ಗೋಹತ್ಯೆ ನಿಷೇಧ ಜಾರಿ ಬಳಿಕ ಮುದಿ ಹಾಗೂ ಅಶಕ್ತ ಹಸುಗಳನ್ನು ಸಾಕಲು ರೈತರು, ಹೈಣುಗಾರಿಕೆದಾರರು ಹೈರಾಣಾಗುತ್ತಿದ್ದಾರೆ. ಸರ್ಕಾರವೂ ಗೋವುಗಳಿಗೆ ಸರಿಯಾದ ಗೋಶಾಲೆಗಳನ್ನು ಅಗತ್ಯವಿರುವಷ್ಟು ತೆರೆಯದಿರುವುದರಿಂದ ಗೋ ಹತ್ಯೆ ನಿಷೇಧಿಸಿದ ರಾಜ್ಯಗಳಲ್ಲಿ ಬೀಡಾಡಿ ಹಸುಗಳ ಸಂಖ್ಯೆ ಅಧಿಕವಾಗಿದೆ. ಇಂತಹ ಬೀಡಾಡಿ ಹಸುಗಳು ಸಾರ್ವಜಿನಕರ ಮೇಲೆ ದಾಳಿ ಮಾಡುವ ವರದಿಗಳು ಪದೇ ಪದೇ ಆಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಕೂಡಾ ಇದಕ್ಕೆ ಹೊರತಲ್ಲ. ಇತ್ತೀಚೆಗಷ್ಟೇ, ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಮೆಹ್ಸಾನಾ ಜಿಲ್ಲೆಯ ಕಡಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ‘ತಿರಂಗ ಯಾತ್ರೆ’ ಮೆರವಣಿಗೆಯನ್ನು ಮುನ್ನಡೆಸುತ್ತಿರುವಾಗ ಬೀಡಾಡಿ ಹಸುವಿನಿಂದ ದಾಳಿಗೊಳಗಾಗಿದ್ದರು. ಇದೀಗ ಹದಿನೈದು ದಿನಗಳ ಬಳಿಕ, ಅದೇ ಪ್ರದೇಶದಲ್ಲಿ ಇನ್ನೆರಡು ಇಂತಹದ್ದೇ ಘಟನೆಗಳು ವರದಿಯಾಗಿದೆ.
ಆಗಸ್ಟ್ 28 ರಂದು ಎರಡು ಪ್ರತ್ಯೇಕ ಘಟನೆಗಳಲ್ಲಿ ಬಿಡಾಡಿ ಹಸುಗಳು ಇಬ್ಬರು ಯುವಕರ ಮೇಲೆ ದಾಳಿ ನಡೆಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೈಕ್ ನಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಬೀಡಾಡಿ ಹಸು ದಾಳಿ ಮಾಡುವ ವೀಡಿಯೊ ಕೂಡಾ ವೈರಲ್ ಆಗಿದೆ.
“ವೈರಲ್ ಆದ ವೀಡಿಯೊದಲ್ಲಿ, ಯುವಕನನ್ನು ದನ ತನ್ನ ಕೊಂಬುಗಳಿಂದ ಕೆಡವಿ ಹಾಕುತ್ತದೆ. ಯುವಕ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಹಸು ಆತನಿಗೆ ಹಲವಾರು ಬಾರಿ ಒದೆಯುತ್ತದೆ. ಸಾರ್ವಜನಿಕರು ಯುವಕನನ್ನು ರಕ್ಷಿಸಲು ಪ್ರಯತ್ನಿಸಿ, ಅಂತಿಮವಾಗಿ ಜನರು ಅದರೆಡೆಗೆ ಕಲ್ಲು ತೂರಾಟ ಆರಂಭಿಸಿದಾಗ, ಅದು ಆತನನ್ನು ಬಿಟ್ಟುಹೋಗುತ್ತದೆ, ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಇನ್ನೂ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಇದೇ ಪ್ರದೇಶದಲ್ಲಿ ನಡೆದ ಪುನರಾವರ್ತಿತ ಘಟನೆಯಾಗಿದ್ದು, ಅದಕ್ಕೂ ಮುನ್ನ ಬೆಳಗಿನ ಜಾವ 2 ಗಂಟೆಗೆ ಮತ್ತೊಬ್ಬ ಯುವಕನ ಮೇಲೆ ಹಸು ದಾಳಿ ಮಾಡಿತ್ತು.
ವಿಜಯ್ ರೂಪಾನಿ ಸಂಪುಟದ ಮಾಜಿ ಉಪಮುಖ್ಯಮಂತ್ರಿ ಪಟೇಲ್ ಕಾಡಿಯಲ್ಲಿ ಬಿಡಾಡಿ ಹಸುವಿನ ದಾಳಿಯಿಂದ ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಬಿಡಾಡಿ ಹಸುಗಳು ದಾರಿಹೋಕರ ಮೇಲೆ ದಾಳಿ ಮಾಡಿ, ಕೆಲವು ಸಂದರ್ಭಗಳಲ್ಲಿ ಸಾವಿಗೆ ಕಾರಣವಾಗುವ ಘಟನೆಗಳು ಗುಜರಾತ್‌ನಾದ್ಯಂತ ಹೆಚ್ಚುತ್ತಿವೆ ಎಂದು ವರದಿಯಾಗಿದೆ.
