಳೂರು (Bengaluru): ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಮಂಡ್ಯ ಲೋಕಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನದ ಅಲೆಯನ್ನು ಎಬ್ಬಿಸಿದೆ. ಈ ನಡುವೆ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (C.P.Yogeshwar) ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರನ್ನು (H.D.Devegowda) ಭೇಟಿಯಾಗಿದ್ದಾರೆ.
ಮಂಡ್ಯ ತಮ್ಮ ಪಕ್ಷಕ್ಕೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ , ಹೀಗಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (sumalatha ambareesh) ಅವರಿಗೆ ಬಿಜೆಪಿ ಬೇರೆಡೆ ಅವಕಾಶ ಕಲ್ಪಿಸಬೇಕಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಸ್ಥಾನ ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಬಿಜೆಪಿ ಸಮೀಕರಣದಿಂದ ಎಚ್ಚೆತ್ತ ಬಿಜೆಪಿ ಎಂಎಲ್ ಸಿ ಸಿ.ಪಿ. ಯೋಗೇಶ್ವರ್ ತರಾತುರಿಯಲ್ಲಿ ದೇವೇಗೌಡರ ಮನೆ ಕದ ತಟ್ಟಿದ್ದಾರೆ. ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದ ಯೋಗೇಶ್ವರ್ ಅವರು ಸುಮಾರು 2 ಗಂಟೆಗಳ ಕಾಲ ದೇವೇಗೌಡರ ಜೊತೆ ಚರ್ಚಿಸಿದ್ದಾರೆ.
2009ರ ಲೋಕಸಭೆ ಚುನಾವಣೆಯಲ್ಲಿ ಯೋಗೇಶ್ವರ್ 3.6 ಲಕ್ಷ ಮತ ಗಳಿಸಿದ್ದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D. K umarswamy) 4.9 ಲಕ್ಷ ಮತ ಗಳಿಸಿದ್ದರು. ಹೀಗಾಗಿ ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ-ಜೆಡಿಎಸ್ ನಿಂದ ನಾನೇ ಅಭ್ಯರ್ಥಿಯಾಗುವುದು ಸೂಕ್ತ ಎಂದು ಗೌಡರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು, ಏಕೆಂದರೆ ತಾವು ಎರಡೂ ಪಕ್ಷಗಳ ಮತಗಳನ್ನು ಕಸಿದುಕೊಳ್ಳಬಹುದು ಎಂದು ವಿವರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರೊಂದಿಗೆ ಈ ಹಿಂದೆ ಮಾತುಕತೆ ನಡೆಸಿದ್ದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap simha) ಸೇರಿದಂತೆ ಹಳೆ ಮೈಸೂರು ಭಾಗದ ಅನೇಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಯೋಗೇಶ್ವರ್ ಕೂಡ ಸೇರಿದ್ದಾರೆ. ಈಗಾಗಲೇ ಹಲವು ಬಿಜೆಪಿ ಮುಖಂಡರು ಗೌಡರನ್ನು ಭೇಟಿ ಮಾಡಿದ್ದಾರೆ.
ಏಕೆಂದರೆ ಅವರು ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲೂ ದೇವೇಗೌಡರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ನಗರ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಮಿಶ್ರಣವನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರದಿಂದ ಸುಮಲತಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸುಮಲತಾ ಅವರು ಮಂಡ್ಯಕ್ಕಾಗಿ ಪ್ರಬಲ ಲಾಬಿ ನಡೆಸಿದ್ದರು. ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (J.P.Nadda) ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ (B.L.Santhosh) ಅವರನ್ನು ಭೇಟಿ ಮಾಡಿದ್ದರು.
ಬೆಂಗಳೂರು ಉತ್ತರ ಕ್ಷೇತ್ರವನ್ನು ಸುಮಲತಾ ಅವರಿಗೆ ನೀಡಲಾಗುತ್ತಿಲ್ಲ, ಹಾಲಿ ಸಂಸದ ಡಿ.ವಿ.ಸದಾನಂದ ಗೌಡರು (D.V.Sadanandagowda) ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಸಾಧ್ಯತೆಯಿರುವುದರಿಂದ ಆ ಕ್ಷೇತ್ರಕ್ಕೆ ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸುಮಲತಾ ಅವರಿಗೆ ಉತ್ತಮ ಆಯ್ಕೆಯಾಗಿದ್ದು, ಹಾಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K.Suresh) ವಿರುದ್ಧ ಕಣಕ್ಕಿಳಿಯಲಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದರೆ ದಕ್ಷಿಣದ ರಾಜ್ಯಗಳಿಗೆ ಪ್ರತ್ಯೇಕ ರಾಷ್ಟ್ರ ಹುಡುಕುವ ಪರಿಸ್ಥಿತಿ ಎದುರಾಗಬಹುದು ಎಂದು ಸುರೇಶ್ ಕಿಡಿ ಕಾರಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಸುರೇಶ್ ಅವರನ್ನು ಸೋಲಿಸುವ ಅಭ್ಯರ್ಥಿಯ ಹುಡುಕಾಟದಲ್ಲಿದೆ.
#Mpelection #jds #bjp #mandya #bengaluru