ಆಗಸ್ಟ್ 24 ರಂದು, ಗುಜರಾತ್ ಹೈಕೋರ್ಟ್ ನಗರ ಪ್ರದೇಶಗಳಲ್ಲಿ ಬಿಡಾಡಿ ದನಗಳನ್ನು ನಿಯಂತ್ರಿಸುವ ಅಗತ್ಯತೆಯ ಕುರಿತು ರಾಜ್ಯ ಸರ್ಕಾರ ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ ನಂತರ, ರಾಜ್ಯ ರಾಜಧಾನಿಯಿಂದ 400 ಬಿಡಾಡಿ ಹಸುಗಳನ್ನು ಬೇರೆಡೆಗೆ ವರ್ಗಾಯಿಸಲಾಯಿತು.
“ಹೈಕೋರ್ಟ್‌ಗೆ ನೀಡಿದ ಬದ್ಧತೆಯ ಪ್ರಕಾರ, ವಶಪಡಿಸಿಕೊಂಡ ಜಾನುವಾರುಗಳನ್ನು ಮೂರು ತಿಂಗಳವರೆಗೆ ಬಿಡುಗಡೆ ಮಾಡದಿರಲು AMC ನಿರ್ಧರಿಸಿದೆ” ಎಂದು ಸುದ್ದಿ ವರದಿಯೊಂದು ತಿಳಿಸಿದೆ.
ಈ ಜನವರಿಯಲ್ಲಿ, ನಗರ ಪ್ರದೇಶಗಳಲ್ಲಿ ಬಿಡಾಡಿ ಹಸುಗಳನ್ನು ನಿಯಂತ್ರಿಸುವ ಅಗತ್ಯತೆಯ ಅರ್ಜಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು, ಸುಮಾರು ಹನ್ನೆರಡು ಹಸುಗಳು ಹೈಕೋರ್ಟ್ ಆವರಣಕ್ಕೆ ತಾನು ಬರದಂತೆ ತಡೆಯುವ ಮೂಲಕ ತಮಗೂ ಇದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಯಿತು ಎಂದು ಹೇಳಿಕೆ ನೀಡಿದ್ದರು. “ಜಾರಿ ಸಂಸ್ಥೆಗಳು ಈ ಬಗ್ಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದರು.
ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಅರಿತುಕೊಂಡು, ರಾಜ್ಯ ಶಾಸಕಾಂಗವು ಮಾರ್ಚ್ 31 ರಂದು ನಗರ ಪ್ರದೇಶಗಳ ಮಸೂದೆ, 2022 ರಲ್ಲಿ ಗುಜರಾತ್ ಗೋವು ನಿಯಂತ್ರಣ (ಕೀಪಿಂಗ್ ಮತ್ತು ಮೂವಿಂಗ್) ಅನ್ನು ಅಂಗೀಕರಿಸಿತ್ತು. ಜಾನುವಾರು ಸಾಕಣೆ ಸಾಂಪ್ರದಾಯಿಕ ಉದ್ಯೋಗವಾಗಿರುವ ಮಾಲ್ಧಾರಿ ಸಮುದಾಯದವರು ಈ ಕ್ರಮವನ್ನು ವಿರೋಧಿಸಿದ್ದರಿಂದ, ಬಿಜೆಪಿ ಸರ್ಕಾರವು ಶೀಘ್ರದಲ್ಲೇ ಅದನ್ನು ತಡೆಹಿಡಿಯಬೇಕಾಯಿತು
ಮಾಲ್ಧಾರಿ ಸಮುದಾಯ ಬಿಜೆಪಿಗೆ ಪ್ರಬಲ ವೋಟ್ ಬ್ಯಾಂಕ್ ಆಗಿದೆ. ಜುಲೈ 2021 ರಲ್ಲಿ, ರಾಜ್ಯ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷರೂ ಆಗಿರುವ ಸಮುದಾಯದ ನಾಯಕ ಭೀಮಾ ರಬರಿ ಅವರು ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದ ನಂತರ, ಸಮುದಾಯದ ಮುಖಂಡರು ಅದರ ವಿರುದ್ಧ ಆಂದೋಲನವನ್ನು ಘೋಷಿಸಿದ್ದರು. ಸಮುದಾಯದ ಇಬ್ಬರು ಕಾಂಗ್ರೆಸ್ ಶಾಸಕರಾದ ರಘು ದೇಸಾಯಿ ಮತ್ತು ಲಖಾಭಾಯ್ ಭರವಾಡ್ ನೇತೃತ್ವದಲ್ಲಿ ಈ ಕ್ರಮವನ್ನು ನಡೆಸಲಾಯಿತು. ಈ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಗುಜರಾತ್‌ನಲ್ಲಿ ಸತತ ಐದನೇ ಬಾರಿಗೆ ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಆಡಳಿತಾರೂಢ ಬಿಜೆಪಿ, ಮಾಲ್ದಾರಿ ಸಮುದಾಯದೊಳಗಿನ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿ ಈ ಮಸೂದೆಯನ್ನು ತರಲು ಬಯಸುವುದಿಲ್ಲ ಎಂದು ವರದಿಯಾಗಿದೆ.
ಈ ನಡುವೆ, ಬಿಡಾಡಿ ದನಗಳ ಕಳ್ಳತನ ಕೂಡಾ ಹೆಚ್ಚಾಗುತ್ತಿವೆ. ಯಾರದ್ದೇ ಸುಪರ್ದಿಯಲ್ಲಿರದ ದನಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. ಇತ್ತೀಚೆಗೆ, ಬೀಡಾಡಿ ದನಗಳನ್ನು ಹಿಡಿಯಲು ಹೊರಟಿದ್ದ ವ್ಯಕ್ತಿಗಳ ಗುಂಪಿನ ಮೇಲೆ ಬಾಪೋಡ್ ಮತ್ತು ಕಪುರಾಯಿ ಸೇತುವೆಯ ಬಳಿ ಮಹಿಳೆಯರ ಗುಂಪೊಂದು ದಾಳಿ ಮಾಡಿತ್ತು.